ಕಾರಟಗಿ: ಸರ್ಕಾರಿ ಆಡಳಿತವೇ ಜನರ ಮನೆಬಾಗಿಲಿಗೆ ತೆರಳಿ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದೇ ಪ್ರಜಾಸೇವೆ ಆಂದೋಲನದ ಮುಖ್ಯ ಉದ್ದೇಶವಾಗಿದೆ ಎಂದು ತಹಸೀಲ್ದಾರ್ ಎಂ. ಕುಮಾರಸ್ವಾಮಿ ಹೇಳಿದರು.
ತಾಪಂ ಇಒ ಲಕ್ಷ್ಮೀದೇವಿ ಯಾದವ್ ಮಾತನಾಡಿ, ಸ್ಥಳದಲ್ಲಿಯೇ ಪರಿಹರಿಸಬಹುದಾದ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು. ಉಳಿದ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ವಿವಿಧ ಬೇಡಿಕೆಗಳ ಮನವಿ: ಸಭೆಯಲ್ಲಿ ವೃದ್ಧಾಪ್ಯ ವೇತನ, ಮನೆಗಳಿಗೆ ವಿದ್ಯುತ್ ಸಂಪರ್ಕ, ಮೈಲಾಪುರಕ್ಕೆ ಬಸ್ ಸೌಲಭ್ಯ, ಗ್ರಾಮ ಒನ್ ಕೇಂದ್ರ ಆರಂಭ, ಕುಡಿಯುವ ನೀರಿನ ವ್ಯವಸ್ಥೆ, ನೀರಿನ ಟ್ಯಾಂಕ್ ದುರಸ್ತಿ, ಜಲಜೀವನ್ ಮಿಷನ್ ಸಂಪರ್ಕ, ಗೃಹಲಕ್ಷ್ಮೀ ಹಣ ಜಮೆ, ವಸತಿ ಯೋಜನೆಯ ಬಾಕಿ ಹಣ, ದನದ ಶೆಡ್ ನಿರ್ಮಾಣದ ಬಾಕಿ ಅನುದಾನ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಗ್ರಾಮಸ್ಥರು ಅರ್ಜಿ ಸಲ್ಲಿಸಿದರು.ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಬಸ್ ನಿಲ್ದಾಣದಲ್ಲಿರುವ ಟಿಸಿಯನ್ನು ಸ್ಥಳಾಂತರಿಸಬೇಕು, ತಾತಪ್ಪ ಕಟ್ಟೆ ಅಭಿವೃದ್ಧಿಪಡಿಸಬೇಕು ಹಾಗೂ ಪ್ರಾಥಮಿಕ ಸಹಕಾರಿ ಸಂಘದಲ್ಲಿ ಎಲ್ಲ ಮಹನೀಯರ ಜಯಂತಿ ಆಚರಿಸಬೇಕು ಎಂಬ ಬೇಡಿಕೆಗಳನ್ನೂ ಮುಂದಿಟ್ಟರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಸದಸ್ಯ ಸೋಮನಾಥ ದೊಡ್ಡಮನಿ, ತಾಲೂಕು ಸದಸ್ಯೆ ಶಾಂತಾ ನಾಯಕ, ಗ್ರಾಪಂ ಮಾಜಿ ಅಧ್ಯಕ್ಷ ವೀರೇಶ ತಳವಾರ, ತಾಲೂಕು ವೈದ್ಯಾಧಿಕಾರಿ ಡಾ. ಗೌರಿಶಂಕರ, ಅಬಕಾರಿ ಪಿಎಸ್ಐ ಶಿವಪ್ಪ ಪಾಟೀಲ್, ಕೆಎಸ್‌ಆರ್‌ಟಿಸಿ ಕಾರಟಗಿ ಘಟಕದ ಪರಶುರಾಮ ಉಪಸ್ಥಿತರಿದ್ದರು.