ಹುಬ್ಬಳ್ಳಿ:
ಆರೋಗ್ಯಯುತ ಜೀವನಕ್ಕೆ ಪ್ರತಿಯೊಬ್ಬರೂ ಯೋಗ-ವ್ಯಾಯಾಮವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.ಇಲ್ಲಿನ ಬಿವಿಬಿ ಕಾಲೇಜಿನ ಬಯೋಟೆಕ್ನಾಲಜಿ ಸಭಾಂಗಣದಲ್ಲಿ ಆಶಾ ಡಯಾಬಿಟಿಕ್ ಟ್ರಸ್ಟ್ ಆ್ಯಂಡ್ ರಿಸರ್ಚ್ ಫೌಂಡೇಶನ್ ಹಾಗೂ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಮಧುಮೇಹ ಜಾಗೃತಿ ಮತ್ತು ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಜೀವನದಲ್ಲಿ ಸಮತೋಲನೆ, ಶಾಂತ ಚಿತ್ತ ಹೊಂದುವುದು ಅವಶ್ಯ. ಎಂತಹದ್ದೇ ಸಂದರ್ಭ ಬರಲಿ ಯಾವುದೇ ಕಾರಣಕ್ಕೂ ಒತ್ತಡಕ್ಕೆ ಒಳಗಾಗಬಾರದು. ಬಂದ ಕೆಟ್ಟ ಘಳಿಗೆಗೆ ಪರಿಹಾರವೂ ಇರುತ್ತದೆ ಎಂಬುದನ್ನು ಮರೆಯಬಾರದು ಎಂದರು.ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯರ ಆರೋಗ್ಯ ಸುಧಾರಣೆ ಜತೆಗೆ ವಿಶ್ವವೇ ಆರೋಗ್ಯದಿಂದಿರಬೇಕು ಎಂದು ಇಚ್ಛಿಸಿದರು. ವಿಶ್ವಸಂಸ್ಥೆ ಮೂಲಕ ವಿಶ್ವ ಯೋಗ ದಿನವನ್ನು ವಿಶ್ವಾದ್ಯಂತ ಆಚರಿಸುವಂತೆ ಮಾಡಿದರು. ಈಗ ನೂರಾರು ರಾಷ್ಟ್ರಗಳು ಯೋಗ ದಿನ ಆಚರಿಸುತ್ತಿವೆ. ಯೋಗ ಕಲಿತ ಗುರುಗಳಿಗೆ ವಿಶ್ವದೆಲ್ಲೆಡೆ ಮಾನ್ಯತೆ ಇದೆ ಎಂದು ಹೇಳಿದರು.
ಫೌಂಡೇಶನ್ ಕಾರ್ಯದರ್ಶಿ ಹಾಗೂ ಹೃದ್ರೋಗ ತಜ್ಞ ಡಾ. ಜಿ.ಬಿ. ಸತ್ತೂರ ಮಾತನಾಡಿ, ಭಾರತವು ಮಧುಮೇಹದ ರಾಜಧಾನಿಯಾಗಿದೆ. ಮಧುಮೇಹ ನಿಯಂತ್ರಣ ಹಾಗೂ ಬಾರದಂತೆ ಇರಲು ತೂಕ ಇಳಿಸಿಕೊಳ್ಳಬೇಕು. ಸ್ಕಿಪ್ಪಿಂಗ್, ಈಜು, ವೇಗದ ನಡಿಗೆ ರೂಢಿಸಿಕೊಳ್ಳಬೇಕು. ಆಹಾರ ಪದ್ಧತಿಯಲ್ಲಿ ಬದಲಾವಣೆ ತಂದುಕೊಳ್ಳಬೇಕು. ಒಟ್ಟಾರೆಯಾಗಿ ಜೀವನ ಶೈಲಿಯಲ್ಲಿ ಸುಧಾರಣೆ ಕಂಡುಕೊಳ್ಳಬೇಕು. ಇದರಿಂದ ಯಾವುದೇ ರೋಗದಿಂದ ದೂರ ಉಳಿಯಲು ಸಾಧ್ಯ ಎಂದರು.ಕೆಎಲ್‌ಇ ತಾಂತ್ರಿಕ ವಿವಿ ಉಪ ಕುಲಪಡಿ ಡಾ. ಪ್ರಕಾಶ ತೇವರಿ ಮಾತನಾಡಿದರು. ಇದೇ ವೇಳೆ ಉದ್ಯಮಿಗಳಾದ ಎಂ.ವಿ. ಕರಮರಿ, ಮಹೇಂದ್ರ ಟಕ್ಕರ್, ಜಯಪ್ರಕಾಶ ಟೆಂಗಿನಕಾಯಿ ಅವರನ್ನು ಸನ್ಮಾನಿಸಲಾಯಿತು. ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ, ಫೌಂಡೇಶನ್ ಅಧ್ಯಕ್ಷ ಮಹೇಂದ್ರ ವಿಕಂಶಿ, ಜಗದೀಶ ಮಠದ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.