ಶಿವಮೊಗ್ಗ: ಭಾರತ ಮಾತೆಯ ಮಕ್ಕಳಾಗಿ ಹುಟ್ಟಿದ್ದು ಸಾರ್ಥಕವಾಗಬೇಕಾದರೆ ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯನ್ನು ಕೇವಲ ಹಿಂದುಗಳಷ್ಟೇ ಅಲ್ಲ ದೇಶದ ಮೌಲ್ವಿಗಳು, ಮಸೀದಿಗಳ ಮುಖ್ಯಸ್ಥರು, ಕ್ರಿಶ್ಚಿಯನ್ನರು ಎಲ್ಲರೂ ಖಂಡಿಸಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಶಿವಮೊಗ್ಗದಲ್ಲಿರುವ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟ ಮಂಜುನಾಥ್‌ರಾವ್ ಅವರ ಮನೆಗೆ ಸೋಮವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ನಾವೆಲ್ಲರೂ ರಾಜಕಾರಣದ ಸ್ವಾರ್ಥ ಬಿಟ್ಟು ಈ ಉಗ್ರಗಾಮಿ ಚಟುವಟಿಕೆಗಳನ್ನು ಖಂಡಿಸಬೇಕು. ಧರ್ಮದ ಆಧಾರದ ಮೇಲೆ ಹತ್ಯೆ ಮಾಡಿರುವುದನ್ನು ಖಂಡಿಸುತ್ತೇವೆ ಎಂದರು.
ಸಿಎಂಗೆ ಮಾನ ಮರ್ಯಾದೆ ಇದೆಯಾ?ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯುದ್ಧ ಅನಿವಾರ್ಯವಲ್ಲ, ಭದ್ರತೆ ಲೋಪದಿಂದ ಉಗ್ರರ ದಾಳಿ ನಡೆದಿದೆ ಎಂದಿದ್ದಾರೆ. ಅವರಿಗೆ ಮಾನ ಮರ್ಯಾದೆ ಇದೆಯಾ? ಮಾಧ್ಯಮಗಳು ಹೇಳಿಕೆ ಪ್ರಸಾರ ಮಾಡಿದ ನಂತರ ಉಲ್ಟಾ ಹೊಡೆದಿದ್ದಾರೆ. ಸಿದ್ದರಾಮಯ್ಯನವರೇ ನಿಮಗೆ ರಾಜಕಾರಣ ಮುಖ್ಯನಾ, ಕುರ್ಚಿ ಮುಖ್ಯನಾ? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಟೋಪಿ ಹಾಕಿಕೊಳ್ಳುತ್ತಾರೆ ಇತರರಿಗೂ ಟೋಪಿ ಹಾಕಲು ಹೊರಟಿದ್ದಾರೆ. ಇವರಿಗೆ ನಾಚಿಕೆಯಾಗಬೇಕು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಗೃಹ ಸಚಿವ ಪರಮೇಶ್ವರ್ ಹೇಳಿಕೆಗಳನ್ನು ಖಂಡಿಸುತ್ತಿದ್ದಾರೆ. ಸಿದ್ದರಾಮಯ್ಯನವರೇ, ನೀವು ಪಾಕಿಸ್ತಾನದ ಪ್ರಧಾನಿಯಾಗಲು ಹೊರಟಿದ್ದೀರಾ? ಎಂದು ಹರಿಹಾಯ್ದರು.ರಾಹುಲ್‌ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಜೊತೆಗೆ ಇದ್ದೇವೆ ಎಂದರೆ ಕರ್ನಾಟಕದ ಸಿಎಂ ಆಗಿ ನೀವು ಭದ್ರತಾ ವೈಫಲ್ಯ ಎನ್ನುತ್ತೀರಾ ? ನೀವು ಪಾಕಿಸ್ತಾನದ ಪರವೋ? ಹಿಂದುಗಳ ಪರವೋ? ಸೈನಿಕರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತೀರಾ ? ಸಿದ್ದರಾಮಯ್ಯ ಅಧಿಕಾರದಲ್ಲಿರಲು ನಾಲಾಯಕ್. ಅವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಸಾವಿನ ಮನೆಯ ಸೂತಕ ಇನ್ನೂ ಆರಿಲ್ಲ. ರಾಜ್ಯ ಸರ್ಕಾರ ನಾಲ್ಕು ಲಕ್ಷ ಕೋಟಿ ಬಜೆಟ್ ಮಂಡಿಸುತ್ತದೆ. ರಾಜ್ಯದ ಮೃತಪಟ್ಟ ಮೂವರ ಕುಟುಂಬಕ್ಕೆ ಒಂದೊಂದು ಕೋಟಿ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.ಪ್ರಧಾನಿ ಮೋದಿ ಘಟನೆ ನಡೆದಾಗ ವಿದೇಶ ಪ್ರವಾಸವನ್ನು ಮಟಕುಗೊಳಿಸಿದರು. ಪಾಕಿಸ್ತಾನದವರು ಸಿಂಧೂ ನದಿಯ ನೀರು ಬಂದ್ ಮಾಡಿದರೆ ರಕ್ತ ಹರಿಯುತ್ತದೆ ಎನ್ನುತ್ತಿದ್ದಾರೆ? ನಾವೇನು ಕೈಗೆ ಬಳೆ ಹಾಕಿಕೊಂಡು ಕೂತಿದೀವಾ? ಇದಕ್ಕೆಲ್ಲ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತ್ಯುತ್ತರ ಕೊಡುತ್ತಾರೆ. ಕಾಂಗ್ರೆಸ್‌ನವರು ವೋಟ್ ಬ್ಯಾಂಕ್ ರಾಜಕಾರಣ ಮಾಡುವುದು ಬಿಟ್ಟು ಘಟನೆಯನ್ನು ಖಂಡಿಸಬೇಕು ಎಂದು ಕಿಡಿಕಾರಿದರು.
ಶಾಸಕ ರಮೇಶ್ ಬಂಡಿಸಿದ್ದೇಗೌಡರಿಗೆ ನಾಚಿಕೆಯಾಗಬೇಕು
ಆರ್ಟಿಕಲ್ 370 ರದ್ದು ಮಾಡಿದ್ದರಿಂದ ಅಲ್ಪಸಂಖ್ಯಾತರಿಗೆ ಅಭದ್ರತೆ ಕಾಡುತ್ತಿದೆ ಎನ್ನುವ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡರಿಗೆ ನಾಚಿಕೆಯಾಗಬೇಕು. ಧರ್ಮದ ಬಗ್ಗೆ ಕೇಳಿ ಗುಂಡಿಟ್ಟು ಕೊಂದಿದ್ದಾರೆ. ಕಲ್ಮಾ ಹೇಳಿಸಿ ಹೇಳದಿದ್ದವರಿಗೆ ಕೊಲೆ ಮಾಡಿದ್ದಾರೆ. ಅಸಾದುದ್ದೀನ್ ಓವೈಸಿ ಧರ್ಮದ ಆಧಾರದ ಮೇಲೆ ಹೊಡೆದಿದ್ದಾರೆ ಎನ್ನುತ್ತಾರೆ. ಆದರೆ, ರಾಜ್ಯದ ಕಾಂಗ್ರೆಸ್ ನಾಯಕರು ಕರ್ನಾಟಕದ ಮಾನ ಮರ್ಯಾದೆಯನ್ನು ವಿಶ್ವದಲ್ಲಿ ಹರಾಜು ಹಾಕಿದ್ದಾರೆ. ರಾಜ್ಯದ ಮಾನ ಮರ್ಯಾದೆ ಹರಾಜು ಹಾಕಿದವರಿಗೆ ಅಧಿಕಾರ ಬೇಕಾ? ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪ್ರಶ್ನಿಸಿದರು.4 ಲಕ್ಷ ಕೋಟಿ ರು. ಬಜೆಟ್ ಎನ್ನುತ್ತಾರೆ. 80000 ಕೋಟಿ ರು. ಗ್ಯಾರಂಟಿಗೆ ಕೊಟ್ಟಿದ್ದೇವೆ ಅನ್ನುತ್ತಾರೆ. ಪರಿಶಿಷ್ಟ ಜಾತಿ ಪಂಗಡಗಳ ಅನುದಾನವನ್ನು ಬಳಕೆ ಮಾಡಿಕೊಂಡಿದ್ದಾರೆ. ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟ ಕುಟುಂಬದವರು ಸರ್ಕಾರದ ಪರಿಹಾರಕ್ಕಾಗಿ ಜಾತಕ ಪಕ್ಷಿಗಳಂತೆ ಕಾದು ಕುಳಿತಿಲ್ಲ. ತಲಾ ಒಂದು ಕೋಟಿ ರು. ಪರಿಹಾರ ಕೊಡಿ, ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ. ಕಾಂಗ್ರೆಸ್ ಮುಖಂಡರ ಕುಟುಂಬದಲ್ಲಿ ಅನಾಹುತ ಆಗಿದ್ದರೆ ಗೊತ್ತಾಗುತ್ತಿತ್ತು ಎಂದು ವಾಗ್ದಾಳಿ ನಡೆಸಿದರು.