ಇಂದು ಕಮಲಾಪುರದಲ್ಲಿ ಪ್ರಜಾಸೇವೆ ಆಂದೋಲನ

KannadaprabhaNewsNetwork |  
Published : Sep 05, 2026, 01:30 AM IST
ಫೋಟೋ- ಕಮಲಾಪುರ 1 ಮತ್ತು ಕಮಲಾಪುರ 2 | Kannada Prabha

ಸಾರಾಂಶ

ರಾಜ್ಯದ ಜನತೆಯ ಕುಂದುಕೊರತೆಗಳನ್ನು ಮತ್ತು ಅಹವಾಲುಗಳನ್ನು ಆಲಿಸಿ ಸ್ಥಳದಲ್ಲಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ "ಪ್ರಜಾ ಸೇವೆ " ಆಂದೋಲನಾ ಸಭೆ ಕಮಲಾಪುರದಲ್ಲಿ ಸೆ.5 ರಂದು ಜಿಲ್ಲಾ ಉಸ್ತುವಾರಿ‌ ಸಚಿವ ಪ್ರಿಯಾಂಕ್‌ ಖರ್ಗೆ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಕನ್ನಡಪ್ರಭ ವರ್ತೆ ಕಲಬುರಗಿ.ರಾಜ್ಯದ ಜನತೆಯ ಕುಂದುಕೊರತೆಗಳನ್ನು ಮತ್ತು ಅಹವಾಲುಗಳನ್ನು ಆಲಿಸಿ ಸ್ಥಳದಲ್ಲಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ "ಪ್ರಜಾ ಸೇವೆ " ಆಂದೋಲನಾ ಸಭೆ ಕಮಲಾಪುರದಲ್ಲಿ ಸೆ.5 ರಂದು ಜಿಲ್ಲಾ ಉಸ್ತುವಾರಿ‌ ಸಚಿವ ಪ್ರಿಯಾಂಕ್‌ ಖರ್ಗೆ ಅಧ್ಯಕ್ಷತೆಯಲ್ಲಿ ನಡೆಯಲಿದೆ.ಈ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಇಕ್ರಂ ಶರೀಫ್ ಅವರು ಕಮಲಾಪುರ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ ಅಂತಿಮ ಸಿದ್ಧತೆ ಕಾರ್ಯ ವೀಕ್ಷಿಸಿದರು.ಜೆಸ್ಕಾಂ ಅಧ್ಯಕ್ಷ‌ ಪ್ರವೀಣ ಪಾಟೀಲ ಹರವಾಳ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್,‌ ಎಸ್.ಪಿ. ಅಡ್ಡೂರು ಶ್ರೀನಿವಾಸುಲು, ಜಿಲ್ಲಾ ಪಂಚಾಯಿತಿ ಸಿಇಓ ರಾಹುಲ್ ಸಂಕನೂರು ಅವರೊಂದಿಗೆ ಕಾರ್ಯಕ್ರಮ‌ ಸ್ಥಳ, ಪಾರ್ಕಿಂಗ್, ಊಟದ ಸ್ಥಳ ವೀಕ್ಷಿಸಿದ ಅವರು ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರುವಂತೆ ಈಗಾಗಲೆ ವಿವಿಧ ಸಮಿತಿಗಳನ್ನು ರಚಿಸಿದ್ದು, ಆಯಾ ಅಧಿಕಾರಿಗಳು ತಮಗೆ ನೀಡಿದ ಜವಾಬ್ದಾರಿಯಂತೆ ಎಲ್ಲಾ ಪೂರ್ವಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾದಿಕಾರಿಗಳು, ತಾಲೂಕಿನ ವಿವಿಧೆಡೆಯಿಂದ ಆಗಮಿಸುವ ಸಾರ್ವಜನಿಕರಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಕುಡಿಯುವ ನೀರು,‌ ಊಟ, ಮೊಬೈಲ್ ಟಾಯ್ಲೆಟ್‌ ವ್ಯವಸ್ಥೆ ಮಾಡಬೇಕು. ಆಸನದ ವ್ಯವಸ್ಥೆ, ಶಾಮಿಯಾನ ಹಾಕಬೇಕು. ಗಣ್ಯರ, ಅಧಿಕಾರಿಗಳ, ಸಾರ್ವಜನಿಕರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಪೊಲೀಸ್ ಭದ್ರತೆ ಕಲ್ಪಿಸಬೇಕು. ಕಾರ್ಯಕ್ರಮಕ್ಕೆ ವಿದ್ಯುತ್ ವ್ಯತ್ಯಯವಾಗದಂತೆ ಎಚ್ಚರ ವಹಿಸಬೇಕು. ಜತೆಗೆ ಮುಂಜಾಗ್ರತವಾಗಿ ಆ್ಯಂಬುಲೆನ್ಸ್, ಅಗ್ನಿಶಾಮಕ ವಾಹನ ಸ್ಥಳದಲ್ಲಿ ಸಿದ್ಧವಿಡುವಂತೆ ಡಿ.ಸಿ. ಸೂಚಿಸಿದರು.ಸಾರ್ವಜನಿಕರ ಊಟಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಜನಸಂಖ್ಯೆ ಅನುಗುಣವಾಗಿ ಕೌಂಟರ್ ಸ್ಥಾಪಿಸಬೇಕು. ಕಾಲೇಜು ಆವರಣ ಸಂಪೂರ್ಣ ಸ್ವಚ್ಛತೆ ಕಾಯ್ದುಕೊಳ್ಳಬೇಕು ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.ಪಂಚಾಯತಿವಾರು ಸ್ಟಾಲ್‌: ತಾಲೂಕಿನ 19 ಗ್ರಾಮ ಪಂಚಾಯತಿವಾರು ಕೌಂಟರ್ ಸ್ಥಾಪಿಸಬೇಕು. ಮುಖ್ಯವಾಗಿ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಕಂದಾಯ, ಗ್ರಾಮೀಣಾಭಿವೃದ್ಧಿ, ಪಟ್ಟಣ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಲೀಡ್ ಬ್ಯಾಂಕ್,‌ ಎಸ್.ಐ.ಆರ್., ವಿಬಿ-ಜಿ-ರಾಮ್ ಜಿ, ಭಾರತ ಜೋಡೊ ಯುವ ಸಂಘ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತ, ಹಿಂದುಳಿದ, ಆಹಾರ, ಜೆಸ್ಕಾಂ, ಯುವ ನಿಧಿ, ಸಹಕಾರ ಸೇರಿದಂತೆ ಹೀಗೆ 20 ಪ್ರಮುಖ ಇಲಾಖೆಗಳು ಸಹ ಸ್ಟಾಲ್ ಹಾಕಿ ಇಲಾಖೆ ಯೋಜನೆಗಳ ಕುರಿತು ಅರಿವು ಮೂಡಿಸುವ‌ ಕೆಲಸ ಮಾಡಬೇಕು. ಜತೆಗೆ ಸಹಾಯವಾಣಿ ಸ್ಟಾಲ್ ಸಹ ಸ್ಥಾಪಿಸಬೇಕಿದ್ದು, ಇನ್ನು ಪ್ರತಿ ಸ್ಟಾಲ್ ನಲ್ಲಿ ಕಂಪ್ಯೂಟರ್ ಅಪರೇಟರ್, ಸಿಬ್ಬಂದಿ ನಿಯೋಜಿಸಬೇಕು. ಇಂಟರ್‌ನೆಟ್‌, ವಿದ್ಯುತ್ ವ್ಯವಸ್ಥೆ ಇರುವಂತೆಯೂ ನೋಡಿಕೊಳ್ಳಬೇಕೆಂದರು.

ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ, ಕಮಲಾಪೂರ ತಹಸೀಲ್ದಾರ್‌ ಮೊಹಮ್ಮದ ಮೋಹಸೀನ್, ತಾಪಂ ಇ.ಓ. ರಮೇಶ ಪಾಟೀಲ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಅಧಿಕಾರಿಗಳೇ ತಯಾರಾಗಿರಿ: ಪ್ರಜಾ ಸೇವೆ ಸಭೆಯಲ್ಲಿ ಸಾರ್ವಜನಿಕರು ಯಾವುದೇ ಇಲಾಖೆಗೆ ಸಂಬಂಧಿಸಿದ ದೂರು, ಅರ್ಜಿ ತೆಗೆದುಕೊಂಡು ಸಚಿವರ ಮುಂದೆ ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಕಮಲಾಪುರ ತಾಲೂಕಿಗೆ ಸಂಬಂಧಿಸಿ ಆಯಾ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಅಗತ್ಯ ಮಾಹಿತಿಯೊಂದಿಗೆ ಸಭೆಯಲ್ಲಿ ಹಾಜರಿರಬೇಕು.‌ ಸಚಿವರು ಏನೇ ಪ್ರಶ್ನೆ ಕೇಳಿದರೂ ಸ್ಥಳದಲ್ಲಿಯೆ ಉತ್ತರ ನೀಡಬೇಕು. ಉತ್ತರ ನೀಡಲು ತಡಬಡಾಯಿಸಿ ಸರ್ಕಾರಕ್ಕೆ ಮುಜುಗರವಾಗುವಂತೆ ನಡೆದುಕೊಂಡಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭೀಮಾ ನದಿ ನೀರು ಬಳೂರ್ಗಿ ಕೆರೆಗೆ: ರೈತರಲ್ಲಿ ಆಶಾಕಿರಣ
ಮೂಡುಗೂರು ಇಮ್ಮಡಿ ಉದ್ದಾನೇಶ್ವರ ಮಠದಲ್ಲಿ ವಚನ ಕಲ್ಯಾಣ