ಸಚಿವ ಜಾರಕಿಹೊಳಿ ಮೇಲೆ ದ್ವೇಷ ರಾಜಕಾರಣ ನಿಲ್ಲಲಿ: ನುಮೇಶ ನಾಯಕ

KannadaprabhaNewsNetwork |  
Published : Sep 13, 2026, 02:45 AM IST
ಪೋಟೋ                                                                          ಕನಕಗಿರಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗಂಗಾಧರಸ್ವಾಮಿ ಮಾತನಾಡಿದರು.  | Kannada Prabha

ಸಾರಾಂಶ

ಶಾಸಕ ನಾಗೇಂದ್ರ ಬಳಿಕ ಸಚಿವ ಸತೀಶ ಜಾರಕಿಹೊಳಿ ಹಾಗೂ ಅವರ ಕುಟುಂಬಸ್ಥರ ಮೇಲೆ ಕೆಲ ದುಷ್ಟ ಶಕ್ತಿಗಳು ರಾಜಕೀಯ ದುರುದ್ದೇಶದಿಂದ ಇಡಿ ಅಧಿಕಾರಿಗಳನ್ನು ಬಿಟ್ಟಿದ್ದಾರೆ ಎಂದು ಜಿಪಂ ಮಾಜಿ ಸದಸ್ಯ ಹನುಮೇಶ ನಾಯಕ ಆರೋಪಿಸಿದ್ದಾರೆ.

ಕನಕಗಿರಿ: ಶಾಸಕ ನಾಗೇಂದ್ರ ಬಳಿಕ ಸಚಿವ ಸತೀಶ ಜಾರಕಿಹೊಳಿ ಹಾಗೂ ಅವರ ಕುಟುಂಬಸ್ಥರ ಮೇಲೆ ಕೆಲ ದುಷ್ಟ ಶಕ್ತಿಗಳು ರಾಜಕೀಯ ದುರುದ್ದೇಶದಿಂದ ಇಡಿ ಅಧಿಕಾರಿಗಳನ್ನು ಬಿಟ್ಟಿದ್ದಾರೆ ಎಂದು ಜಿಪಂ ಮಾಜಿ ಸದಸ್ಯ ಹನುಮೇಶ ನಾಯಕ ಆರೋಪಿಸಿದ್ದಾರೆ.

ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಅನುಯಾಯಿ, ಸತತ ೪ನೇ ಬಾರಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಸತೀಶ ಜಾರಕಿಹೊಳಿ ಅವರು, ರಾಜ್ಯದೆಲ್ಲೆಡೆ ಅನೇಕ ಸಂಘ-ಸಂಸ್ಥೆಗಳ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ. ಬಡ ಹಾಗೂ ಹಿಂದುಳಿದ ಮಕ್ಕಳಿಗೆ ಉಚಿತ ತರಬೇತಿ ನೀಡುವ ಮೂಲಕ ಆಶಾಕಿರಣರಾಗಿದ್ದಾರೆ. ವಾಲ್ಮೀಕಿ ಸಮಾಜದ ನಾಯಕರಾಗಿರುವ ಸತೀಶ ಜಾರಕಿಹೊಳಿ ಅವರನ್ನು ಕೆಲ ಕಾಣದ ಕೈಗಳು ರಾಜಕೀಯವಾಗಿ ಮುಗಿಸುವ ಹೊಂಚು ಹಾಕಿದ್ದಾರೆ. ಈಗಾಗಲೇ ಇಡಿ ೧೮ ಕಡೆಗಳಲ್ಲಿ ದಾಳಿ ನಡೆಸಿದೆ. ಇಡಿ ದಾಳಿಯಿಂದ ಸಿಕ್ಕ ಕೋಟ್ಯಂತರ ಹಣಕ್ಕೆ ಸಂಬಂಧಿಸಿದಂತೆ ಸಚಿವರು ಹಾಗೂ ಅವರ ಕುಟುಂಬಸ್ಥರು ದಾಖಲೆ ನೀಡಿ ಸರಿಪಡಿಸಿಕೊಳ್ಳುತ್ತಾರೆ. ಇಡಿ ದಾಳಿಗೆ ಸಚಿವರು ಬಗ್ಗುವುದಿಲ್ಲ. ಯಾವುದೇ ಆತಂಕವಿಲ್ಲದೇ ಈ ಪ್ರಕರಣವನ್ನು ನಮ್ಮ ಸಚಿವರು ಎದುರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಇಡಿ ಮುಖಾಂತರ ಬೆದರಿಸುವ ತಂತ್ರ ಬಿಜೆಪಿ ಮಾಡುತ್ತಿದೆ. ದಲಿತರನ್ನೇ ಗುರಿಯಾಗಿಸಿ ಇಡಿ ದಾಳಿ ನಡೆಸಲಾಗುತ್ತಿದೆ. ಇಡಿ, ಐಟಿ ಸಂಸ್ಥೆಗಳು ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿವೆ. ಇಷ್ಟು ವರ್ಷ ಇಡಿ ನಡೆಸಿರುವ ದಾಳಿಗಳಿಂದ ಯಾರಿಗಾದರೂ ಶಿಕ್ಷೆ ಆಗಿದೆಯಾ ಎಂದು ಪ್ರಶ್ನಿಸಿದ ಅವರು, ಸದಾ ಸಾರ್ವಜನಿಕರ ಸೇವೆಯಲ್ಲಿರುವ ಧೀಮಂತ ನಾಯಕರಾಗಿರುವ ಸತೀಶ ಜಾರಕಿಹೊಳಿ ಅವರ ಮೇಲೆ ಇಡಿಯಿಂದ ಹೆದರಿಸುವ ಕೆಲಸ ನಡೆಯುತ್ತಿದೆ. ಇಂತವುಗಳಿಗೆ ನಮ್ಮ ನಾಯಕರು ಹೆದರುವುದಿಲ್ಲ. ಇನ್ನೂ ಗಟ್ಟಿಯಾಗಿ ರಾಜ್ಯವ್ಯಾಪಿ ಸಂಚರಿಸಿ ಪಕ್ಷದ ಸಂಘಟನೆಗೆ ಮುಂದಾಗುತ್ತಾರೆ ಎಂದರು.

ವಕ್ತಾರ ಶರಣಪ್ಪ ಭತ್ತದ ಹಾಗೂ ಮಾಜಿ ಕೆಡಿಪಿ ಸದಸ್ಯ ನಾಗಪ್ಪ ಹುಗ್ಗಿ ಮಾತನಾಡಿದರು. ಪ್ರಮುಖರಾದ ಕೆಂಚಪ್ಪ ನಿರ್ಲೂಟಿ, ನಾಗೇಶ ಬಡಿಗೇರ, ಪಾಮಣ್ಣ ಅರಳಿಗನೂರು, ಮಲ್ಲಿಕಾರ್ಜುನಗೌಡ ಬೆನಕನಾಳ, ಸಚಿವ ಶಿವರಾಜ ತಂಗಡಗಿ ಆಪ್ತ ಕಾರ್ಯದರ್ಶಿ ವೆಂಕಟೇಶ ಗೋಡಿನಾಳ ಇತರರು ಇದ್ದರು. ಇಡಿ ದಾಳಿ ರಾಜಕೀಯ ಪ್ರೇರಿತ: ರಾಯರಡ್ಡಿ

ಕುಕನೂರು: ಸತೀಶ್ ಜಾರಕಿಹೊಳಿಯವರು ಅತ್ಯುತ್ತಮ, ಪ್ರಗತಿಪರವಾಗಿರುವಂತಹ ನಾಯಕರು. ಅವರ ಮೇಲೆ ಇಡಿ ದಾಳಿ ಮಾಡಿರುವದು ರಾಜಕೀಯ ಪ್ರೇರಿತವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು. ತಾಲೂಕಿನ ಮಂಗಳೂರು ಗ್ರಾಮದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತೀಶ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ವಿದೇಶದಲ್ಲಿ ಹಣ ಹೊಡಿಕೆ ಮಾಡಿದ್ದಾರೆಂದರೆ ಕಾನೂನು ಪ್ರಕಾರ ಮಾಡಿರುತ್ತಾರೆ. ಅದು ಹೊರಗಡೆ ಬರುತ್ತದೆ. ಕೇಂದ್ರ ಸರಕಾರದವರು ಸುಖಾಸುಮ್ಮನೆ ದಾಳಿ ಮಾಡುತ್ತಿದ್ದಾರೆ. ಇಡಿ ದಾಳಿ ಆದ ತಕ್ಷಣ ಏನೂ ಆಗುವುದಿಲ್ಲ. ಅದರ ರೇಕಾರ್ಡ್ ಕೊಡುತ್ತಾರೆ. ಸುಮ್ಮನಾಗುತ್ತಾರೆ. ಅದು ಸರಿಯಾಗುತ್ತದೆ. ಇನ್‌ವೆಸ್ಟ್ ಮಾಡಿರುವದು ಅವರು ಸ್ವಂತ ಬಿಜಿನೆಸ್‌ಗೆ ಹಾಕಿದ್ದಾರೆ. ಅದನ್ನು ನಾನು ಹೇಗೆ ಹೇಳಲಿ. ನನಗೆ ಗೊತ್ತಿರುವಂತೆ ಸತೀಶ ಜಾರಕಿ ಹೊಳಿಯವರು ಪ್ರಗತಿದಾಯಕ ನಾಯಕರು ಎಂದಿದ್ದಾರೆ.

ಸಚಿವ ಜಾರಕಿಹೊಳಿ ಮೇಲೆ ಇಡಿ ದಾಳಿ ಸಮಂಜಸ: ಜನಾರ್ದನ ರೆಡ್ಡಿ

ಗಂಗಾವತಿ: ಸಚಿವ ಸತೀಶ ಜಾರಕಿಹೊಳಿ ಅವರ ಮನೆ ಮೇಲೆ ಇಡಿ ದಾಳಿ ನಡೆಸಿದ್ದು ಸಮಂಜಸವಾಗಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.ನಗರಸಭೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇಡಿ ದಾಳಿ ಸುಮ್ಮನೇ ನಡೆಯುವುದಿಲ್ಲ. ಸರಿಯಾದ ದಾಖಲೆಗಳು ಮತ್ತು ಆಧಾರಗಳಿದ್ದರೆ ಮಾತ್ರ ಇಡಿ ಅಧಿಕಾರಿಗಳು ದಾಳಿ ನಡೆಸುತ್ತಾರೆ. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧವೇ ಕ್ರಮ ಕೈಗೊಳ್ಳಲಾಗುತ್ತದೆ. ಹಾಗಾಗಿ, ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲಿನ ದಾಳಿ ಪ್ರಕರಣ ಸಮಂಜಸವಾಗಿದೆ. ಇದು ಯಾವುದೇ ರಾಜಕೀಯ ಪ್ರೇರಿತ ದಾಳಿಯಲ್ಲ ಎಂದು ಹೇಳಿದರು.ಸತೀಶ್ ಜಾರಕಿಹೊಳಿ ಅವರ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ ಎಂದು ಹೇಳುವುದಾದರೆ, ನಮ್ಮ ಮೇಲಿನ ಇಡಿ ದಾಳಿಯೂ ರಾಜಕೀಯ ಪ್ರೇರಿತ ಎಂದು ಒಪ್ಪಿಕೊಂಡಂತಾಗುತ್ತದೆ. ದಾಳಿ ನಡೆದಿದೆ ಎಂದರೆ ಅವ್ಯವಹಾರ ನಡೆದಿದೆ ಎಂಬುದು ಅರ್ಥ. ಇನ್ನೂ ನಾಲ್ಕೈದು ಸಚಿವರ ಮೇಲೆ ಇಡಿ ದಾಳಿ ನಡೆಯಲಿದೆ ಎಂದು ಮುಖ್ಯಮಂತ್ರಿ ಡಿಕೆಶಿಯವರೇ ಹೇಳಿದ್ದಾರೆ. ಹಾಗಾದರೆ ಅವರು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಮುಖ್ಯಮಂತ್ರಿಯವರೇ ಒಪ್ಪಿಕೊಂಡಂತಾಗುತ್ತದೆ ಎಂದು ವ್ಯಂಗ್ಯವಾಡಿದರು. ಪೊಲೀಸ್ ಅಧಿಕಾರಿಗಳ ಪೋಸ್ಟಿಂಗ್‌ನಲ್ಲಿ ಸಚಿವ ಶಿವರಾಜ ತಂಗಡಗಿ ವಗಾ೯ವಣೆ ದಂಧೆ ನಡೆಸುತ್ತಾರೆ ಎಂಬ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಆರೋಪದ ಕುರಿತು ಪ್ರತಿಕ್ರಿಯಿಸಿದ ಜನಾರ್ದನ ರೆಡ್ಡಿ, ಒಂದು ಕೋಟಿ ರೂಪಾಯಿ ಪಡೆದು ಡಿವೈಎಸ್ಪಿ ಪೋಸ್ಟಿಂಗ್ ಮಾಡಲಾಗಿದೆ ಎಂದು ಅವರದೇ ಪಕ್ಷದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಆರೋಪಿಸಿದ್ದಾರೆ. ಈ ಆರೋಪ ಗಂಭೀರವಾಗಿರುವುದರಿಂದ ಸಚಿವ ತಂಗಡಗಿ ಅವರು ಈ ಬಗ್ಗೆ ಲೋಕಾಯುಕ್ತ ಅಥವಾ ಸಿಬಿಐ ತನಿಖೆಗೆ ಒಪ್ಪಿಸಬೇಕಿತ್ತು. ಆದರೆ ಅದನ್ನು ಮಾಡದೆ ಸುಮ್ಮನ್ನೇ ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ ಎಂದು ಹೇಳುತ್ತಿದ್ದಾರೆ ಎಂದು ಜನಾರ್ದನ ರೆಡ್ಡಿ ಟೀಕಿಸಿದರು.

ಆರೋಪಗಳು ಸತ್ಯವೇ ಅಥವಾ ಸುಳ್ಳೇ ಎಂಬುದು ತನಿಖೆಯಿಂದ ಬಹಿರಂಗವಾಗಬೇಕು. ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ನಾನೇ ಲೋಕಾಯುಕ್ತರಿಗೆ ದೂರು ನೀಡುವೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೋಕರ್ಣ ಹೋಬಳಿ ಮಟ್ಟದ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮ
ಅತಿ ಶೀತ, ಉಷ್ಣ ನೀರು ಸೇವನೆ ಆರೋಗ್ಯಕ್ಕೆ ಹಾನಿಕರ: ರಾಘವೇಶ್ವರ ಭಾರತೀ ಮಹಾಸ್ವಾಮಿಗಳು