ಶಿಕಾರಿಪುರ: ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಸರ್ಕಾರಿ ಉದ್ಯೋಗ ಪಡೆದಿದ್ದ ವ್ಯಕ್ತಿಗೆ 2 ವರ್ಷ 3 ತಿಂಗಳು ಜೈಲುಶಿಕ್ಷೆ, ₹11 ಸಾವಿರ ದಂಡ ಪಾವತಿಸುವಂತೆ ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ. ಪಟ್ಟಣ ಠಾಣೆ ವ್ಯಾಪ್ತಿ ಭದ್ರಾಪುರದ ನಿವಾಸಿ, 1997ರಲ್ಲಿ ಸೇವೆಗೆ ಸೇರ್ಪಡೆಗೊಂಡಿದ್ದ ಗ್ರಾಮ ಲೆಕ್ಕಾಧಿಕಾರಿ ಮೋಹನಕುಮಾರ್ ಅಪರಾಧಿ. ತಂದೆ ಮೃತರಾದ ಕಾರಣಕ್ಕೆ ಅನುಕಂಪ ಆಧಾರದಲ್ಲಿ ಉದ್ಯೋಗ ನೀಡಲಾಗಿತ್ತು. ತಂದೆ ಸೇವಾ ಪುಸ್ತಕದಲ್ಲಿ ಗಂಗಾಮತ ಎಂದು ನಮೂದಾಗಿತ್ತು. ಆರೋಪಿಯ ಶಾಲಾ ದಾಖಲೆಯಲ್ಲಿ ಮಾತ್ರ ಹಿಂದೂ ಭೋವಿ ಎಂದು ನಮೂದಾಗಿತ್ತು. ಅದನ್ನೆ ಉದ್ಯೋಗ ಪಡೆಯುವುದಕ್ಕೆ ದಾಖಲೆಯಾಗಿ ಬಳಸಿಕೊಂಡು ಸರ್ಕಾರಿ ಉದ್ಯೋಗ ಪಡೆದಿದ್ದರು. ಅಲ್ಲದೇ, ಅವರ ಸೇವಾ ಪುಸ್ತಕದಲ್ಲೂ ಹಿಂದೂ ಭೋವಿ ಎಂದು ನಮೂದಿಸಿದಲ್ಲದೆ ಮುಂಬಡ್ತಿಗೂ ಪ್ರಯತ್ನಿಸಿದ್ದರು. ತನ್ನದು ಗಂಗಾಮತ ಜಾತಿ ಎಂದು ಗೊತ್ತಿದ್ದರೂ ನೇಮಕಾತಿ ಪ್ರಾಧಿಕಾರಕ್ಕೆ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ವಂಚಿಸಲಾಗಿದೆ ಎಂದು ಕಂದಾಯ ಇಲಾಖೆ 2010ರಲ್ಲಿ ಪಟ್ಟಣ ಠಾಣೆಗೆ ದೂರು ನೀಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ವಾದ ವಿವಾದ ಆಲಿಸಿದ ನ್ಯಾಯಾಲಯ ಭಾ.ದಂ.ಸಂ. ಕಲಂ 177ರನ್ವಯ ಸುಳ್ಳು ಮಾಹಿತಿ ನೀಡಿದ ಕಾರಣಕ್ಕೆ 3 ತಿಂಗಳ ಸಾದಾ ಸಜೆ, ₹1000 ದಂಡ ಮತ್ತು ಭಾ.ದಂ.ಸಂ. ಕಲಂ 420, 511ರ ಅನ್ವಯ ವಂಚನೆ, ಅಪರಾಧ ಎಸಗಿದ ಕಾರಣಕ್ಕೆ 2 ವರ್ಷ ಸಾದಾ ಸಜೆ, ₹10 ಸಾವಿರ ದಂಡ ವಿಧಿಸಿ, ಅ.6ರಂದು ನ್ಯಾ. ಆರ್.ಯಶವಂತಕುಮಾರ್ ತೀರ್ಪು ನೀಡಿದ್ದಾರೆ. ಸಹಾಯಕ ಸರಕಾರಿ ಅಭಿಯೋಜಕರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.