ಹಾವೇರಿ: ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಸ್ಥಳೀಯವಾಗಿಯೇ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಪ್ರಜಾಸೇವಾ ಆಂದೋಲನ ಜಾರಿಗೆ ತರಲಾಗಿದೆ. ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸಕ್ಕರೆ ಮತ್ತು ಜವಳಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.
ಸಾರ್ವಜನಿಕರು ತಮ್ಮ ಸಣ್ಣಪುಟ್ಟ ಕೆಲಸಗಳಿಗೂ ತಾಲೂಕು ಹಾಗೂ ಜಿಲ್ಲಾ ಮಟ್ಟದ ಕಚೇರಿಗಳಿಗೆ ಹಲವು ಬಾರಿ ಅಲೆದಾಡುವ ಪರಿಸ್ಥಿತಿಯಿದೆ. ಇದರಿಂದ ಸಮಯ ಮತ್ತು ಹಣ ವ್ಯರ್ಥವಾಗುವುದರ ಜೊತೆಗೆ ಅನಗತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ತಪ್ಪಿಸಿ ಜನರ ಬಳಿಯೇ ಆಡಳಿತವನ್ನು ಕೊಂಡೊಯ್ಯುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಪ್ರಜಾಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸಿ ಹಿರಿಯ ಐಎಎಸ್ ಅಧಿಕಾರಿಯನ್ನು ನೇಮಿಸುವ ಮೂಲಕ ಸಾರ್ವಜನಿಕರ ಅರ್ಜಿಗಳ ವಿಲೇವಾರಿಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಈಗಾಗಲೇ ಸುಮಾರು 1,500 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಈ ಪೈಕಿ ಸುಮಾರು 1,200 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಬಾಕಿ ಉಳಿದ 300 ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ಆದ್ಯತೆ ನೀಡಬೇಕು. ಸ್ಥಳೀಯ ಮಟ್ಟದಲ್ಲಿ ಬಗೆಹರಿಸಬಹುದಾದ ಸಮಸ್ಯೆಗಳನ್ನು ವಿಳಂಬ ಮಾಡದೆ ಪರಿಹರಿಸಬೇಕು. ಸರ್ಕಾರದ ಅಥವಾ ವಿಭಾಗೀಯ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಬೇಕಾದ ಸಮಸ್ಯೆಗಳನ್ನು ಜನಪ್ರತಿನಿಧಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.ಯಾವುದೇ ಅರ್ಜಿಯನ್ನು ಕಾರಣವಿಲ್ಲದೆ ಬಾಕಿ ಉಳಿಸಿಕೊಳ್ಳಬಾರದು, ಸಮಸ್ಯೆ ಪರಿಹಾರ ಸಾಧ್ಯವಿಲ್ಲದಿದ್ದರೆ ಅದಕ್ಕೆ ಸೂಕ್ತ ಕಾರಣ ತಿಳಿಸಬೇಕು. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಅವರ ಅಹವಾಲುಗಳನ್ನು ಆಲಿಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಡುವೆ ಸಮನ್ವಯ ಹೆಚ್ಚಿಸುವ ಮೂಲಕ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು. ತಾಲೂಕು, ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಪ್ರಜಾಸೇವಾ ಆಂದೋಲನ ಆಯೋಜಿಸಲಾಗುವುದು ಎಂದು ಹೇಳಿದರು.
ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ ಮಾತನಾಡಿ, ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಲ್ಪಿಸುವುದು ಪ್ರಜಾಸೇವಾ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಜನರು ತಮ್ಮ ಕೆಲಸಗಳಿಗಾಗಿ ಕಚೇರಿಗಳಿಗೆ ಹಲವು ಬಾರಿ ಅಲೆದಾಡಿದರೂ ಪರಿಹಾರ ಸಿಗದಿರುವ ಸಂದರ್ಭಗಳಿವೆ. ಇಂತಹ ಸಮಸ್ಯೆಗಳಿಗೆ ಒಂದೇ ವೇದಿಕೆಯಲ್ಲಿ ಪರಿಹಾರ ಕಂಡುಕೊಳ್ಳಲು ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.
ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಪ್ರಾಸ್ತಾವಿಕವಾಗಿ ಮಾತನಾಡಿ, ಸೆಪ್ಟೆಂಬರ್ ತಿಂಗಳಲ್ಲಿ ವಿಜಯನಗರ ಜಿಲ್ಲೆಯಿಂದ ಮುಖ್ಯಮಂತ್ರಿ ಅವರು ಪ್ರಜಾಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಪ್ರತಿ ಶನಿವಾರ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳೀಯವಾಗಿ ಪರಿಹಾರ ಕಂಡುಕೊಳ್ಳುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಸಾರ್ವಜನಿಕ ದೂರುಗಳು: ಮರಡೂರು ಬ್ಯಾರೇಜ್ನಿಂದ ನೀರು ಸೋರಿಕೆ, ಶಿಥಿಲ ಬ್ಯಾರೇಜ್ ಕಂ-ರಸ್ತೆ, ಹೊಸ ಬ್ಯಾರೇಜ್ ನಿರ್ಮಾಣ, ಸ್ಮಶಾನಕ್ಕೆ ದಾರಿ ಸಮಸ್ಯೆ, ಸ್ಮಶಾನ ಭೂಮಿ, ರಸ್ತೆ ಬದಿಯ ಗಿಡಗಂಟಿಗಳ ತೆರವು, ಸಾರಿಗೆ ಸೌಲಭ್ಯ, ವಸತಿ, ಜೆ.ಜೆ.ಎಂ.ಕಾಮಗಾರಿ, ವಿಬಿ ರಾಮಜಿ ಕೂಲಿ ಹಣ ಪಾವತಿ ಸಮಸ್ಯೆ, ಕುಡಿಯುವ ನೀರು, ಆಸ್ಪತ್ರೆ ಸೌಲಭ್ಯ, ಹಾಸ್ಟೆಲ್ ಸೇರಿದಂತೆ ಸಾರ್ವಜನಿಕರ ಸಮಸ್ಯೆಗಳ ಕುರಿತು ವಿವಿಧ ಗ್ರಾಮಗಳ ಹಾಗೂ ಹಾವೇರಿ ನಗರದ ವಿವಿಧ ಬಡಾವಣೆಗಳ ಚರಂಡಿ, ರಸ್ತೆ, ನದಿ ನೀರಿನ ಪೂರೈಕೆ ಸೇರಿದಂತೆ ಮೂಭೂತ ಸೌಲಭ್ಯಗಳ ಸಮಸ್ಯೆ ಕುರಿತು ನಾಗರಿಕರು ಮನವಿ ದೂರು ಸಲ್ಲಿಸಿದರು.
ಸಮಸ್ಯೆಗಳ ಪರಿಹಾರದ ಭರವಸೆ: ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಸಚಿವ ರುದ್ರಪ್ಪ ಲಮಾಣಿ ಅವರು ಮಾತನಾಡಿ, ಹಾವೇರಿ ನಗರದ ವಿವಿಧ 45 ವಿವಿಧ ಬಡಾವಣೆಗಳಿಗೆ ಎನ್ಒಸಿ ನೀಡಲಾಗಿದೆ, ಆದರೆ ಶಾಶ್ವತ ವಿದ್ಯುತ್ ಸಂಪರ್ಕ, ರಸ್ತೆ, ಚರಂಡಿ ಅಭಿವೃದ್ಧಿಯಾಗಿಲ್ಲ. ಈಗ ನದಿ ಪೂರೈಕೆಗೆ ಪೈಪ್ಲೈನ್ ಇರುವ ಕಡೆಗಳಲ್ಲಿ ನೀರು ಪೂರೈಕೆಗೆ ಕ್ರಮವಹಿಸಲಾಗುತ್ತಿದೆ. ಸರ್ಕಾರದಿಂದ ರು.11.80 ಕೋಟಿ ಮಂಜೂರಾಗಿದ್ದು, ಹಾವೇರಿ ನಗರಸಭೆ ವ್ಯಾಪ್ತಿಯ ನೀರಿನ ಸೌಲಭ್ಯ ಇಲ್ಲದ ಬಡಾವಣೆಗಳಿಗೆ ನೀರು ಪೂರೈಕೆಗೆ ಕೆಯುಐಡಿಎಫ್ಸಿಯಿಂದ ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯ ಜಾಬ್ ಕಾರ್ಡಗಳನ್ನು ಹಾಗೂ ಕಾರ್ಮಿಕ ಇಲಾಖೆಯ ವತಿಯಿಂದ ಕಾರ್ಮಿಕರಿಗೆ ಸುರಕ್ಷತಾ ಕಿಟ್ಗಳನ್ನು ವಿತರಿಸಲಾಯಿತು.