ಕನ್ನಡಪ್ರಭ ವಾರ್ತೆ ಹಳೇಬೀಡು ೭೫% ಶ್ರವಣದೋಷವಿದ್ದರೂ ವಾಲಿಬಾಲ್‌ನಲ್ಲಿ ಉತ್ತಮ ಸಾಧನೆ 2023ನೇ ಇಂಟರ್‌ನ್ಯಾಷನಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಮತ್ತು ನೇಪಾಳ ದೇಶಗಳ ನಡುವೆ ವಾಲಿಬಾಲ್ ಕ್ರೀಡಾಕೂಟ ವಯೋಮಿತಿ ೧೯ ವರ್ಷದೊಳಗಿನವರದು ಡಿಸೆಂಬರ್ ಮೊದಲನೇ ವಾರದಲ್ಲಿ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ನಡೆಯಲಿದೆ. ಈ ಕ್ರೀಡಾಕೂಟಕ್ಕೆ ಹಳೇಬೀಡಿನ ಗ್ರಾಮಾಂತರ ಪ್ರದೇಶದ ಅಭ್ಯರ್ಥಿ ಪ್ರಜ್ವಲ್ ಪರಮೇಶ್ ಆಯ್ಕೆಯಾಗಿದ್ದಾರೆ. ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ, "ನಾವು ಅಕ್ಟೋಬರ್ 3ರಿಂದ 5ರವರೆಗೆ 2023ರ ನ್ಯಾಷನಲ್ ಫೆಡರೇಷನ್ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯದಿಂದ ವಾಲಿಬಾಲ್‌ನಲ್ಲಿ ಆಯ್ಕೆಯಾಗಿದ್ದು, ಅದರ ತಂಡದ ನಾಯಕತ್ವವನ್ನು ವಹಿಸಿ ಅಲ್ಲಿ ಗೆದ್ದು ರಾಜ್ಯಕ್ಕೆ ಹೆಸರನ್ನು ತಂದಿದ್ದೇವೆ. ನಂತರ ನಮ್ಮ ತಂಡದ ಕೆಲವರನ್ನು ರಾಷ್ಟ್ರದ ಮಟ್ಟಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಅದರಲ್ಲಿ ನಾನು ಆಯ್ಕೆಯಾಗಿದ್ದೇನೆ " ಎಂದು ಹರ್ಷ ವ್ಯಕ್ತಪಡಿಸಿ, ನಮ್ಮ ತಂಡದ ತರಬೇತುದಾರರಾದ ರಾಧಾಕೃಷ್ಣನ್ ಅವರ ಮಾರ್ಗದರ್ಶನ ನಮ್ಮ ಈ ಸಾಧನೆಗೆ ಕಾರಣ ಎಂದು ಸ್ಮರಿಸಿದರು. ಪ್ರಜ್ವಲ್ ಪರಿಚಯ: ಹಳೇಬೀಡಿನ ನಿವಾಸಿ ಎಚ್ .ಪರಮೇಶ್ ಹಾಗೂ ಸುಮ (ತಾ.ಪಂ ಮಾಜಿ ಅಧ್ಯಕ್ಷೆ) ದಂಪತಿಯ ಎರಡನೇ ಮಗನಾದ ಪ್ರಜ್ವಲ್ ಅವರು ಹಳೇಬೀಡಿನಲ್ಲಿ ಹುಟ್ಟಿ ಪ್ರಾಥಮಿಕ ಮತ್ತು ಹೈಸ್ಕೂಲ್ ಹಳೇಬೀಡಿನ ಕಲ್ಪತರು ವಿದ್ಯಾಸಂಸ್ಥೆಯಲ್ಲಿ ಓದಿ ನಂತರ ಪಿ.ಯು.ಸಿ ದಕ್ಷಿಣ ಕನ್ನಡದಲ್ಲಿ ಬಿ.ಬಿ.ಎ.ಯನ್ನು ಬೆಂಗಳೂರಿನ ರೇವಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರು ಮೂಲತಃ ೭೫% ಶ್ರವಣದೋಷ ಇರುವ ವ್ಯಕ್ತಿ .(ಅಂಗವಿಕಲತೆಯನ್ನು ಹೊಂದಿದ್ದಾರೆ) ಆದರೂ ಸಹ ಎಲ್ಲಾ ಕ್ರೀಡೆಯಲ್ಲಿ ಸರ್ವೇ ಸಾಮಾನ್ಯವಾಗಿ ಆಡುತ್ತಾರೆ. ಇವರಿಗೆ ವಾಲಿಬಾಲ್ ಪ್ರೀತಿಯ ಆಟ. ಅದರಲ್ಲಿ ಅತ್ಯುತ್ತಮವಾಗಿ ಆಡುತ್ತಿದ್ದಾರೆ. ೭ನೇ ತರಗತಿಯಲ್ಲಿ ಇದ್ದಾಗ ೧೨ನೇ ವರ್ಷದ ವಿಭಾಗ ಮಟ್ಟದಲ್ಲಿ ಅಂದು ಕರ್ನಾಟಕ ರಾಜ್ಯ ಮಟ್ಟದಲ್ಲಿ ವಾಲಿಬಾಲ್ ಕ್ರೀಡೆ ಆಡಿ ಪ್ರಶಸ್ತಿಯನ್ನು ಪಡೆದಂತ ಈ ಯುವಕ, ಇಂದು ರಾಷ್ಟ್ರಮಟ್ಟದಲ್ಲಿ ಆಡುತ್ತಿರುವುದು ತುಂಬಾ ಸಂತೋಷದ ವಿಚಾರ ಎಂದು ಹಳೇಬೀಡಿನ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ. ಬೇಲೂರು ಕ್ಷೇತ್ರ ಶಾಸಕ ಎಚ್.ಕೆ.ಸುರೇಶ್ ಮಾತನಾಡುತ್ತ, ನನ್ನ ಕ್ಷೇತ್ರದ ಈ ಕ್ರೀಡಾಪಟುವಿಗೆ ಒಳ್ಳೆಯದಾಗಲಿ. ದೇವರ ಆಶೀರ್ವಾದ ಸದಾ ಇರಲಿ. ಮುಂದಿನ ದಿನಗಳಲ್ಲಿ ದೇಶಕ್ಕೆ ಒಳ್ಳಯ ಹೆಸರು ತರಲಿ. ನಮ್ಮ ಸಹಕಾರ ಯಾವಾಗಲೂ ಇರುತ್ತದೆ ಎಂದು ತಿಳಿಸಿದರು. ಇವರ ತಾಯಿ ಸುಮ ಪರಮೇಶ್ ಮಧ್ಯಮದೊಂದಿಗೆ ಮಾತನಾಡುತ್ತ, ಪ್ರಜ್ವಲ್ ಹುಟ್ಟಿದ ಒಂದು ವರ್ಷ ಯಾವುದೆ ತೊಂದರೆ ಇಲ್ಲದೆ ಚೆನ್ನಾಗಿ ಇದ್ದವನು ಯಾವುದೋ ಒಂದು ಸಣ್ಣ ಕಾರಣಕ್ಕಾಗಿ ಆಸ್ಪತ್ರೆಗೆ ತೋರಿಸಿದಾಗ ಅಲ್ಲಿಯ ವೈದ್ಯಕೀಯ ವ್ಯತ್ಯಾಸದಿಂದ ಇವನು ಶ್ರವಣ ದೋಷಕ್ಕೆ ಒಳಗಾಗಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು. ಆದರೂ ಸಹ ಓದಿನಲ್ಲಿ - ಆಟದಲ್ಲೂ ಮುಂದೆ, ಎಲ್ಲಾ ವಿಚಾರಗಳು ಬಗ್ಗೆ ನಿರರ್ಗಳವಾಗಿ ಮಾತನಾಡಬಲ್ಲ. ಇದರ ಬಗ್ಗೆ ನಮಗೆ ಸಂತೋಷವಿದೆ ಎಂದು ತಿಳಿಸಿದರು.