)
ಕನ್ನಡಪ್ರಭ ವಾರ್ತೆ ಹಾಸನ
ನಗರದ ಗಹನ ಯೋಗ ಕೇಂದ್ರದಲ್ಲಿ ಶ್ರೀ ಕುವೆಂಪು ಮಹಿಳಾ ಸಂಘದ ಆಗಸ್ಟ್ ತಿಂಗಳ ಮಾಸಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ‘ಮಹಿಳೆಯರ ಆರೋಗ್ಯದಲ್ಲಿ ಯೋಗದ ಪಾತ್ರ’ ಕುರಿತು ಉಪನ್ಯಾಸ ನೀಡಿದ ಅವರು, ಆರೋಗ್ಯವೆಂದರೆ ಕೇವಲ ರೋಗವಿಲ್ಲದಿರುವುದಲ್ಲ. ಪಂಚೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ ಹಾಗೂ ಮನಸ್ಸು ಸಮತೋಲನದಿಂದ ಕಾರ್ಯನಿರ್ವಹಿಸುವ ಸ್ಥಿತಿಯೇ ನಿಜವಾದ ಆರೋಗ್ಯ ಎಂದು ವಿವರಿಸಿದರು. ಸಾಮಾನ್ಯವಾಗಿ ಮಹಿಳೆಯರು ಕುಟುಂಬದ ಜಂಜಾಟ, ಉದ್ಯೋಗ ಮತ್ತು ದಿನನಿತ್ಯದ ಕೆಲಸಗಳಲ್ಲಿ ತೊಡಗಿಸಿಕೊಂಡು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಆದರೆ ಪ್ರತಿಯೊಬ್ಬ ಮಹಿಳೆಯೂ ದಿನದ ಕೆಲವೇ ನಿಮಿಷಗಳಾದರೂ ಯೋಗಾಭ್ಯಾಸ, ಧ್ಯಾನ ಮತ್ತು ಪ್ರಾಣಾಯಾಮಕ್ಕೆ ಮೀಸಲಿಟ್ಟರೆ ಒತ್ತಡ ಕಡಿಮೆಯಾಗುವುದರ ಜೊತೆಗೆ ದೈಹಿಕ ಸಾಮರ್ಥ್ಯವೂ ಹೆಚ್ಚುತ್ತದೆ. ನಿಯಮಿತ ಯೋಗಾಭ್ಯಾಸದಿಂದ ಅನೇಕ ಜೀವನಶೈಲಿ ಸಂಬಂಧಿತ ಕಾಯಿಲೆಗಳನ್ನು ದೂರವಿಡಲು ಸಾಧ್ಯ ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ರಾಜೇಶ್ವರಿ ಹುಲ್ಲೇನಹಳ್ಳಿ ಮಾತನಾಡಿ, ಯೋಗವು ದೇಹ ಮತ್ತು ಮನಸ್ಸಿನ ಸಮತೋಲನವನ್ನು ಕಾಪಾಡುವ ಅತ್ಯುತ್ತಮ ಸಾಧನವಾಗಿದೆ. ನಿರಂತರ ಯೋಗಾಭ್ಯಾಸದಿಂದ ಅನೇಕ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ಔಷಧಿಗಳ ಅವಲಂಬನೆಯಿಲ್ಲದೆ ನಿಯಂತ್ರಿಸಬಹುದು. ಯೋಗವನ್ನು ಜೀವನದ ಭಾಗವಾಗಿಸಿಕೊಂಡವರು ನಿಜವಾದ ಅರ್ಥದಲ್ಲಿ ಆರೋಗ್ಯವಂತರಾಗಿರುತ್ತಾರೆ ಎಂದು ಹೇಳಿದರು. ಯೋಗ ಶಿಕ್ಷಕಿ ಶೋಭಾ ಯೋಗರಾಜ್ ಅವರು ಸ್ವತಃ ಯೋಗಾಭ್ಯಾಸದ ಮೂಲಕ ಆರೋಗ್ಯದ ಮಹತ್ವವನ್ನು ಅರಿತು, ನಂತರ ಯೋಗ ಶಿಕ್ಷಕಿಯಾಗಿ ರೂಪುಗೊಂಡು ನಗರದ ವಿವಿಧ ಬಡಾವಣೆಗಳಲ್ಲಿ ಹಲವು ಶಾಖೆಗಳನ್ನು ಆರಂಭಿಸಿ ಯೋಗ ಶಿಕ್ಷಕಿಯರ ಮೂಲಕ ಉಚಿತ ಯೋಗ ತರಬೇತಿ ನೀಡುತ್ತಿರುವ ಸಮಾಜಮುಖಿ ಕಾರ್ಯ ಶ್ಲಾಘನೀಯವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ಸಂಘದ ಅಧ್ಯಕ್ಷೆ ಹೇಮಲತಾ ಕಮಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಸದಸ್ಯೆಯರಾದ ಪದ್ಮ ಶರ್ಮಾ ಹಾಗೂ ದೇವಿಕಾ ರಾಣಿ ಕಾರ್ಯಕ್ರಮದ ಆತಿಥ್ಯ ವಹಿಸಿದ್ದರು. ಶಾಂತಲಾ ಪ್ರಾರ್ಥನೆ ನೆರವೇರಿಸಿದರು. ದೇವಿಕಾ ರಾಣಿ ಸ್ವಾಗತಿಸಿದರು. ಲತಾ ಜಗದೀಶ್ ಅತಿಥಿಗಳನ್ನು ಪರಿಚಯಿಸಿದರು. ಮಾಲಿನಿ ವಂದನಾರ್ಪಣೆ ಸಲ್ಲಿಸಿದರು. ಪದ್ಮ ಶರ್ಮಾ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸದಸ್ಯೆಯರು ಹಾಗೂ ಯೋಗಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.