ಹೊಸಪೇಟೆ ಸಮಾವೇಶ ಯಶಸ್ಸಿಗೆ ಜಮೀರ್‌ಗೆ ಮೆಚ್ಚುಗೆ

KannadaprabhaNewsNetwork |  
Published : May 25, 2025, 01:20 AM ISTUpdated : May 25, 2025, 11:18 AM IST
zameer ahmed khan

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ನಡೆದ ಸಾಧನಾ ಸಮಾವೇಶದ ಯಶಸ್ಸಿಗೆ ಶ್ರಮ ಹಾಕಿದ ವಿಜಯನಗರ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರಿಗೆ ಹೈಕಮಾಂಡ್ ಮೆಚ್ಚುಗೆ ದೊರಕಿದಂತಿದೆ.

 ಬೆಂಗಳೂರು:  ಮುಖ್ಯಮಂತ್ರಿ ಸಿದ್ದರಾ ಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ನಡೆದ ಸಾಧನಾ ಸಮಾವೇಶದ ಯಶಸ್ಸಿಗೆ ಶ್ರಮ ಹಾಕಿದ ವಿಜಯನಗರ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರಿಗೆ ಹೈಕಮಾಂಡ್ ಮೆಚ್ಚುಗೆ ದೊರಕಿದಂತಿದೆ.

ರಾಜ್ಯ ಕಾಂಗ್ರೆಸ್‌ನ ಅಲ್ಪಸಂಖ್ಯಾತರ ಪ್ರಭಾವಿ ನಾಯಕ ಜಮೀರ್‌ ಅಹಮದ್‌ಖಾನ್‌ ಅವರು ಹೈಕಮಾಂಡ್‌ ಹಾಗೂ ರಾಜ್ಯ ಕಾಂಗ್ರೆಸ್‌ ನೀಡುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದು, ವಿಜಯನಗರದ ಪಕ್ಷದ ನಾಯಕರನ್ನೂ ಒಗ್ಗೂಡಿಸಿ ಲಕ್ಷಾಂತರ ಕಾರ್ಯಕರ್ತರಿಗೆ ನೀರು, ಮಜ್ಜಿಗೆ, ಊಟ ಸೇರಿ ಎಲ್ಲಾ ವ್ಯವಸ್ಥೆಯ ಖುದ್ದು ಮುತುವರ್ಜಿ ವಹಿಸಿದ್ದರು. ಪಕ್ಷ ಹಾಗೂ ಸರ್ಕಾರ ಕಾರ್ಯಕ್ರಮದ ಯಶಸ್ಸಿನ ಕುರಿತು ಜಮೀರ್‌ ತೋರಿದ ಬದ್ಧತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ವರಿಷ್ಠರು ಶ್ಲಾಘಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಸಮಾವೇಶ ಸಿದ್ಧತೆಯ ರೂವಾರಿ:

ಜಮೀರ್‌ ಅವರ ಸಂಘಟನಾ ಚತುರತೆ ಕಾರಣಕ್ಕಾಗಿಯೇ ಹೊಸಪೇಟೆ ಸಮಾವೇಶದ ಸಂಘಟನೆಯ ಸಂಪೂರ್ಣ ಉಸ್ತುವಾರಿಯನ್ನು ಜಮೀರ್‌ ಅವರ ಹೆಗಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಕಿದ್ದರು. ಮೊದಲು ಎಲ್ಲಾ ಸಿದ್ಧತೆ ಪೂರ್ಣಗೊಂಡ ಬಳಿಕ ಆಪರೇಷನ್‌ ಸಿಂದೂರ ಹಿನ್ನೆಲೆಯಲ್ಲಿ ಸಮಾವೇಶ ಮುಂದೂಡಿಕೆಗೆ ನಿರ್ಧರಿಸಲಾಗಿತ್ತು. ಬಳಿಕ ಕದನ ವಿರಾಮದಿಂದ ಮತ್ತೆ ಸಮಾವೇಶ ಮೇ 20ಕ್ಕೆ ನಡೆಸುವ ನಿರ್ಧಾರ ಮಾಡಲಾಯಿತು. ಆದರೂ ಕಡಿಮೆ ಅವಧಿಯಲ್ಲೇ ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮ ಆಯೋಜಿಸಲು ಜಮೀರ್‌ ಶ್ರಮವಹಿಸಿದರು. ಹೀಗಾಗಿ ಹೈಕಮಾಂಡ್‌ ಹಾಗೂ ರಾಜ್ಯ ನಾಯಕರು ಶ್ಲಾಘಿಸಿದ್ದಾರೆ.

ರಾಜ್ಯ ಕಾಂಗ್ರೆಸ್‌ ಅಲ್ಪಸಂಖ್ಯಾತ ನಾಯಕ:

ಕಾಂಗ್ರೆಸ್‌ನಲ್ಲಿ ಜಮೀರ್‌ ಅಹಮದ್‌ ಮುಸ್ಲಿಂ ಸಮುದಾಯದ ಮತ ಬ್ಯಾಂಕ್‌ನ ಪ್ರಮುಖ ಮುಖ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಬಳಗದ ಜಮೀರ್‌ ಕಳೆದ ವಿಧಾನಸಭೆ ಚುನಾವಣೆಯಿಂದಲೂ ಒಂದಲ್ಲಾ ಒಂದು ಸಂದರ್ಭದಲ್ಲಿ ಹೈಕಮಾಂಡ್‌ ನೀಡಿರುವ ಕೆಲಸ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಜಾಫರ್‌ ಷರೀಫ್‌ ಬಳಿಕ ಅಲ್ಪಸಂಖ್ಯಾತರನ್ನು ಪ್ರಭಾವಿಸುವ ನಾಯಕರಾಗಿ ರೂಪುಗೊಂಡಿರುವ ಜಮೀರ್ ಅವರನ್ನು ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಕ್ಷೇತ್ರ ಹಾಗೂ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲೂ ಹೈಕಮಾಂಡ್‌ ಬಳಸಿಕೊಂಡಿದೆ. ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಜತೆಗೆ ವಸತಿ ಖಾತೆ ಹಾಗೂ ಬಳ್ಳಾರಿ, ವಿಜಯನಗರ ಜಿಲ್ಲೆಗಳ ಉಸ್ತುವಾರಿಯಾಗಿ ಸವಾಲಿನ ಕೆಲಸವನ್ನು ಅವರು ಸೂಕ್ಷ್ಮವಾಗಿ ನಿಭಾಯಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಡವರ ಸಮಸ್ಯೆ ಕಂಡು ಮರುಗುವ ಜಮೀರ್‌ ಅವರಿಗೆ ಜ್ಯಾತ್ಯತೀತವಾಗಿ ಅಭಿಮಾನಿ ವರ್ಗ ಇದೆ. ಇತ್ತೀಚೆಗೆ ಜಮೀರ್‌ ಅಹಮದ್‌ ತಮ್ಮ ಭಾಷಣಗಳ ಆರಂಭದಲ್ಲಿ ಜೈ ಭೀಮ್‌ ಎಂದು ಹೇಳುವುದನ್ನು ರೂಢಿಸಿಕೊಂಡಿದ್ದಾರೆ. ಅಲ್ಪಸಂಖ್ಯಾತರ ನಾಯಕನಾಗಿರುವ ಜತೆಗೆ ಇತರೆ ಸಮುದಾಯಗಳು ಅದರಲ್ಲೂ ವಿಶೇಷವಾಗಿ ದಲಿತ ಹಾಗೂ ಹಿಂದುಳಿದ ಸಮುದಾಯಗಳ ವಿಶ್ವಾಸ ಪಡೆಯುವ ಕಡೆಗೂ ಅವರು ಕಣ್ಣು ಹರಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಗಣಿ ಗದ್ದಲದಿಂದ ಹಿಡಿದು ವಿಜಯನಗರದ ಜಾತಿ ಸಮೀಕರಣವೂ ಸೂಕ್ಷ್ಮಾತಿ ಸೂಕ್ಷ್ಮ. ಇಂತಹ ಸವಾಲಿನ ಜಿಲ್ಲೆಯಲ್ಲಿನ ಕಾರ್ಯನಿರ್ವಹಣೆಯ ಟಾಸ್ಕ್‌ನಲ್ಲೂ ಜಮೀರ್‌ ಯಶ ಸಾಧಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಜತೆಗೆ ವಕ್ಫ್‌ ಆಸ್ತಿ ವಿಚಾರದಲ್ಲಿ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ ಎಂಬ ಜಮೀರ್‌ ಅವರ ಸ್ಪಷ್ಟ ನಿರ್ಧಾರ, ‘ಅಲ್ಲಾ ಮೇಲಾಣೆ, ನಾನೇ ಸೂಸೈಡ್‌ ಬಾಂಬ್‌ ಹಾಕೊಂಡು ಪಾಕ್‌ ಮೇಲೆ ಯುದ್ಧ ಮಾಡ್ತೀನಿ'  ಎಂಬ ಹೇಳಿಕೆ ಮೂಲಕ ತೋರಿದ ದೇಶಭಕ್ತಿ ಜಾತಿ-ಧರ್ಮ ಮೀರಿ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ.

PREV
Read more Articles on

Latest Stories

ಒಂದೇ ದಿನ ಹಂಪಿಗೆ 25 ಸಾವಿರಕ್ಕೂ ಅಧಿಕ ಪ್ರವಾಸಿಗರ ಆಗಮನ
ಕಿನ್ನಿಗೋಳಿಯಲ್ಲಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ
ರಾಬಕೋ ಅಧ್ಯಕ್ಷ ಸ್ಥಾನಕ್ಕೆ ಕೊಪ್ಪಳ ಶಾಸಕ ರಾಘವೇಂದ್ರ?