ಕನ್ನಡಪ್ರಭ ವಾರ್ತೆ ವಿಜಯಪುರ
ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಘಟನೆಯಲ್ಲಿ ಭಾಗಿಯಾದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮಂಗಳವಾರ ಧರಣಿ ನಡೆಸಿದರು. ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷೆ ಭಾರತಿ ವಾಲಿ ಮಾತನಾಡಿ, ಕರ್ನಾಟಕ ಸರ್ಕಾರ ಹಾಸನದ (ಪೆನ್‌ಡ್ರೈವ್) ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳಕ್ಕೆ ಹಸ್ತಾಂತರಿಸಿದ್ದು ಸ್ವಾಗತಾರ್ಹ. ಪ್ರಕರಣದ ತನಿಖೆಗೆ ಹಾಗೂ ಆರೋಪಿಗಳ ಬಂಧನಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಅಧಿಕಾರ ಮತ್ತು ಸೂಕ್ತ ವ್ಯವಸ್ಥೆಯನ್ನು ಎಸ್‌ಐಟಿಗೆ ಒದಗಿಸಬೇಕು. ಇಡೀ ಪ್ರಕರಣದ ತನಿಖೆಗೆ ಜನಸ್ನೇಹಿ ಹಾಗೂ ಮಹಿಳಾಪರ ಸಂವೇದನೆ ಹೊಂದಿರುವ ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಳ್ಳಬೇಕು. ಈಗ ನೇಮಕವಾಗಿರುವ ಪಬ್ಲಿಕ್ ಪ್ರಾಸಿಕ್ಯೂಟರ್ ಜೊತೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅನ್ನು ನೇಮಿಸಿ ತನಿಖೆ ಚುರುಕಾಗಿ ನಡೆದು ಆದಷ್ಟು ಬೇಗ ಸತ್ಯಾಂಶ ಹೊರಗೆ ಬರಬೇಕು. ಅಲ್ಲದೆ, ಅಪರಾಧಿಗೆ ತಕ್ಕ ಶಿಕ್ಷೆ ವಿಧಿಸಬೇಕು. ಯಾವುದೇ ಕಾರಣಕ್ಕೂ ಸಾಕ್ಷಿ ನಾಶವಾಗದಂತೆ ಎಚ್ಚರವಹಿಸಬೇಕು ಎಂದು ಒತ್ತಾಯಿಸಿದರು.
ಸೌಜನ್ಯ ಪ್ರಕರಣದಲ್ಲಿ ಪ್ರಾಥಮಿಕ ತನಿಖೆಯಲ್ಲಿನ ಲೋಪದಿಂದ ನ್ಯಾಯ ನೀಡಲು ಸಾಧ್ಯವಾಗಿಲ್ಲ ಎಂಬುವುದನ್ನು ಸಿ.ಬಿ.ಐ ನ್ಯಾಯಾಲಯವೇ ಹೇಳಿದ ಘಟನೆ ಇದೇ ನೆಲದಲ್ಲಿ ನಡೆದಿದೆ. ಅದನ್ನು ನಾವೆಂದೂ ಮರೆಯಲು ಸಾಧ್ಯವಿಲ್ಲ. ತನಗಿರುವ ಅಧಿಕಾರ, ಅಂತಸ್ತು, ಕುಟುಂಬದ ಪ್ರಭಾವ ಮತ್ತು ಜಾತಿ ಪ್ರಭಾವವನ್ನು ಬಳಸಿ ನೂರಾರು ಮಹಿಳೆಯರನ್ನು ತನ್ನ ಕಾಮದಾಹಕ್ಕೆ ಬಳಸಿಕೊಂಡು ನಡೆಸಿದ ಲೈಂಗಿಕ ಕ್ರಿಯೆ ಮತ್ತು ಅವರೊಂದಿಗೆ ನಡೆಸಿದ ನಗ್ನ ವಿಡಿಯೋ ಚಾಟ್‌ಗಳನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ಸಾವಿರಾರು ವಿಡಿಯೋಗಳನ್ನು ಸಂಗ್ರಹಿಸಿಕೊಂಡಿರುವ ಪೆನ್‌ಡೈವ್ ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ರುವಾರಿ ಎನ್ನಲಾದ ಪ್ರಜ್ವಲ್ ರೇವಣ್ಣನನ್ನು ಕೂಡಲೇ ಬಂಧಿಸಿ ಆತನ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.ಹೋರಾಟಗಾರ್ತಿ ಸುರೇಖಾ ರಜಪೂತ ಮಾತನಾಡಿ, ಹಾಸನ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೊಳಗಾಗುತ್ತಿದೆ. ಎಲ್ಲೆಡೆ ಈ ಕೃತ್ಯದ ಕುರಿತು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಚಿತ್ರಗಳು ಮತ್ತು ದೃಶ್ಯಗಳ ಮೂಲಕ ಮಹಿಳೆಯರ ಘನತೆ ಮತ್ತು ಖಾಸಗಿ ಬದುಕಿನ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದರು.
ಈ ಘಟನೆಯಲ್ಲಿ ಜನಪ್ರತಿನಿಧಿಗಳಾಗಿರುವವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವುದು ಕಾಣುತ್ತಿದೆ. ಪ್ರಜ್ವಲ್ ರೇವಣ್ಣಈ ವೇಳೆ ಜಿಲ್ಲಾ ಕಾರ್ಯದರ್ಶಿ ಎ.ಆರ್. ಹಜೇರಿ ಮಾತನಾಡಿದರು. ಉಪಾಧ್ಯಕ್ಷೆ ರಾಜಮಾ ನಧಾಪ, ಕುಸಮಾ ಹಜೇರಿ, ಸುಮಿತ್ರಾ ಗೊಣಸಗಿ, ಗಂಗುಬಾಯಿ ಸಿಂದಗಿ, ಮಂಜುಳಾ ಹಜೇರಿ, ಉಪಾಧ್ಯಕ್ಷರಾದ ಮಾಬೂಬಿ ಪಾಂಡುಗೋಳ, ಶಮಶಾದ ಚಡಚಣ, ಸದಸ್ಯರಾದ ಸಕುಬಾಯಿ ಕಟ್ಟಿಮನಿ, ರಮಿಜಾ ತಿಕೋಟಾ, ಲಾಲಬಿ ವಾಲಿಕಾರ ಸೇರಿದಂತೆ ಮುಂತಾದವರು ಇದ್ದರು.
---ಕೋಟ್
ನಡೆಸಿರುವ ಲೈಂಗಿಕ ದೌರ್ಜನ್ಯಗಳಿಗೆ ಸಂಬಂಧಿಸಿದ ಸಾವಿರಾರು ವಿಡಿಯೋಗಳನ್ನು ಒಳಗೊಂಡಿರುವ ’ಪೆನ್‌ಡೈವ್’ ತನ್ನ ಬಳಿ ಇದೆ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿರುವ ಬಿಜೆಪಿ ಮುಖಂಡ ಜಿ. ದೇವರಾಜೇಗೌಡರನ್ನು ವಿಚಾರಣೆಗೆ ಒಳಪಡಿಸಿ ಅವರಿಗೆ ಪೆನ್‌ಡೈವ್ ಯಾರಿಂದ ಬಂತು ಆ ವ್ಯಕ್ತಿಯಿಂದ ಯಾರ್ಯಾರಿಗೆ ಪೆನ್ ಡ್ರೈವ್ ಹಂಚಿಕೆಯಾಗಿದೆ ಮತ್ತು ಯಾವ ಮೊಬೈಲ್‌ನಿಂದ ಚಿತ್ರೀಕರಣವಾಗಿದೆ ಎನ್ನುವುದನ್ನು ಪತ್ತೆಹಚ್ಚಿಬೇಕು.-ಸುರೇಖಾ ರಜಪೂತ ಮಹಿಳಾ ಹೋರಾಟಗಾರ್ತಿ