ಕನ್ನಡಪ್ರಭ ವಾರ್ತೆ ಧಾರವಾಡ
ರೈತರ ಪಂಪ್‌ಸೆಟ್‌ಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ ಎಂದು ಆಕ್ರೋಶಗೊಂಡ ತಾಲೂಕಿನ ನರೇಂದ್ರ ಗ್ರಾಮದ ರೈತರು ಸಮೀಪದ ಕೃಷಿ ವಿವಿ ಬಳಿಯ ವಿದ್ಯುತ್ ವಿತರಣಾ ಕೇಂದ್ರಕ್ಕೆ ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.ಮಳೆ ಕೊರತೆಯಿಂದ ರೈತರು ಪಂಪ್‌ಸೆಟ್‌ಗಳನ್ನೇ ಅವಲಂಭಿಸಿದ್ದಾರೆ. ಅದರ ಮೂಲಕವೇ ಬೆಳೆಗಳಿಗೆ ನೀರು ಹಾಯಿಸುತ್ತಿದ್ದಾರೆ. ಆದರೆ, ಸರಿಯಾದ ರೀತಿಯಲ್ಲಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಬೆಳೆಗಳು ಒಣಗಿ ಹೋಗುತ್ತಿವೆ ಎಂದು ರೈತರು ಎತ್ತು, ಚಕ್ಕಡಿ ಸಮೇತ ವಿದ್ಯುತ್ ವಿತರಣಾ ಕೇಂದ್ರಕ್ಕೆ ಮುತ್ತಿಗೆ ಹಾಕಿದರು.
ಹೆಸ್ಕಾಂನವರು ಮೊದಲಿನಂತೆಯೇ ಏಳು ತಾಸು ತ್ರಿಫೇಸ್ ವಿದ್ಯುತ್ ವಿತರಣೆ ಮಾಡಬೇಕು ಎಂದು ರೈತರು ಒತ್ತಾಯಿಸಿದರು. ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಉತ್ಪಾದನೆ ಕೊರತೆಯಿಂದ ಹೀಗಾಗಿದ್ದು ವಾರದೊಳಗೆ ಸಮಸ್ಯೆಗೆ ಪರಿಹಾರ ನೀಡಲಾಗುವುದು ಎಂದು ಮನವಿ ಮಾಡಿದರು. ರೈತರು ವಿದ್ಯುತ್ ವಿತರಣಾ ಕೇಂದ್ರಕ್ಕೆ ಮುತ್ತಿಗೆ ಹಾಕಿದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.ಗ್ರಾಪಂ ಅಧ್ಯಕ್ಷ ನಾಗೇಶ ಹೊಟ್ಟಿಹೊಳಿ, ಶಂಕರ ಕೋಮಾರದೇಸಾಯಿ, ಚನ್ನವೀರಗೌಡ ಪಾಟೀಲ, ಮಂಜುನಾಥ ಈಳಿಗೇರ, ಈರಪ್ಪ ಗಂಟಿ, ಮುತಾಲಿಕ ದೇಸಾಯಿ, ಈರಪ್ಪ ಗಾಣಿಗೇರ, ಚನಮಲ್ಲಪ್ಪ ಮೊರಬ, ಸಿದ್ದನಗೌಡ ಪಾಟೀಲ, ಅಪ್ಪಣ್ಣ ಹಡಪದ, ಬಸವರಾಜ ಸೋಗಿ ಇದ್ದರು.