ಹೊಸ ವಕೀಲರ ನೇಮಕಕ್ಕೆ ಪ್ರಜ್ವಲ್ ಮತ್ತು ಅವರ ತಾಯಿ ಭವಾನಿ ರೇವಣ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಕಾಲಾವಕಾಶ ನೀಡುವಂತೆ ಪರಿಪರಿಯಾಗಿ ಬೇಡಿದ ಪ್ರಸಂಗ ನಡೆಯಿತು.
ಬೆಂಗಳೂರು : ಅತ್ಯಾಚಾರ ಪ್ರಕರಣ ಸಂಬಂಧ ಬಂಧನದಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಪರ ವಕೀಲರು ವಕಾಲತ್ತಿನಿಂದ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ ಹೊಸ ವಕೀಲರ ನೇಮಕಕ್ಕೆ ಪ್ರಜ್ವಲ್ ಮತ್ತು ಅವರ ತಾಯಿ ಭವಾನಿ ರೇವಣ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಕಾಲಾವಕಾಶ ನೀಡುವಂತೆ ಪರಿಪರಿಯಾಗಿ ಬೇಡಿದ ಪ್ರಸಂಗ ನಡೆಯಿತು.
ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣದ ವಿಚಾರಣೆಯಿಂದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಗಜಾನನ ಭಟ್ ಅವರನ್ನು ಬದಲಿಸುವಂತೆ ಪ್ರಜ್ವಲ್ ಪರ ವಕೀಲರು ಕೋರಿದ್ದ ಜ್ಞಾಪನಾ ಪತ್ರ (ಮೆಮೋ)ವನ್ನು ಪ್ರಧಾನ ಜಿಲ್ಲಾ ನ್ಯಾಯಾಧೀಶರು ತಿರಸ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಜ್ವಲ್ ಪರ ವಕೀಲ ಜಿ. ಅರುಣ್ ಅವರು ವಕಾಲತ್ತಿನಿಂದ ನಿವೃತ್ತಿ ಹೊಂದಿ ನ್ಯಾಯಾಧೀಶರಿಗೆ ಮೆಮೋ ಸಲ್ಲಿಸಿದ್ದರು.
ಹೀಗಾಗಿ ಹೊಸ ವಕೀಲರ ನೇಮಕ ಮಾಡಿಕೊಳ್ಳಲು ಕಾಲಾವಕಾಶ ನೀಡುವಂತೆ ಪ್ರಜ್ವಲ್ ರೇವಣ್ಣ ಮತ್ತು ಭವಾನಿ ರೇವಣ್ಣ ಮನವಿ ಮಾಡಿದರು. ಆದರೆ, ನ್ಯಾಯಾಲಯ ಸಮಯಾವಕಾಶ ನೀಡಲು ನಿರಾಕರಿಸಿತು. ಮಂಗಳವಾರದ ವೇಳೆಗೆ ನೇಮಕ ಮಾಡಿಕೊಳ್ಳಬೇಕು ಎಂದು ಸೂಚಿಸಿ ವಿಚಾರಣೆಯನ್ನು ಮುಂದೂಡಿಕೆ ಮಾಡಿತು.
ಮೇ 2ರವರೆಗೆ ಸಮಯ ನೀಡುವಂತೆ ಕೇಳಿದ ಪ್ರಜ್ವಲ್ ರೇವಣ್ಣ, ನಮ್ಮ ತಾಯಿಯವರು ವಕೀಲರ ನೇಮಿಸಲು ಯತ್ನಿಸುತ್ತಿದ್ದಾರೆ ಎಂದು ಮನವಿ ಮಾಡಿದರು. ಆಗ ಮತ್ತೊಮ್ಮೆ ಭವಾನಿ ರೇವಣ್ಣ ಮನವಿಗೆ ಮುಂದಾದರು. ಇದಕ್ಕೆ ನ್ಯಾಯಾಲಯ ನಿರಾಕರಿಸಿ, ಪ್ರಕರಣಕ್ಕೂ, ನಿಮಗೂ ಸಂಬಂಧ ಇಲ್ಲ. ನ್ಯಾಯಾಲಯದಲ್ಲಿ ಮಾತನಾಡದಂತೆ ಸೂಚನೆ ನೀಡಿದಾಗ ಭವಾನಿ ರೇವಣ್ಣ ಅವರು ಕಣ್ಣೀರು ಹಾಕುತ್ತಾ ನ್ಯಾಯಾಲಯದ ಹಾಲ್‌ನಿಂದ ಹೊರ ನಡೆದರು.
ಜನವರಿಯಿಂದ ಪದೇ ಪದೇ ಮುಂದೂಡಿಕೆ ಪಡೆಯಲಾಗುತ್ತಿದೆ. ವಿಚಾರಣೆ ನಿಗದಿ ಮಾಡಲು ಈಗಾಗಲೇ ಮೂರು ಬಾರಿ ಸಮಯ ಪಡೆಯಲಾಗಿದೆ. ಒಂದು ವೇಳೆ ಆರೋಪಿ ವಕೀಲರ ನೇಮಿಸಿಕೊಳ್ಳದಿದ್ದರೆ ಅಮಿಕಸ್ ಕ್ಯೂರಿ ನೇಮಿಸಲಾಗುವುದು. ಒಂದು ದಿನ ಸಮಯ ನೀಡಲಾಗುತ್ತದೆ, ಅದಕ್ಕಿಂತ ಹೆಚ್ಚಿನ ಸಮಯ ನೀಡಲಾಗದು ಎಂದು ನ್ಯಾಯಾಲಯ ತಿಳಿಸಿತು.
ಸರ್ಕಾರಿ ಅಭಿಯೋಜಕ ಅಶೋಕ್ ನಾಯಕ್ ವಾದ ಮಂಡಿಸಿ, ವಕೀಲರು ಸಿಕ್ಕಿಲ್ಲ ಎಂಬುದಕ್ಕಿಂತ ವಿಚಾರಣೆ ಪ್ರಾರಂಭವಾಗಬಾರದು ಎಂಬ ಪ್ರಯತ್ನವಾಗಿದೆ. ಸಂತ್ರಸ್ತೆ ಹೇಳಿಕೆ ದಾಖಲಿಸಿದರೆ ಸಿಕ್ಕಿಬೀಳುವ ಭಯದಿಂದ ಆರೋಪಿ ಸಮಯ ತಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.