ಕನ್ನಡಪ್ರಭ ವಾರ್ತೆ ಮದ್ದೂರು
ಜಿಲ್ಲಾಧಿಕಾರಿ ಆದೇಶದಂತೆ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರು ಮದ್ದೂರು ಪ್ರವೇಶಿಸದಂತೆ ಪೊಲೀಸರು ಮದ್ದೂರು ಗಡಿಭಾಗದಲ್ಲೇ ತಡೆಹಿಡಿದ ಘಟನೆ ಶುಕ್ರವಾರ ನಡೆಯಿತು. ಈ ಸಮಯದಲ್ಲಿ ಮುತಾಲಿಕ್ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಬೆಂಬಲಿಗರು ಮತ್ತು ಪೊಲೀಸರ ನಡುವೆ ಪರಸ್ಪರ ತಳ್ಳಾಟ- ನೂಕಾಟ ಉಂಟಾಯಿತು. ಈ ವೇಳೆ ಮುತಾಲಿಕ್ ಜೊತೆ ಆಗಮಿಸಿದ್ದ ಹೈಕೋರ್ಟ್ ವಕೀಲ ಅಮೃತೇಶ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಕೊನೆಗೂ ಮುತಾಲಿಕ್ ಅವರು ಮದ್ದೂರು ಪ್ರವೇಶಿಸುವುದನ್ನು ಯಶಸ್ವಿಯಾಗಿ ತಡೆದ ಪೊಲೀಸರು, ಅವರನ್ನು ಅಲ್ಲಿಂದಲೇ ವಾಪಸ್ ತೆರಳಿದರು. ಬಿಡದಿ- ರಾಮನಗರದಿಂದ ಪೊಲೀಸರ ಕಣ್ತಪ್ಪಿಸಿಕೊಂಡು ಬಂದಿದ್ದ ಮುತಾಲಿಕ್ ಕೊನೆಗೂ ಮದ್ದೂರು ಪ್ರವೇಶಿಸಲಾಗದೆ ಗಡಿಯಿಂದಲೇ ವಾಪಸಾಗುವಂತಾಯಿತು.
ಏನಾಯ್ತು?:ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದ ಮದ್ದೂರಿಗೆ ಶ್ರೀರಾಮಸೇನೆ ಮುಖಂಡ ಭೇಟಿ ನೀಡಲು ಮುಂದಾಗಿದ್ದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮುತಾಲಿಕ್‌ಗೆ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಲೆಕ್ಕಿಸದೆ ಮುತಾಲಿಕ್ ಪೊಲೀಸರ ತಡೆಗೋಡೆಯನ್ನು ಬೇಧಿಸಿ ಮದ್ದೂರು ಪ್ರವೇಶಿಸುವ ದುಸ್ಸಾಹಸಕ್ಕೆ ಮುಂದಾಗಿದ್ದರು.
ಸುಮಾರು ೧೨.೧೦ರ ವೇಳೆಗೆ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ವಕೀಲ ಅಮೃತೇಶ್ ಅವರೊಂದಿಗೆ ಕಾರಿನಲ್ಲಿ ಮದ್ದೂರು ಗಡಿ ನಿಡಘಟ್ಟ ಬಳಿಗೆ ಆಗಮಿಸಿದರು. ಮುತಾಲಿಕ್ ಆಗಮನದ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿಕೊಂಡು ಅವರ ಪ್ರವೇಶವನ್ನು ತಡೆಯುವುದಕ್ಕೆ ಸಜ್ಜಾಗಿದ್ದರು. ನಿರೀಕ್ಷೆಯಂತೆಯೇ ಕಾರಿನಲ್ಲಿ ಆಗಮಿಸಿದ ಮುತಾಲಿಕ್ ಅವರನ್ನು ಪೊಲೀಸರು ತಡೆದು ನಿಲ್ಲಿಸಿ ವಾಪಸ್ ಹೋಗುವಂತೆ ತಿಳಿಸಿದರು.ಈ ವೇಳೆ ಮುತಾಲಿಕ್ ಬೆಂಬಲಿಗರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪೊಲೀಸರೊಡನೆ ಮುತಾಲಿಕ್ ಮಾತಿನ ಚಕಮಕಿಗಿಳಿದರೆ, ಬ್ಯಾರಿಕೇಡ್‌ಗಳನ್ನು ಬೇಧಿಸಿ ಒಳನುಗ್ಗಲು ಬೆಂಬಲಿಗರು ನೂಕುನುಗ್ಗಲು ನಡೆಸಿದರು. ಈ ಸಮಯದಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಹೈಡ್ರಾಮವೇ ನಡೆಯಿತು.
ನಾನೇನು ಮದ್ದೂರಿನ ಶಾಂತಿ ಕೆಡಿಸಲು ಇಲ್ಲಿಗೆ ಬಂದಿಲ್ಲ. ಪ್ರತಿಭಟನೆ ಮಾಡುವುದಕ್ಕೂ ಹೋಗುತ್ತಿಲ್ಲ. ೫೦೦ ಹಿಂದೂ ಕಾರ್ಯಕರ್ತರ ಮೇಲೆ ಮೊಕದ್ದಮೆ ದಾಖಲಾಗಿದೆ. ಅವರ ಪರ ವಕಾಲತ್ತು ವಹಿಸಲು ವಕೀಲರ ಜೊತೆ ಹೋಗುತ್ತಿದ್ದೇನೆ. ನಮ್ಮನ್ನು ಬಿಡಿ. ಏಕೆ ತಡೆಯುತ್ತಿರುವಿರಿ ಎಂದಾಗ, ನಿಮ್ಮ ಪ್ರವೇಶಕ್ಕೆ ಜಿಲ್ಲಾಧಿಕಾರಿಗಳು ನಿರ್ಬಂಧ ಹೇರಿದ್ದು, ಇಲ್ಲಿಂದ ವಾಪಸಾಗುವಂತೆ ಪೊಲೀಸರು ತಿಳಿಸಿದರು.ಜಿಲ್ಲಾಧಿಕಾರಿಗಳ ಆದೇಶ ಕಾಪಿ ಕೊಡುವಂತೆ ಕೇಳಿದಾಗ, ಪೊಲೀಸರು ಆದೇಶ ಕಾಪಿ ನೀಡಿದರು. ಒರಿಜಿನಲ್ ಕೊಡಿ ಎಂದಾಗ ಪೊಲೀಸರು ದಯವಿಟ್ಟು ಇಲ್ಲಿಂದ ಹೊರಡಿ ಎಂದು ಸೂಚಿಸಿದರು. ಕೊನೆಗೆ ಪೊಲೀಸರ ಕೋಟೆಯನ್ನು ಬೇಧಿಸಲಾಗದೆ ಮುತಾಲಿಕ್ ವಿಫಲರಾದರು. ಮಂಡ್ಯ ಜಿಲ್ಲೆ ನಿರ್ಬಂಧದ ಪ್ರತಿಗೆ ಸಹಿ ಹಾಕಿಸಿಕೊಂಡು ಅವರನ್ನು ಪೊಲೀಸರು ಅಲ್ಲಿಂದ ಕಳುಹಿಸಿದರು.
ಪ್ರಮೋದ್ ಮುತಾಲಿಕ್ ಆಗಮನದ ಮೇಲೆ ನಿಗಾ ವಹಿಸಿದ್ದ ಪೊಲೀಸರು ಬಿಡದಿ, ರಾಮನಗರದಲ್ಲೇ ಮಫ್ತಿಯಲ್ಲಿದ್ದುಕೊಂಡು ಮುತಾಲಿಕ್ ಕಾರಿನ ನಂಬರ್ ನೋಡುತ್ತಾ ನಿಂತಿದ್ದರು. ಆದರೆ, ಮುತಾಲಿಕ್ ಬೇರೊಂದು ಕಾರಿನ ಮೂಲಕ ಮದ್ದೂರಿನ ನಿಡಘಟ್ಟವರೆಗೆ ನಿರಾಯಾಸವಾಗಿ ತಲುಪಿದರು. ಇಲ್ಲಿ ಪೊಲೀಸರ ಕಣ್ತಪ್ಪಿಸಿ ಮದ್ದೂರು ಪ್ರವೇಶಿಸಲು ಅವಕಾಶವೇ ಸಿಗಲಿಲ್ಲ.ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಈ.ಸಿ.ತಿಮ್ಮಯ್ಯ, ಡಿವೈಎಸ್ಪಿ ಕೃಷ್ಣಪ್ಪ, ಕೆ.ಎಂ.ದೊಡ್ಡಿ ಸಿಪಿಐ ಆನಂದ್, ಮದ್ದೂರು, ಬೆಸಗರಹಳ್ಳಿ, ಕೆಸ್ತೂರು ಭಾಗದ ೫೦ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.