ವಿಡಿಯೋ ಹರಿಬಿಟ್ಟವರ ವಿರುದ್ಧವೂ ಕ್ರಮ ಕೈಗೊಳ್ಳಿ
ಕನ್ನಡಪ್ರಭ ವಾರ್ತೆ ಹಾಸನಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶಿಸಲು ಭಾಗಿಯಾಗಿರುವ ಎಲ್ಲರನ್ನು ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷೆ ನೀಡುವಂತೆ ಕರ್ನಾಟಕ ಸ್ತ್ರಿರೋಗ ಮತ್ತು ಪ್ರಸೂತಿ ಸಂಘದ ಅಧ್ಯಕ್ಷೆ ಡಾ. ಭಾರತಿ ರಾಜಶೇಖರ್ ಒತ್ತಾಯಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ‘ಸಂಸದ ಪ್ರಜ್ವಲ್ ಅವರ ಲೈಂಗಿಕ ಹಗರಣ ಕುರಿತು ದೇಶಾದ್ಯಂತ ಚರ್ಚೆಯಾಗುತ್ತಿದೆ. ಜಿಲ್ಲೆಯಲ್ಲಿ ಈ ರೀತಿಯ ಲೈಂಗಿಕ ಹಗರಣ ನಡೆದಿರುವುದು ತುಂಬಾ ನೋವಿನ ಸಂಗತಿ. ಸಮಾಜಕ್ಕೆ ಕೆಟ್ಟ ಸಂದೇಶವನ್ನು ಸಾರಿದೆ. ಸಂತ್ರಸ್ತ ಮಹಿಳೆಯರ ವಿಡಿಯೋಗಳನ್ನು ಗೌಪ್ಯವಾಗಿ ಇಡದೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವವರ ವಿರುದ್ಧವು ಕಠಿಣ ಕ್ರಮ ಕೈಗೊಳ್ಳಬೇಕು. ಮಹಿಳೆಯರು ತಮ್ಮ ಮೇಲಾಗಿರುವ ದೌರ್ಜನ್ಯವನ್ನು ಮೆಟ್ಟಿ ನಿಲ್ಲಬೇಕು. ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ನಾವು ಸಹ ಮಾಡಲಿದ್ದೇವೆ. ದುರ್ಬಲರ ಅಸಹಾಯಕತೆ ಗುರಿಯಾಗಿಸಿಕೊಂಡು ಒಬ್ಬ ಸಂಸದನಾಗಿ ಈ ರೀತಿ ಅವರನ್ನು ದುರ್ಬಳಕೆ ಮಾಡಿಕೊಂಡಿರುವುದು ಹೇಯ ಕೃತ್ಯವಾಗಿದೆ. ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಈ ರೀತಿ ಮಾಡುವಂತಹ ಪ್ರತಿಯೊಬ್ಬರಿಗೂ ಪಾಠವಾಗಿ ಎಸ್‌ಐಟಿ ತನಿಖೆ ನಡೆಸಿ ಶಿಕ್ಷ ವಿಧಿಸಬೇಕು’ ಎಂದು ಮನವಿ ಮಾಡಿದರು.ಹಾಸನ ವೈದ್ಯಕೀಯ ಸಂಘದ ರಾಜ್ಯ ಮುಖಂಡರಾದ ಡಾ. ಸಾವಿತ್ರಿ ಅವರು ಮಾತನಾಡಿ, ‘ಇಂತಹ ದೌರ್ಜನ್ಯದ ಘಟನೆಯಿಂದ ರಾಜ್ಯದ ಮಹಿಳೆಯರು ಸಾಕಷ್ಟು ವಿಚಲಿತರಾಗಿದ್ದಾರೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಲೇಬೇಕು.ರಾಜಕೀಯ ಉನ್ನತ ಸ್ಥಾನದಲಿ ಇದ್ದುಕೊಂಡು ಸಹಾಯವನ್ನು ಅರಸಿ ಬರುವ ಮಹಿಳೆಯರನ್ನು ಗುರಿಯಾಗಿಸಿ ಲೈಂಗಿಕವಾಗಿ ಬಳಸಿಕೊ೦ಡಿರುವುದು ಖಂಡನೀಯವಾಗಿದೆ. ಪ್ರಕರಣ ಸಂಬಂಧ ಸರ್ಕಾರ ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ಈ ದೌರ್ಜನ್ಯಕ್ಕೆ ಒಳಗಾಗಿರುವರಿಗೆ ಕೌನ್ಸಲಿಂಗ್ ಆಗಬೇಕು. ಪ್ರಕರಣದಲ್ಲಿ ಸಿಲುಕಿರುವ ಹಲವು ಮಹಿಳೆಯರು ತಮಗಾಗಿರುವ ಶೋಷಣೆಯನ್ನು ಹೇಳಿಕೊಳ್ಳಲು ಆಗುತ್ತಿಲ್ಲ. ಈ ವಿಚಾರದಲ್ಲಿ ಹೆಣ್ಣುಮಕ್ಕಳು ಮಾನಸಿಕ ಆಘಾತಕ್ಕೆ ಒಳಗಾಗಿದ್ದು, ವಿಕೃತ ಕಾಮುಕ ಪ್ರಜ್ವಲ್‌ಗೆ ವಿರುದ್ಧ ಕಾನೂನಡಿ ಕಠಿಣ ಶಿಕ್ಷೆ ಆಗಬೇಕು’ ಎಂದು ಆಗ್ರಹಿಸಿದರು.
ಸ್ತ್ರೀ ರೋಗ ಸಂಘದ ಅಧ್ಯಕ್ಷೆ ಡಾ.ರಂಗಲಕ್ಷ್ಮಿ, ಅನನ್ಯ ಟ್ರಸ್ಟ್ ಅಧ್ಯಕ್ಷೆ ಕೆ.ಟಿ. ಜಯಶ್ರೀ, ಹಾಸನ ಕ್ಲಬ್ ಕಾರ್ಯದರ್ಶಿ ಕಲಾ ನರಸಿಂಹ, ಶ್ರೀ ಆದಿಚುಂಚನಗಿರಿ ಒಕ್ಕಲಿಗರ ಮಹಿಳಾ ಸಂಘದ ಜಂಠಿ ಕಾರ್ಯದರ್ಶಿ ವಾಣಿ ನಾಗೇಶ್ ಇದ್ದರು. ಸಂತ್ರಸ್ತೆಯೇ ಸರಿಯಿಲ್ಲ ಎಂದವರ ವಿರುದ್ಧ ಕ್ರಮಕ್ಕೆ ಒಡನಾಡಿ ಸಂಸ್ಥೆಯಿಂದ ಜಿಲ್ಲಾಡಳಿತ, ಎಸ್‌ಪಿ ಕಚೇರಿಗೆ ದೂರುಕನ್ನಡಪ್ರಭ ವಾರ್ತೆ ಹಾಸನಪ್ರಜ್ವಲ್ ರೇವಣ್ಣ ಮೇಲೆ ದೂರು ನೀಡಿರುವ ಸಂತ್ರಸ್ತ ಮಹಿಳೆಯರ ಮೇಲೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಮಹಿಳೆಯರು ಮತ್ತು ಪುರುಷರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಒಡನಾಡಿ ಸೇವಾ ಸಮಿತಿಯಿಂದ ಜಿಲ್ಲಾಡಳಿತಕ್ಕೆ ಮತ್ತು ಎಸ್ಪಿ ಕಚೇರಿಗೆ ಮನವಿ ಸಲ್ಲಿಸಲಾಯಿತು.ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ನಡೆಸಿದರೆನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನೊಂದ ರೇವಣ್ಣ ಅವರ ಮನೆ ಕೆಲಸದ ಮಹಿಳೆಯರೊಬ್ಬರು ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಪ್ರಕರಣದ ಸಂಬಂಧ ದೂರು ನೀಡಿರುವ ಸಂತ್ರಸ್ತ ಮಹಿಳೆಯರ ವಿರುದ್ಧ ಪ್ರತಿಕಾಗೋಷ್ಠಿ ನಡೆಸಿ, ಅವರ ನಡವಳಿಕೆ ಸರಿಯಿರುವುದಿಲ್ಲ ಎಂದು ಹೇಳಿ, ಚಾರಿತ್ರ್ಯವಧೆ ಮಾಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಿಂದ ಸಂತ್ರಸ್ತ ಮಹಿಳೆಯರು ಹತಾಶೆಗೆ ಒಳಗಾಗುವಂತಾಗಿದೆ ಎಂದು ಸೇವಾ ಸಮಿತಿ ಹೇಳಿದೆ. ಸಂತ್ರಸ್ತ ಮಹಳೆಯರ ಚಾರಿತ್ರ್ಯಹರಣ ಮಾಡುವುದು ಕ್ಷಮಿಸಲಾರದ ಅಪರಾಧ. ನ್ಯಾಯಮೂರ್ತಿ ವರ್ಮಾ ಸಮಿತಿಯ ರಚನೆಯ ಅನ್ವಯ ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗುವ ಅಪರಾಧಿಗಳಿಗೆ ತ್ವರಿತ ವಿಚಾರಣೆ ಮತ್ತು ವರ್ಧಿತ ಶಿಕ್ಷೆಯನ್ನು ಒದಗಿಸಬೇಕು. ಸಂತ್ರಸ್ತ ಮಹಿಳೆಯರ ಘನತೆಯನ್ನು ಕುಗ್ಗುವಂತೆ ಮಾಡಿದ ಮಹಿಳೆಯರು ಮತ್ತು ಪುರುಷರ ವಿರುದ್ಧ ತಕ್ಷಣವೇ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ಒಡನಾಡಿ ಸೇವಾ ಸಮಿತಿ ನಿರ್ದೇಶಕ ಕೆ.ವಿ. ಸ್ಟ್ಯಾನ್ಲಿ ಪರಶುರಾಮು ಮನವಿ ಮಾಡಿದ್ದಾರೆ.ದೇವರಾಜೇಗೌಡರಿಗೆ ಮಾತ್ರ ವಿಡಿಯೋ ಕೊಟ್ಟಿದ್ದೆ: ಅಜ್ಞಾತ ಸ್ಥಳದಿಂದ ಪ್ರಜ್ವಲ್ ಮಾಜಿ ಕಾರು ಚಾಲಕ ವಿಡಿಯೋ ಸಂದೇಶ
ಕನ್ನಡಪ್ರಭ ವಾರ್ತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಸಲೀಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಅಜ್ಞಾತ ಸ್ಥಳದಿಂದ ತನ್ನ ಹೇಳಿಕೆ ಒಳಗೊಂಡ ವಿಡಿಯೋ ಕಳುಹಿಸಿದ್ದು, ಅದರಲ್ಲಿ ತಾನು ಪ್ರಜ್ವಲ್ ಅವರ ಅಶ್ಲೀಲ ವಿಡಿಯೋಗಳ ಒಂದು ಕಾಪಿಯನ್ನು ವಕೀಲ ದೇವರಾಜೇಗೌಡರಿಗೆ ಬಿಟ್ಟರೆ ಮತ್ತ್ಯಾರಿಗೂ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ‘ನಾನು 15 ವರ್ಷದಿಂದ ಪ್ರಜ್ವಲ್ ರೇವಣ್ಣ ಹಾಗೂ ಅವರ ಕುಟುಂಬಕ್ಕೆ ಕಾರು ಚಾಲಕನಾಗಿ ಕೆಲಸ ಮಾಡಿದ್ದೇನೆ. ಒಂದು ವರ್ಷದಿಂದ ಕೆಲಸ ಬಿಟ್ಟಿದ್ದೇನೆ. ನನ್ನ ಜಮೀನು ಬರೆಸಿಕೊಂಡು ನನ್ನ ಪತ್ನಿ ಮೇಲೆ ಹಿಂಸೆ ಕೊಟ್ಟು ಹಲ್ಲೆ ಮಾಡಿದರು. ಆದ್ದರಿಂದ ಅವರ ಮನೆಯಿಂದ ಹೊರಬಂದೆ. ದೇವರಾಜೇಗೌಡ ಇವರ ಫ್ಯಾಮಿಲಿ ವಿರುದ್ಧ ಹೋರಾಟ ಮಾಡುತ್ತಿದ್ದರೂ ಯಾರಿಂದಲೂ ನ್ಯಾಯ ಸಿಗುವುದಿಲ್ಲ ಎಂದು ವಕೀಲ ದೇವರಾಜೇಗೌಡ ಬಳಿ ಹೋದೆ. ಯಾವುದೇ ಅಶ್ಲೀಲ ವಿಡಿಯೋ ರಿಲೀಸ್ ಮಾಡಬಾರದು ಎಂದು ಪ್ರಜ್ವಲ್ ರೇವಣ್ಣ ತಡೆ ತಂದರು. ನಿನ್ನ ಬಳಿ ಇರುವ ವಿಡಿಯೋ, ಫೋಟೋಗಳನ್ನು ನಾನು ಯಾರಿಗೂ ತೋರಿಸುವುದಿಲ್ಲ ಎಂದು ದೇವರಾಜೇಗೌಡ ಕೇಳಿದರು. ನಾನು ನಂಬಿ ನನ್ನ ಬಳಿಯಿದ್ದ ವಿಡಿಯೋದ ಒಂದು ಕಾಪಿಯನ್ನು ಅವರಿಗೆ ಕೊಟ್ಟೆ’ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ‘ದೇವರಾಜೇಗೌಡ ಅದನ್ನು ಸ್ವಾರ್ಥಕ್ಕೆ ಉಪಯೋಗಿಸಿಕೊಂಡಿರುವ ಬಗ್ಗೆ ನನಗೆ ಗೊತ್ತಿಲ್ಲ. ದೇವರಾಜೇಗೌಡರನ್ನು ಬಿಟ್ಟರೆ ಬೇರೆ ಯಾರಿಗೂ ವಿಡಿಯೋ ಕೊಟ್ಟಿಲ್ಲ. ಕಾಂಗ್ರೆಸ್‌ನವರಿಗಂತೂ ನಾನು ವೀಡಿಯೋ ಕೊಟ್ಟಿಲ್ಲ. ಕಾಂಗ್ರೆಸ್‌ನವರ ಮೇಲೆ ನಂಬಿಕೆ ಇಲ್ಲದಿದ್ದರಿಂದ ದೇವರಾಜೇಗೌಡರ ಅವರಿಗೆ ಕೊಟ್ಟಿದ್ದೆ. ಪೆನ್‌ಡ್ರೈವ್ ಯಾರು ಹಂಚಿದರೋ ಗೊತ್ತಿಲ್ಲ. ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಾನು ಕಾಂಗ್ರೆಸ್ ಅವರಿಗೆ ಕೊಡುವುದಿದ್ದರೆ ದೇವರಾಜೇಗೌಡ ಬಳಿ ಏಕೆ ಹೋಗುತ್ತಿದ್ದೆ? ಎಸ್‌ಐಟಿ ಮುಂದೆ ಹಾಜರಾಗಿ ಎಲ್ಲಾ ಹೇಳಿಕೊಳ್ಳುತ್ತೇನೆ. ನಂತರ ಮಾಧ್ಯಮದ ಮುಂದೆ ಎಲ್ಲಾ ವಿವರವಾಗಿ ಹೇಳುತ್ತೇನೆ. ಈ ಪ್ರಕರಣದಲ್ಲಿ ಕಾಂಗ್ರೆಸ್‌ನವರ ಹೆಸರನ್ನು ಬೆರೆಸಬೇಡಿ. ದೇವರಾಜೇಗೌಡರನ್ನು ಬಿಟ್ಟರೆ ಯಾರಿಗೂ ಒಂದು ತುಣುಕು ವಿಡಿಯೋ ಕೊಟ್ಟಿಲ್ಲ. ಯಾರಿಗೆಲ್ಲಾ ಅನ್ಯಾಯ ಆಗಿದೆ ಧೈರ್ಯವಾಗಿ ಮುಂದೆ ಬನ್ನಿ’ ಎಂದು ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.