ಕನ್ನಡಪ್ರಭ ವಾರ್ತೆ ಬೆಂಗಳೂರು
ಲೈಂಗಿಕ ಹಗರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ, ಶಾಸಕ ಎಚ್.ಡಿ.ರೇವಣ್ಣ ಹಾಗೂ ಅವರ ಪುತ್ರ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ವಿಶೇಷ ತನಿಖಾ ದಳ (ಎಸ್‌ಐಟಿ) ಮಂಗಳವಾರ ನೋಟಿಸ್ ಜಾರಿಗೊಳಿಸಿದೆ. ಬೆಂಗಳೂರಿನ ಜೆ.ಪಿ.ನಗರ ಹಾಗೂ ಹೊಳೆನರಸೀಪುರದಲ್ಲಿರುವ ರೇವಣ್ಣ ಅವರ ಮನೆಗಳ ವಿಳಾಸ ಮತ್ತು ಅವರ ವಾಟ್ಸ್ಆಪ್ ನಂಬರ್‌ಗಳಿಗೆ ಎಸ್‌ಐಟಿ ನೋಟಿಸ್ ರವಾನಿಸಿದೆ.ಈ ನೋಟಿಸ್ ಸ್ವೀಕರಿಸಿದ 24 ತಾಸಿನೊಳಗೆ ಅಥವಾ ತ್ವರಿತವಾಗಿ ತಾವು ತನಿಖಾಧಿಕಾರಿ ಮುಂದೆ ವಿಚಾರಣೆ ಹಾಜರಾಗಬೇಕು ಎಂದು ಆರೋಪಿತರಿಗೆ ಅಧಿಕಾರಿಗಳು ಸೂಚಿಸಿದ್ದಾರೆ. ಈ ಬೆನ್ನಲ್ಲೇ ವಿದೇಶಕ್ಕೆ ತೆರಳಿರುವ ಪ್ರಜ್ವಲ್ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹೊಳೆನರಸೀಪುರ ಠಾಣೆಯಲ್ಲಿ ಮಾಜಿ ಸಚಿವ ರೇವಣ್ಣ ಮತ್ತು ಅವರ ಪುತ್ರ ಪ್ರಜ್ವಲ್ ವಿರುದ್ಧ ಅವರ ಮನೆಯ ಮಹಿಳಾ ಕೆಲಸದಾಳು ದೂರು ನೀಡಿದ್ದರು. ಈ ದೂರಿನ ಮೇರೆಗೆ ತಂದೆ-ಮಗನ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಜೀವ ಬೆದರಿಕೆ ಆರೋಪದಡಿ ಎಫ್‌ಐಆರ್ ದಾಖಲಾಗಿದೆ. ಈ ಕೃತ್ಯದ ತನಿಖೆ ನಡೆಸುತ್ತಿರುವ ಎಸ್‌ಐಟಿ, ರೇವಣ್ಣ ಹಾಗೂ ಪ್ರಜ್ವಲ್ ಅವರಿಗೆ ನೋಟಿಸ್ ಜಾರಿಗೊಳಿಸಿದೆಗೈರಾದರೆ ರೆಡ್ ಕಾರ್ನರ್ ಸಾಧ್ಯತೆ?ನೋಟಿಸ್ ಹಿನ್ನಲೆಯಲ್ಲಿ ಒಂದು ವೇಳೆ ಪ್ರಜ್ವಲ್ ರೇವಣ್ಣ ವಿಚಾರಣೆಗೆ ಸತತ ಗೈರಾದರೆ ಅವರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲು ಎಸ್‌ಐಟಿ ಮುಂದಾಗಬಹುದು ಎಂದು ಮೂಲಗಳು ಹೇಳಿವೆ.ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ಕೂಡಲೇ ಪ್ರಜ್ವಲ್ ರಾಜ್ಯ ತೊರೆದು ವಿದೇಶಕ್ಕೆ ತೆರಳಿದ್ದಾರೆ. ಹೀಗಾಗಿ ಪ್ರಕರಣ ಸಂಬಂಧ ಎರಡ್ಮೂರು ಬಾರಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್ ನೀಡಲಿದೆ. ಈಗಾಗಲೇ ಮೊದಲ ನೋಟಿಸ್ ಅನ್ನು ಸಂಸದರಿಗೆ ಎಸ್‌ಐಟಿ ರವಾನಿಸಿದೆ.
ಈ ನೋಟಿಸ್‌ಗಳಿಗೆ ಪ್ರತಿಕ್ರಿಯಿಸದೆ ಹೋದರೆ ಆಗ ನ್ಯಾಯಾಲಯಕ್ಕೆ ಆರೋಪಿ ವಿರುದ್ಧ ವಾರೆಂಟ್ ಜಾರಿಗೊಳಿಸಲು ಎಸ್‌ಐಟಿ ಮನವಿ ಮಾಡಬಹುದು. ಬಳಿಕ ನ್ಯಾಯಾಲಯದ ಒಪ್ಪಿಗೆ ಮೇರೆಗೆ ವಿದೇಶದಲ್ಲಿರುವ ಸಂಸದರ ಪತ್ತೆಗೆ ಇಂಟರ್ ಪೋಲ್ ಮೂಲಕ ರೆಡ್ ಕಾರ್ನರ್ ಅನ್ನು ಎಸ್ಐಟಿ ಜಾರಿಗೊಳಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.