ಪೊನ್ನಂಪೇಟೆ ತಾಲೂಕು ಪ್ರಜಾಸೌಧ (ತಾಲೂಕು ಆಡಳಿತ) ನಿರ್ಮಾಣದ ಜಾಗ, ನಂತರ ಬಲ್ಯಮಂಡೂರು ಬಳಿ ಸೇತುವೆಯನ್ನು ಕಂದಾಯ ಸಚಿವ ಕೃಷ್ಣ ಬೈರೇಗೌಡ ವೀಕ್ಷಿಸಿದರು.
ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಪೊನ್ನಂಪೇಟೆ ಮತ್ತು ಕುಶಾಲನಗರ ತಾಲೂಕು ಘೋಷಣೆಯಾಗಿ 7 ವರ್ಷ ಕಳೆದಿದೆ. ಆ ದಿಸೆಯಲ್ಲಿ ಸರ್ಕಾರ ಪ್ರಜಾಸೌಧ ಹೆಸರಿನಲ್ಲಿ ಎರಡು ಆಡಳಿತ ಸೌಧ ನಿರ್ಮಾಣಕ್ಕೆ ತಲಾ 8.65 ಕೋಟಿ ರು.ವನ್ನು ಮಂಜೂರು ಮಾಡಿದ್ದು, ಟೆಂಡರ್ ಪ್ರಕ್ರಿಯೆಯೂ ಸಹ ಆಗಿದೆ. ಶೀಘ್ರ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.’ಅವರು ಶುಕ್ರವಾರ ಪೊನ್ನಂಪೇಟೆ ತಾಲೂಕು ಪ್ರಜಾಸೌಧ (ತಾಲೂಕು ಆಡಳಿತ) ನಿರ್ಮಾಣದ ಜಾಗ, ನಂತರ ಬಲ್ಯಮಂಡೂರು ಬಳಿ ಸೇತುವೆ ವೀಕ್ಷಿಸಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.ತಾಲೂಕು ಕಚೇರಿಯಲ್ಲಿ ಭೂಮಾಲೀಕರ ಮೂಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸಂರಕ್ಷಣೆ ಮಾಡುವಲ್ಲಿ ಸರ್ಕಾರ ಮುಂದಾಗಿದೆ. ಭೂಮಿಗೆ ಸಂಬಂಧಿಸಿದಂತೆ ಭೂದಾಖಲೆಗಳು ಕಳೆದು ಹೋಗದಂತೆ ತಡೆಯುವುದು ಪ್ರಮುಖ ಉದ್ದೇಶವಾಗಿದೆ. ಭೂ ದಾಖಲೆಗಳು ಕಾಣದಿರುವುದು ಅಥವಾ ತಿದ್ದುಪಡಿ ಮಾಡುವುದು ಮತ್ತಿತರ ಗೊಂದಲಗಳಿಗೆ ಆಸ್ಪದ ಆಗದಂತೆ ಭೂ ಮಾಲೀಕರಿಗೆ ದಾಖಲೆಯ ‘ಗ್ಯಾರಂಟಿ’ ನೀಡುವುದು ಭೂ ಸುರಕ್ಷತಾ ಯೋಜನೆಯ ಉದ್ದೇಶವಾಗಿದೆ ಎಂದು ಸಚಿವರು ವಿವರಿಸಿದರು. ಭೂಮಾಲೀಕರ ಬೆರಳ ತುದಿಯಲ್ಲಿ ಭೂ ದಾಖಲೆಗಳು ಸಿಗುವಂತಾಗಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಇದರಿಂದ ಕಳೆದು ಹೋಗುವ, ತಿದ್ದುವ ಅಥವಾ ಸೃಷ್ಟಿ ಮಾಡುವ ದಂಧೆಗೆ ಕಡಿವಾಣ ಬೀಳಲಿದೆ ಎಂದು ಹೇಳಿದರು.ಭೂ ದಾಖಲೆಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ 100 ಕೋಟಿಗೂ ಹೆಚ್ಚು ಪುಟಗಳನ್ನು ಸ್ಕ್ಯಾನ್ ಮಾಡಲು ಉದ್ದೇಶಿಸಲಾಗಿದೆ. ಆ ನಿಟ್ಟಿನಲ್ಲಿ ಈಗಾಗಲೇ ಮೂವತ್ತಮೂರುವರೆ ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. ಭೂ ಮಾಲೀಕರು ಭೂಸುರಕ್ಷಾ ಯೋಜನೆಯಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹತ್ತಿರದ ನಾಡಕಚೇರಿಗೆ ಹೋಗಿ ಅಲ್ಲಿಯೂ ಸಹ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಇದೊಂದು ಗ್ಯಾರಂಟಿ ನೀಡುವ ಯೋಜನೆಯಾಗಿದೆ ಎಂದು ಹೇಳಿದರು.ಪಟ್ಟೆದಾರರು ತಮ್ಮ ಭೂಮಿ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಸಂಪೂರ್ಣ ಹಕ್ಕುದಾರಿಕೆ ಒದಗಿಸಲಾಗುವುದು. 30-40 ವರ್ಷದ ಹಳೆಯದನ್ನು ಸರಿಪಡಿಸಲು ಮುಂದಾಗಲಾಗಿದೆ. ಆ ನಿಟ್ಟಿನಲ್ಲಿ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಸಚಿವರು ಹೇಳಿದರು.ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದಾಗಿ ಮಣ್ಣು, ಗುಡ್ಡ ಕುಸಿಯುವುದನ್ನು ತಡೆಯುವ ನಿಟ್ಟಿನಲ್ಲಿ ತಡೆಗೋಡೆ ನಿರ್ಮಾಣಕ್ಕೆ 50 ಕೋಟಿ ರು. ಮಂಜೂರು ಮಾಡಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ತಿಳಿಸಿದ್ದು, ಶೀಘ್ರ 50 ಕೋಟಿ ರು. ಹಣ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ, ಮಳೆ ಹಾನಿ ಪ್ರದೇಶ, ತಾಳುಕು ಆಡಳಿತ ಭವನ ನಿರ್ಮಾಣದ ಜಾಗ, ಬಲ್ಯ ಮಂಡೂರು ಬಳಿ ಸೇತುವೆ ಮತ್ತಿತ್ತರ ಬಗ್ಗೆ ಹಲವು ಮಾಹಿತಿ ನೀಡಿದರು.ಬಳಿಕ ಬಲ್ಯಮಂಡೂರು ಗ್ರಾ.ಪಂ.ನಲ್ಲಿನ ಸಕಾಲ ಯೋಜನಾ ಕೇಂದ್ರಕ್ಕೆ ಸಚಿವರು ಭೇಟಿ ನೀಡಿ ಸಾರ್ವಜನಿಕರ ಸೇವೆ ಒದಗಿಸುತ್ತಿರುವ ಸಂಬಂಧ ಮಾಹಿತಿ ಪಡೆದರು. ಜಿಲ್ಲಾಧಿಕಾರಿ ವೆಂಕಟ್ ರಾಜಾ, ಭೂ ದಾಖಲೆಗಳ ಸಂರಕ್ಷಣೆ, ಸಕಾಲ ಯೋಜನೆ ಸೇರಿದಂತೆ ಹಲವು ಕಂದಾಯ ವಿಚಾರಗಳ ಕುರಿತು ಸಚಿವರಿಗೆ ಮಾಹಿತಿ ಒದಗಿಸಿದರು.ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಘಟಕ ಅಧ್ಯಕ್ಷ ಧರ್ಮಜ ಉತ್ತಪ್ಪ, ತಹಸೀಲ್ದಾರ್ ಮೋಹನ್ ಕುಮಾರ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಇಬ್ರಾಹಿಂ, ಜಿ.ಪಂ. ಕಾರ್ಯಪಾಲಕ ಎಂಜಿನಿಯರ್ ಜಿ.ಕೆ.ನಾಯಕ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸತೀಶ್ ವಿವಿಧ ಇಲಾಖೆ ಅಧಿಕಾರಿಗಳು ಇತರರು ಇದ್ದರು.ತಹಸೀಲ್ದಾರರ ಕಚೇರಿಗೆ ಭೇಟಿ:
ಕಂದಾಯ ಸಚಿವ ಕೃಷ್ಣ ಬೈರೇಗೌಡ ಪೊನ್ನಂಪೇಟೆಯ ತಹಸೀಲ್ದಾರರ ಕಚೇರಿಗೆ ಶುಕ್ರವಾರ ಭೇಟಿ ನೀಡಿ ಭೂ ಸುರಕ್ಷತೆ ಮತ್ತು ಕಂದಾಯ ದಾಖಲೆ ಡಿಜಿಟಲೀಕರಣ ಪ್ರಕ್ರಿಯೆ ಸಂಬಂಧ ಮಾಹಿತಿ ಪಡೆದರು. ಸರ್ಕಾರ ಭೂಸುರಕ್ಷತಾ ಯೋಜನೆಯಡಿ ಸಾರ್ವಜನಿಕರಿಗೆ ಕಂದಾಯ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಕಲ್ಪಿಸುತ್ತಿರುವ ಹಿನ್ನೆಲೆ ತಹಸೀಲ್ದಾರರ ಕಚೇರಿಯಲ್ಲಿ ಯಾವ ರೀತಿ ಅಪ್‌ಡೇಟ್ ಮಾಡಿದ್ದಾರೆ ಎಂಬ ಬಗ್ಗೆ ಸಚಿವರು ಮಾಹಿತಿ ಪಡೆದರು. ಸರ್ಕಾರ ಕಂದಾಯ ಇಲಾಖೆಯಲ್ಲಿ ಭೂದಾಖಲೆಗಳಿಗೆ ಸಾಕಷ್ಟು ಸುಧಾರಣೆ ತಂದಿದ್ದು, ಅವುಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಅನುಸರಿಸಬಾರದು ಎಂದು ಕಂದಾಯ ಸಚಿವರು ಸೂಚಿಸಿದರು. ಭೂದಾಖಲೆ ಸಂರಕ್ಷಣೆ ಸಂಬಂಧ ಹೊಸ ಹೊಸ ವಿಧಾನಕ್ಕೆ ಹೊಂದಿಕೊಂಡು ಸಾರ್ವಜನಿಕರಿಗೆ ಸಕಾಲದಲ್ಲಿ ನಾಗರಿಕ ಸೇವೆ ಒದಗಿಸಬೇಕು ಎಂದರು. ಹೊಸ ಹೊಸ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವುದರಿಂದ ಸಾರ್ವಜನಿಕರಿಗೆ ಕಂದಾಯ ಇಲಾಖೆಯ ಸೇವೆಗಳನ್ನು ತ್ವರಿತವಾಗಿ ಕಲ್ಪಿಸಲು ಸಹಕಾರಿಯಾಗಲಿದೆ. ಆ ನಿಟ್ಟಿನಲ್ಲಿ ಎಲ್ಲಾ ಹಂತದ ಸಿಬ್ಬಂದಿಗಳು ತಂಡವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸಚಿವರಾದ ಕೃಷ್ಣ ಬೈರೇಗೌಡ ಅವರು ತಾಕೀತು ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.