ಕನ್ನಡಪ್ರಭ ವಾರ್ತೆ ಹಾಸನ
ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನವೆಂಬರ್ ೨೭ರ ಗುರುವಾರ ಮಧ್ಯಾಹ್ನ ೩ ಗಂಟೆಗೆ ಪ್ರಮೋದ್ ಮುತಾಲಿಕ್ ಹಾಗೂ ನೂತನ ರಾಜ್ಯಾಧ್ಯಕ್ಷರ ಅಭಿನಂದನಾ ಕಾರ್ಯಕ್ರಮ ಜತೆಯಾಗಿ ಹಾಸನ ಜಿಲ್ಲಾ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮ ಸೇನೆ ರಾಜ್ಯ ದಕ್ಷಿಣ ಪ್ರಾಂತ್ ಸಹ ಕಾರ್ಯದರ್ಶಿ ಹೇಮಂತ್ ಜಾನೆಕೆರೆ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಉದ್ಘಾಟನೆಗೆ ಹಾಸನ ವಿಧಾನಸಭಾ ಸದಸ್ಯ ಸ್ವರೂಪ ಪ್ರಕಾಶ್ ಅವರನ್ನು ಆಹ್ವಾನಿಸಲಾಗಿದ್ದು, ಮುಖ್ಯ ಅತಿಥಿಗಳಾಗಿ ಹಾಸನ ವಕೀಲರ ಸಂಘದ ಅಧ್ಯಕ್ಷ ಕಾರ್ಲೆ ಮೊಗಣ್ಣಗೌಡ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆಂಚೇಗೌಡ, ಹಾಸನ ಮಹಾನಗರ ಪಾಲಿಕೆಯ ಮಾಜಿ ಮಹಾಪೌರ ಗಿರೀಶ್ ಚನ್ನವೀರಪ್ಪ ಉಪಸ್ಥಿತರಿರಲಿದ್ದಾರೆ. ಬಿ.ಎಂ. ಭುವನಾಕ್ಷ ಹಾಗೂ ಲತೇಶ್ ಕುಮಾರ್ ಸೇರಿದಂತೆ ಹಿಂದೂ ಸಮಾಜ ಮುಖಂಡರೂ ಭಾಗಿಯಾಗಲಿದ್ದಾರೆ. ಜಿಲ್ಲೆಯ ವಿವಿಧ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು, ವಿದ್ಯಾರ್ಥಿ ಪ್ರತಿನಿಧಿಗಳು, ಗುರು ಹಿರಿಯರು ಮತ್ತು ವಿವಿಧ ಸಮುದಾಯಗಳ ನಾಯಕರುಗಳಿಗೆ ಆಹ್ವಾನ ನೀಡಲಾಗಿದೆ ಎಂದರು.
ಸಂಘಟನೆಯ ಚಟುವಟಿಕೆಗಳು ಹಾಗೂ ಮುಂಬರುವ ಯೋಜನೆಗಳ ಕುರಿತು ಮಾರ್ಗಸೂಚಿ ಭಾಷಣ ನಡೆಯಲಿದೆ ಎಂದು ಹೇಳಿದರು.ಈ ಕಾರ್ಯಕ್ರಮಕ್ಕೆ ಹಾಸನ ನಗರದಲ್ಲಿರುವ ಗಣಪತಿಯ ಮಂಡಳಿಯ ಎಲ್ಲಾ ಸದಸ್ಯರನ್ನು ಆಹ್ವಾನಿಸಿದ್ದೇವೆ ಹಾಗೂ ಹಿಂದೂ ಸಮಾಜದ ಎಲ್ಲ ಮುಖಂಡರಿಗೆ ಆಹ್ವಾನ ನೀಡಿದ್ದೇವೆ. ಜಾತಿ, ಮತ, ಪಕ್ಷ ಬೇಧ ಬಿಟ್ಟು ಮಾನ್ಯ ಶ್ರೀ ಪ್ರಮೋದ್ ಮುತಾಲಿಕ್ ರವರ ೭೦ ವರ್ಷಗಳ ಹಿಂದುತ್ವದ ತಪಸ್ಸಿಗೆ ನಮ್ಮ ಹಾಸನದ ಜನತೆ ಗೌರವ ನೀಡಿ ಈ ಕಾರ್ಯಕ್ರಮಕ್ಕೆ ಆಗಮಿಸಬೇಕು. ಪ್ರಮೋದ್ ಮುತಾಲಿಕ್ ರವರ ದಿಕ್ಸೂಚಿ ಭಾಷಣದಿಂದ ಹಿಂದೂ ಯುವಕರ ಹೃದಯದಲ್ಲಿ ಹಿಂದುತ್ವದ ಬೀಜವನ್ನು ಬಿತ್ತಲು ಬಹು ಸಂಖ್ಯಾತ ಹಿಂದೂಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮಸೇನೆಯ ಧರ್ಮ ನಾಯಕ್, ದರ್ಶನ್, ಪುನೀತ್ ಕಳ್ಳೆನಹಳ್ಳಿ, ದೇವರಾಜ್, ವಿನಯ್ ಕೆರೆಹಳ್ಳಿ, ಜಗದೀಶ್, ಮಹೇಶ್ ಇತರರು ಉಪಸ್ಥಿತರಿದ್ದರು.