ಕನ್ನಡಪ್ರಭ ವಾರ್ತೆ ಬೆಂಗಳೂರು
ಎರಡು ದಿನಗಳ ಹಿಂದೆ ಡಿಎನ್‌ಎ ಪರೀಕ್ಷೆ ವರದಿಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ತಜ್ಞರು ಸಲ್ಲಿಸಿದ್ದು, ಈ ವರದಿಯಲ್ಲಿ ಮನೆಕೆಲಸದವರು ಹಾಗೂ ಹಾಸನ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಮನೆಯಲ್ಲಿ ಪತ್ತೆಯಾದ ಸೀರೆಗಳು, ಒಳ ಉಡುಪುಗಳಲ್ಲಿ ಸಿಕ್ಕಿದ ವೀರ್ಯಕ್ಕೂ ಪ್ರಜ್ವಲ್ ಅವರ ವೀರ್ಯಕ್ಕೂ ಸಾಮ್ಯತೆ ಇದೆ ಎಂದು ಉಲ್ಲೇಖವಾಗಿದೆ ಎನ್ನಲಾಗಿದೆ.
ಪ್ರಜ್ವಲ್ ವಿರುದ್ಧ ದಾಖಲಾದ ಅತ್ಯಾಚಾರ ಪ್ರಕರಣಗಳ ತನಿಖೆಗಿಳಿದಿದ್ದ ಎಸ್‌ಐಟಿ ಅಧಿಕಾರಿಗಳು, ಕೃತ್ಯಗಳು ನಡೆದಿದೆ ಎನ್ನಲಾದ ಹಾಸನದ ಸಂಸದರ ಅತಿಥಿ ಗೃಹ, ಹೊಳೆನರಸೀಪುರ ಮತ್ತು ಬೆಂಗಳೂರಿನ ಬಸವನಗುಡಿ ಮನೆಗಳು ಹಾಗೂ ತೋಟದ ಮನೆಗಳಲ್ಲಿ ಬೆಡ್ ಶೀಟ್, ಕೆಲ ಬಟ್ಟೆಗಳು ಹಾಗೂ ಸಂತ್ರಸ್ತೆಯರಿಂದ ಸೀರೆಗಳು, ಪೆಟ್ಟಿಕೋಟ್‌ಗಳನ್ನು ಜಪ್ತಿ ಮಾಡಿದ್ದರು.ಇವುಗಳಲ್ಲಿ ಪತ್ತೆಯಾದ ಕೂದಲು ಹಾಗೂ ವೀರ್ಯದ ಹೋಲಿಕೆಗೆ ಪ್ರಜ್ವಲ್ ಅವರನ್ನು ಎಸ್‌ಐಟಿ ಅಧಿಕಾರಿಗಳು ಡಿಎನ್‌ಎ ಪರೀಕ್ಷೆಗೊಳಪಡಿಸಿದ್ದರು. ಡಿಎನ್‌ಎ ವಿಶ್ಲೇಷಣೆಗೆ ಸಂತ್ರಸ್ತೆಯರು ಹಾಗೂ ಪ್ರಜ್ವಲ್ ಅವರಿಂದ ರಕ್ತ ಮಾದರಿ ಮತ್ತು ಕೂದಲನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಎಸ್ಐಟಿ ಅಧಿಕಾರಿಗಳು ಕಳುಹಿಸಿದ್ದರು.
ಇಬ್ಬರ ಸಂತ್ರಸ್ತೆಯ ಸೀರೆಗಳಲ್ಲಿ ಹೋಲಿಕೆ?
ಮನೆಗೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತೆಯರ ಸೀರೆಗಳು ಹಾಗೂ ಪೆಟ್ಟಿಕೋಟ್‌ಗಳು ಈಗ ಪ್ರಜ್ವಲ್‌ಗೆ ಕಂಟಕ ತಂದಿವೆ. ತೋಟದ ಮನೆಯಲ್ಲಿ ಕೆಲಸಗಾರರು ಉಳಿದುಕೊಳ್ಳಲು ಪ್ರತ್ಯೇಕ ಕೋಣೆಯನ್ನು ಪ್ರಜ್ವಲ್ ಕುಟುಂಬದವರು ನೀಡಿದ್ದರು. ಈ ಪ್ರಕರಣದ ತನಿಖೆ ವೇಳೆ ತೋಟದ ಮನೆ ಮೇಲೆ ಎಸ್‌ಐಟಿ ದಾಳಿ ನಡೆಸಿದಾಗ ಕೆಲಸಗಾರರ ಕೋಣೆಯಲ್ಲಿ ನಾಲ್ಕು ಸೀರೆಗಳು ಹಾಗೂ ಪೆಟ್ಟಿಕೋಟ್‌ಗಳು ಸಿಕ್ಕಿದ್ದವು. ಇವುಗಳನ್ನು ಡಿಎನ್‌ಎ ಪರೀಕ್ಷೆಗೆ ಬಳಸಿಕೊಳ್ಳಲಾಗಿತ್ತು.