ಕನ್ನಡಪ್ರಭ ವಾರ್ತೆ ರಾಯಚೂರು
ನಗರದಲ್ಲಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಪರವಾಗಿ ಅಣ್ಣಾಮಲೈ ಅವರು ರೋಡ್ ಶೋ ಮಾಡಿ, ಪಕ್ಷದ ಪ್ರಮುಖರೊಂದಿಗೆ ಶನಿವಾರ ಸಂವಾದ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಪ್ರಜ್ವಲ್ ಹಾಸನದಿಂದ ಬೆಂಗಳೂರಿಗೆ ಹೋಗುವಾಗಲೇ ಚೆಕ್‌ಪೋಸ್ಟ್ ಹಾಕಿ ಅವರನ್ನು ಹಿಡಿಯಬಹುದಿತ್ತು. ರಾಜ್ಯ ಸರ್ಕಾರ ಸುಮೋಟೊ ಕೇಸ್ ಮಾಡಬೇಕಿತ್ತು ಎಂದು ಗೃಹ ಸಚಿವ ಅಮಿತ್ ಷಾ ಕೂಡ ಹೇಳಿದ್ದಾರೆ. ಎಚ್.ಡಿ.ದೇವೆಗೌಡರು ಕೂಡ ಪ್ರಜ್ವಲ್‌ರನ್ನು ಸಸ್ಪೆಂಡ್ ಮಾಡಿದ್ದಾರೆ. ಪಾಲಿಟಿಕ್ಸ್‌ನಲ್ಲಿ ಏನು ಆಗಬಾರದಿತ್ತೋ ಅದು ಆಗಿದೆ. ಎಸ್‌ಐಟಿ ತನಿಖೆ ಮಾಡಲಿ. ಸಂತ್ರಸ್ತೆಯರಿಗೆ ನ್ಯಾಯ ಸಿಗಲಿ ಎಂದರು.ಕಾಂಗ್ರೆಸ್‌ನವರು ಹಿಂದೆ ಜೆಡಿಎಸ್ ಜತೆ ಮೈತ್ರಿಯಲ್ಲಿದ್ದರು. ಆಗ ಏನು ಮಾತನಾಡಲಿಲ್ಲ. ಈಗ ನೋಡಿದರೆ ಉಲ್ಟಾ ಮಾತನಾಡುತ್ತಿದ್ದಾರೆ. ಜನ ಎಲ್ಲವನ್ನೂ ನೋಡುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೂ ಇದಕ್ಕೂ ಏನು ಸಂಬಂಧ? ಎಲ್ಲ ಸಂಸದರಿಗೂ ಡಿಪ್ಲೋಮೇಟಿಕ್ ಪಾಸ್ ಇದೆ. ಡಿಕೆಶಿ, ನಮ್ಮ ಡಿ.ಕೆ.ಸುರೇಶ್‌ಗೂ ಡಿಪ್ಲೋಮೇಟಿಕ್ ಪಾಸ್ ಇದೆ. ಆದರೆ, ಪ್ರಜ್ವಲ್ ಹೋಗಿದ್ದು ಖಾಸಗಿಯಾಗಿ, ಪಾಸ್‌ಪೋರ್ಟ್ ರದ್ದು ಮಾಡುವ ಹಕ್ಕು ನ್ಯಾಯಾಲಯಕ್ಕಿದೆ. ರಾಜ್ಯ ಸರ್ಕಾರ ಬೇಸಿಕ್ ಹೋಮ್ ವರ್ಕ್ ಕೂಡ ಮಾಡಿಲ್ಲ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್, ವಿವಿಧ ಮೋರ್ಚಾಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.