ಜನರ ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಜಾ ಸೇವಾ ಆಂದೋಲನ ಸಹಕಾರಿ: ಎಸಿ ಮೊಹ್ಮದ್ ಜಿಲಾನಿ

KannadaprabhaNewsNetwork |  
Published : Sep 13, 2026, 02:45 AM IST
೧೨ಕೆಎನ್‌ಕೆ೨ಹುಲಿಹೈದರನಲ್ಲಿ ಆಯೋಜಿಸಲಾಗಿದ್ದ ಪ್ರಜಾಸೇವಾ ಕಾರ್ಯಕ್ರಮವನ್ನು ಸಹಾಯಕ ಆಯುಕ್ತ ಮೊಹ್ಮದ ಜಿಲಾನಿ ಖುರೇಶಿ ಉದ್ಘಾಟಿಸಿದರು.  | Kannada Prabha

ಸಾರಾಂಶ

ಜನಸಾಮಾನ್ಯರ ಸಮಸ್ಯೆಗಳ ಇತ್ಯರ್ಥಕ್ಕೆ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಪ್ರಜಾ ಸೇವಾ ಆಂದೋಲನ ಸಹಕಾರಿಯಾಗಿದೆ ಎಂದು ಸಹಾಯಕ ಆಯುಕ್ತ ಮೊಹ್ಮದ್ ಜಿಲಾನಿ ಖುರೇಶಿ ಹೇಳಿದರು.

ಕನಕಗಿರಿ: ಜನಸಾಮಾನ್ಯರ ಸಮಸ್ಯೆಗಳ ಇತ್ಯರ್ಥಕ್ಕೆ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಪ್ರಜಾ ಸೇವಾ ಆಂದೋಲನ ಸಹಕಾರಿಯಾಗಿದೆ ಎಂದು ಸಹಾಯಕ ಆಯುಕ್ತ ಮೊಹ್ಮದ್ ಜಿಲಾನಿ ಖುರೇಶಿ ಹೇಳಿದರು.

ತಾಲೂಕಿನ ಹುಲಿಹೈದರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ನವಲಿ ಹೋಬಳಿ ಮಟ್ಟದ ಪ್ರಜಾ ಸೇವೆ ಆಂದೋಲನ ಉದ್ಘಾಟಿಸಿ ಮಾತನಾಡಿದರು.ಪ್ರತಿ ಶನಿವಾರ ಹೋಬಳಿ ಮಟ್ಟದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಿ, ಪರಿಹಾರ ಕಂಡುಕೊಳ್ಳಬಹುದಾಗಿದೆ. ಪ್ರತಿ ಬುಧವಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತಾಲೂಕು ಮಟ್ಟದಲ್ಲಿ ಸಮಸ್ಯೆ ಪರಿಹಾರಕ್ಕೆ ಆಂದೋಲನ ನಡೆಸಲಾಗುತ್ತದೆ ಎಂದರು.

ಗ್ರಾಪಂ ಮಾಜಿ ಉಪಾಧ್ಯಕ್ಷ ಜಗದೀಶಪ್ಪ ಗದ್ದಿ ಮಾತನಾಡಿ, ಕೃಷ್ಣ ಬಿ-ಸ್ಕಿಮ್ ಅಡಿಯಲ್ಲಿ ಈಗಾಗಲೇ ಕನಕಗಿರಿ ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿನ ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಕನಕಗಿರಿ ತಾಲೂಕಿನ ಲಾಯದುಣಸಿ ಕೆರೆಗೆ ನೀರು ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ರೈತರು ಅನೇಕ ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಇನ್ನೂ ಹುಲಿಹೈದರ ಗ್ರಾಪಂ ವ್ಯಾಪ್ತಿಯ ಜೆಜೆಎಂ ಯೋಜನೆಯಡಿ ನೀರು ಸರಬರಾಜು ಆಗುತ್ತಿಲ್ಲ. ಇದಕ್ಕೆ ಕೂಡಲೇ ಉತ್ತರಿಸುವಂತೆ ಗ್ರಾಮಸ್ಥರೆಲ್ಲರೂ ಸೇರಿ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.

ಕಂದಾಯ ಇಲಾಖೆ ಒಳಗೊಂಡು ಪ್ರಮುಖ ಇಲಾಖೆಯ ಕೌಂಟರ್ ನಲ್ಲಿ ೨೪ ಅರ್ಜಿ ಸ್ವೀಕೃತಗೊಂಡಿವೆ. ಶಿಕ್ಷಣ ಇಲಾಖೆಯ ೧೦ ಹಾಗೂ ಸಿಡಿಪಿಒ ಕಚೇರಿಯ ೨ ಸೇರಿ ಒಟ್ಟು ೬೦ ಅರ್ಜಿ ಬಂದಿವೆ. ಎಲ್ಲ ಅರ್ಜಿಗಳನ್ನು ನಿಯಮಾನುಸಾರ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ನಿಮಯದಂತೆ ಮುಂದಿನ ೩ ದಿನದಲ್ಲಿ ಪರಿಹರಿಸಲಾಗುವುದು. ಪರಿಹಾರ ಆಗದ ಅರ್ಜಿಗಳಿಗೆ ಸೂಕ್ತ ಹಿಂಬರಹ ನೀಡಲಾಗುವುದು ಎಂದು ತಹಸೀಲ್ದಾರ್ ಚಂದ್ರಶೇಖರ ಗಾಳಿ ಮಾಹಿತಿ ನೀಡಿದರು.

ತಾಪಂ ಇಒ ಕೆ. ರಾಜಶೇಖರ, ಪಿಐ ವೀರಣ್ಣ ಹಳ್ಳಿ, ಎಪಿಎಂಸಿ ಕಾರ್ಯದರ್ಶಿ ಸಾವಿತ್ರಿ ಪಾಟೀಲ್, ಸಿಡಿಪಿಒ ವಿಜಯಲಕ್ಷ್ಮೀ ಹಿರೇಮಠ, ವೈದ್ಯಾಧಿಕಾರಿ ಶರಣಪ್ಪ ಚಕೋಟಿ, ಖಜಾನೆ ಸಹಾಯಕ ಅಧಿಕಾರಿ ದುರ್ಗಾಸಿಂಗ್, ಅಬಕಾರಿ ನಿರೀಕ್ಷಕ ಶಶಿಧರ ಇತರರಿದ್ದರು.

ಜನರಿಗಿಂತ ಸಿಬ್ಬಂದಿಯೇ ಹೆಚ್ಚು

ಹುಲಿಹೈದರನಲ್ಲಿ ನಡೆದ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಸಮಸ್ಯೆ ಹೇಳಿಕೊಳ್ಳಲು ಬರುವ ಸಾರ್ವಜನಿಕರಿಗಿಂತ ಅಧಿಕಾರಿ, ಸಿಬ್ಬಂದಿ ವರ್ಗವೇ ಹೆಚ್ಚಿರುವುದು ಕಂಡು ಬಂದಿತು. ಊಟದ ಬಳಿಕವಂತೂ ವೇದಿಕೆ ಮುಂಭಾಗದಲ್ಲಿ ನಾನಾ ಇಲಾಖೆಯ ಸಿಬ್ಬಂದಿ ಬಿಟ್ಟರೆ, ಖಾಲಿ ಕುರ್ಚಿಗಳೇ ಕಾಣಸಿಗುತ್ತಿದ್ದವು. ಸಾರ್ವಜನಿಕರನ್ನು ಹುಡುಕುವ ಪರಿಸ್ಥಿತಿ ಅಧಿಕಾರಿಗಳಿಗೆ ಬಂದಿತ್ತು. ವೇದಿಕೆ ಮುಂಭಾಗದಲ್ಲಿ ಖಾಲಿ ಖಾಲಿ ಕಾಣುತ್ತಿದ್ದರಿಂದ ಉಪವಿಭಾಗಧಿಕಾರಿಗಳು ಕೆಲ ಹೊತ್ತು ಧ್ವನಿವರ್ಧಕದಲ್ಲಿ ಸಾರ್ವಜನಿಕರನ್ನು ಕರೆದರು. ಆದರೆ, ಜನ ಇಲ್ಲದಿರುವ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಅವರು ಧ್ವನಿವರ್ಧಕದಿಂದ ದೂರ ಸರಿದರು.

ಹುಲಿಹೈದರ ಗ್ರಾಮದಲ್ಲಿ ಪ್ರಜಾ ಸೇವೆ ಆಂದೋಲನ ನಡೆಸುವ ಕುರಿತು ಸಾರ್ವಜನಿಕರಿಗೆ ಮಾಹಿತಿ ಇರಲಿಲ್ಲ. ಇದಕ್ಕೆ ಪೂರಕವಾಗಿ ತಾಲೂಕಾಡಳಿತ ಪ್ರಚಾರ ಕೈಗೊಳ್ಳಬೇಕಿತ್ತು. ಪ್ರಚಾರದ ಸಮಸ್ಯೆಯಿಂದಾಗಿ ಜನತೆ ಆಂದೋಲನದಲ್ಲಿ ಭಾಗಿಯಾಗಿಲ್ಲ. ಅಕ್ರಮ ಮದ್ಯ ಮಾರಾಟದ ದೂರು ಬಂದ ತಕ್ಷಣ ಪೊಲೀಸರು ಅಂಗಡಿಗಳಿಗೆ ತೆರಳುವಷ್ಟರಲ್ಲಿಯೇ ಮಾರಾಟಗಾರರಿಗೆ ಮಾಹಿತಿ ದೊರೆತಿದ್ದರಿಂದ ಅಂಗಡಿಗಳು ಮುಚ್ಚಿದ್ದರು. ಕಾಟಾಚಾರಕ್ಕೆ ಸಭೆ ಆಯೋಜಿಸಿದಂತಾಗಿತ್ತು ಎಂದು ರೈತ ಮುಖಂಡ ಸಣ್ಣ ಹನುಮಂತಪ್ಪ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೋಕರ್ಣ ಹೋಬಳಿ ಮಟ್ಟದ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮ
ಅತಿ ಶೀತ, ಉಷ್ಣ ನೀರು ಸೇವನೆ ಆರೋಗ್ಯಕ್ಕೆ ಹಾನಿಕರ: ರಾಘವೇಶ್ವರ ಭಾರತೀ ಮಹಾಸ್ವಾಮಿಗಳು