ಜನರ ಸಮಸ್ಯೆ ಶೀಘ್ರ ಪರಿಹಾರಕ್ಕೆ ಪ್ರಜಾಸೇವೆ ಸಹಕಾರಿ

KannadaprabhaNewsNetwork |  
Published : Sep 06, 2026, 02:30 AM IST
 ಸಂಡೂರು ತಾಲ್ಲೂಕಿನ ವಿಠಲಾಪುರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಜಾಸೇವೆ ಆಂದೋಲನ ಕಾರ್ಯಕ್ರಮದಲ್ಲಿ ಶಾಸಕಿ ಅನ್ನಪೂರ್ಣ ಈ ತುಕಾರಾಮ್ ಅವರು ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು. | Kannada Prabha

ಸಾರಾಂಶ

ಸರ್ಕಾರದ ಸೌಲಭ್ಯ ಪಡೆಯುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ

ಸಂಡೂರು: ಸರ್ಕಾರ ಹಾಗೂ ಜನರ ನಡುವಿನ ಕಂದಕ ತೊಡೆದುಹಾಕಲು, ಜನರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸಲು ಹಾಗೂ ಸರ್ಕಾರ ಹಾಗೂ ನಾಗರಿಕರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಲು ಪ್ರಜಾಸೇವೆ ಇಲಾಖೆ ಆರಂಭಿಸಲಾಗಿದೆ ಎಂದು ಶಾಸಕಿ ಅನ್ನಪೂರ್ಣ ಈ ತುಕಾರಾಮ್ ತಿಳಿಸಿದರು.

ತಾಲೂಕಿನ ತೋರಣಗಲ್ಲು ಹೋಬಳಿ ವ್ಯಾಪ್ತಿಯ ವಿಠಲಾಪುರ ಗ್ರಾಮದಲ್ಲಿ ಶನಿವಾರ ತಾಲೂಕಾಡಳಿತದಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರಜಾಸೇವೆ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರದ ಸೌಲಭ್ಯ ಪಡೆಯುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಕೆಲವರಿಗೆ ಸರ್ಕಾರದ ಯೋಜನೆ, ಅವುಗಳನ್ನು ಪಡೆಯುವ ವಿಧಾನ ತಿಳಿದಿರುವುದಿಲ್ಲ. ಕೆಲವರಿಗೆ ತಿಳಿದಿದ್ದರೂ ಅವುಗಳನ್ನು ಜನಪ್ರತಿನಿಧಿಗಳ ಮುಂದೆ ಹೇಳಿಕೊಳ್ಳಲು ಹಿಂಜರಿಯುತ್ತಾರೆ.ಇಂತಹ ಸನ್ನಿವೇಶ ಗಮನಿಸಿ ಸರ್ಕಾರ ಹಾಗೂ ಜನರ ನಡುವೆ ನೇರ ಸಂಪರ್ಕ ಸಾಧಿಸಲು ಈ ಪ್ರಜಾಸೇವಾ ಆಂದೋಲನ ಆರಂಭಿಸಲಾಗಿದೆ ಎಂದರು.

ಪ್ರತಿ ಶನಿವಾರ ಈ ಕಾರ್ಯಕ್ರಮ ತಾಲೂಕಿನ ಬೇರೆ ಬೇರೆ ಕಡೆಗಳಲ್ಲಿ ನಡೆಯಲಿದೆ. ಜನರ ಬಳಿಗೆ ಹೋಗಿ ಅವರ ನಾಡಿ ಮಿಡಿತ, ಸಮಸ್ಯೆ ತಿಳಿದು ಅವುಗಳನ್ನು ಪರಿಹರಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಈ ಕಾರ್ಯಕ್ರಮದಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು ಇರುತ್ತಾರೆ. ಜನತೆ ತಮ್ಮ ಸಮಸ್ಯೆ ಸಂಬಂಧಿಸಿದ ಇಲಾಖೆಯ ಕೌಂಟರ್‌ನಲ್ಲಿ ನೀಡಿದರೆ ಸಾಧ್ಯವಾದರೆ ಅವುಗಳನ್ನು ಸ್ಥಳದಲ್ಲಿಯೇ ಪರಿಹರಿಸಲಾಗುವುದು. ಜಿಲ್ಲಾಡಳಿತ, ಸಚಿವರು,ಕ್ಯಾಬಿನೆಟ್ ಮಟ್ಟದಲ್ಲಿ ಚರ್ಚಿಸುವಂತಹ ಸಮಸ್ಯೆಗಳಿದ್ದಲ್ಲಿ ಆಯಾ ಹಂತಗಳಲ್ಲಿ ಚರ್ಚಿಸಿ ಅಂತಹ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ತಹಸೀಲ್ದಾರ್ ಜಿ.ಅನಿಲ್‌ಕುಮಾರ್, ಪ್ರಜಾಸೇವೆ ಆಂದೋಲನ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ಈ ಯೋಜನೆಯ ಮೂಲಕ ಸಾರ್ವಜನಿಕರ ಅಹವಾಲು ಆಲಿಸಿ, ಅವುಗಳಿಗೆ ಶೀಘ್ರ ಪರಿಹಾರ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು. ವಿವಿಧ ಇಲಾಖೆಗಳ ಕೌಂಟರ್ ತೆರೆಯಲಾಗಿದೆ. ಆ ಕೌಂಟರ್‌ಗಳಲ್ಲಿ ಆಯಾ ಇಲಾಖೆಗಳ ಯೋಜನೆಗಳ ಮಾಹಿತಿ ತಿಳಿಸಲಾಗುವುದು. ಜನತೆ ತಮ್ಮ ಅಹವಾಲು ಸಲ್ಲಿಸಿದಲ್ಲಿ ಸಾಧ್ಯವಾದಲ್ಲಿ ಅವುಗಳನ್ನು ಸ್ಥಳದಲ್ಲಿಯೇ ಪರಿಹರಿಸಲಾಗುವುದು ಎಂದರು.

ಕೆರೆಗೆ ನೀರು ತುಂಬಿಸುವ ಯೋಜನೆ ಜಾರಿಗೆ ಒತ್ತಾಯಿಸಿ ಮನವಿ:

ವಿಠಲಾಪುರ, ಮೆಟ್ರಿಕಿ, ಅಂತಾಪುರ, ಮುರಾರಿಪುರ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರಾದ ಎಂ.ಸದಾಶಿವಪ್ಪ, ಜಿ.ತಿಪ್ಪೇಸ್ವಾಮಿ, ರಾಮಣ್ಣ, ಎಚ್.ಚೌಡಪ್ಪ, ಎ.ಎಲ್.ಮರಿಸ್ವಾಮಿ, ಡಿ.ತಾಯಪ್ಪ,ಎಂ. ಹನುಮಂತಪ್ಪ, ಜಿ.ರಾಮಮೂರ್ತಿ ಮುಂತಾದವರು ಶಾಸಕರಿಗೆ ಮನವಿ ಪತ್ರ ಸಲ್ಲಿಸಿ ತುಂಗಾಭದ್ರಾ ನದಿ ನೀರನ್ನು ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿನ ಕೆರೆಗಳಿಗೆ ಹರಿಸಿ ತುಂಬಿಸುವ ಯೋಜನೆ ಜಾರಿಗೊಳಿಸಿದರೆ ಈ ಭಾಗದಲ್ಲಿ ಅಂತರ್ಜಲದ ಮಟ್ಟ ಹೆಚ್ಚಲು ಕಾರಣವಾಗಲಿದೆ. ಇದರಿಂದ ಕೃಷಿ ಕ್ಷೇತ್ರ ಅಭಿವೃದ್ಧಿ ಕಾಣಲಿದೆ. ರೈತರಿಗೆ ಅನುಕೂಲವಾಗಲಿದೆ. ಈ ಯೋಜನೆ ಸಕಾರಗೊಳಿಸಲು ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.

ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷೆ ಆಶಾಲತಾ ಸೋಮಪ್ಪ, ತಾಲೂಕು ಸಮಿತಿ ಅಧ್ಯಕ್ಷ ನೂರುದ್ದೀನ್, ತಾಪಂ ಇಒ ಮಡಗಿನ ಬಸಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್. ಅಕ್ಕಿ, ಸಿಡಿಪಿಒ ನಾಗರಾಜ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ, ವಿವಿಧ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಜಾಸೇವೆ ಆಂದೋಲನ: ಅರ್ಜಿ ಸಲ್ಲಿಸಲು ಶಿರಹಟ್ಟಿಯಲ್ಲಿ ನೂಕುನುಗ್ಗಲು
ಮಕ್ಕಳ, ದೇಶದ ಭವಿಷ್ಯ ರೂಪಿಸುವ ಶಕ್ತಿ ಶಿಕ್ಷಕರಲ್ಲಿದೆ: ಡಾ. ಚಂದ್ರು ಲಮಾಣಿ