)
ಕನ್ನಡಪ್ರಭ ವಾರ್ತೆ ಬೆಂಗಳೂರು
ಡಿಜಿ-ಐಜಿಪಿ ಹುದ್ದೆ ಜತೆ ಸಲೀಂ ಅವರು ಸಿಐಡಿ ಪ್ರಭಾರಿ ಡಿಜಿಪಿಯಾಗಿ ಒಂದು ವರ್ಷದಿಂದ ಆಡಳಿತ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಡಿಜಿ-ಐಜಿಪಿ ಬಳಿಕ ಮಹತ್ವದ ಹಾಗೂ ಅಷ್ಟೇ ಪ್ರಭಾವಿಯಾದ ಸ್ಥಾನ ಸಿಐಡಿ ಮುಖ್ಯಸ್ಥ ಪದವಿ ಆಗಿದೆ. ಇನ್ನು ಪೊಲೀಸ್ ಇಲಾಖೆ ಇತಿಹಾಸದಲ್ಲಿ ಪ್ರಥಮ ಬಾರಿ ಆ ಡಿಜಿಪಿ ಹುದ್ದೆಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ಹೀಗಾಗಿ ಸಿಐಡಿಗೆ ನೂತನ ಸಾರಥಿ ನೇಮಿಸುವ ಸಂಬಂಧ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ಹಾಗೂ ಲಾಬಿಗಳು ಸಹ ನಡೆದಿವೆ. ಆದರೆ ಒಂದು ವರ್ಷದಿಂದ ಐವರು ಡಿಜಿಪಿಗಳ ಪೈಕಿ ಒಬ್ಬರನ್ನು ಆರಿಸಿಕೊಳ್ಳಲು ಸರ್ಕಾರಕ್ಕೆ ಕಗ್ಗಂಟಾಗಿ ಪರಿಣಮಿಸಿದೆ.
ವಿಸ್ತರಣೆ ಡಿಜಿ-ಐಜಿಪಿ ಹುದ್ದೆ ಮಾತ್ರ?:ಇದೇ ವರ್ಷದ ಜೂನ್ ತಿಂಗಳಲ್ಲಿ ಡಿಜಿ-ಐಜಿಪಿ ಸಲೀಂ ಅವರು ನಿವೃತ್ತರಾಗಲಿದ್ದರು. ಆದರೆ ಈಗ ಅವರಿಗೆ ಒಂದು ವರ್ಷ ಅಧಿಕಾರಾವಧಿ ವಿಸ್ತರಿಸಿ ಸರ್ಕಾರ ಗುರುವಾರ ಆದೇಶಿಸಿದೆ. ಆದರೆ ನಿವೃತ್ತಿ ಬಳಿಕವೂ ಅಧಿಕಾರ ವಿಸ್ತರಣೆಯಾದರೆ ಅದು ಒಂದು ಹುದ್ದೆಗೆ ಮಾತ್ರ ಅನ್ವಯವಾಗಲಿದೆ ಎಂಬ ನಿಯಮವಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯಾರಿಗೆ ಸಿಗಲಿದೆ ಹುದ್ದೆ?:
ಸಾಮಾನ್ಯವಾಗಿ ಡಿಜಿ-ಐಜಿಪಿ ಬಳಿಕ ಸೇವಾ ಹಿರಿತನ ಹೊಂದಿರುವ ಅಧಿಕಾರಿಗೆ ಸಿಐಡಿ ಮುಖ್ಯಸ್ಥ ಹುದ್ದೆ ಸಿಗುತ್ತಿತ್ತು. ರಾಜ್ಯ ಪೊಲೀಸ್ ಮಹಾ ದಂಡನಾಯಕರಾಗುವ ಮುನ್ನ ಸಿಐಡಿಯಲ್ಲಿ ಸಲೀಂ ಅವರು ಕಾರ್ಯನಿರ್ವಹಿಸಿದ್ದರು. ಸೇವಾ ಹಿರಿತನ ಆಧಾರದ ಮೇರೆಗೆ ಡಿಜಿಪಿಗಳಾದ ಪ್ರಶಾಂತ್ ಕುಮಾರ್ ಠಾಕೂರ್, ಪ್ರಣವ್ ಮೊಹಂತಿ, ಅಲೋಕ್ ಕುಮಾರ್, ಉಮೇಶ್ ಕುಮಾರ್ ಹಾಗೂ ಅರುಣ್ ಚಕ್ರವರ್ತಿ ಇದ್ದಾರೆ. ಇವರ ಪೈಕಿ ಸೈಬರ್ ಕಮಾಂಡ್ ಡಿಜಿಪಿ ಪ್ರಣವ್ ಮೊಹಂತಿ ಹಾಗೂ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ಉಮೇಶ್ ಕುಮಾರ್ ಹೆಸರು ಮುಂಚೂಣಿಯಲ್ಲಿವೆ.
-ಬಾಕ್ಸ್-
ಕೇಂದ್ರದಲ್ಲಿ ಸಿಬಿಐನಂತೆ ರಾಜ್ಯದಲ್ಲಿ ಸ್ವತಂತ್ರ ತನಿಖಾ ಇಲಾಖೆಯಾದ ಸಿಐಡಿ ರಾಜ್ಯ ಸರ್ಕಾರದ ಪಾಲಿಗೆ ಬಹುಮುಖ್ಯವಾಗಿದೆ. ತನ್ನ ನಂಬಿಕಸ್ಥ ಅಧಿಕಾರಿಯನ್ನೇ ಸಿಐಡಿ ಮುಖ್ಯಸ್ಥ ಹುದ್ದೆಗೆ ಸರ್ಕಾರ ನೇಮಿಸುತ್ತದೆ. ತನಿಖಾ ಏಜೆನ್ಸಿ ಕೈಯಲ್ಲಿದ್ದರೆ ರಾಜಕೀಯವಾಗಿ ಪ್ರಮುಖಾಸ್ತ್ರವಾಗಲಿದೆ ಎಂಬ ರಾಜಕೀಯ ಲೆಕ್ಕಾಚಾರಗಳಿವೆ.
ಡಿಜಿಪಿ ಬದಲಿಗೆ ಎಡಿಜಿಪಿ ಅವರಿಗೆ ಸ್ವತಂತ್ರ ನಿರ್ವಹಣೆ ಅಧಿಕಾರ ನೀಡುವ ಬಗ್ಗೆ ಸರ್ಕಾರ ಮಟ್ಟದಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ. ಆದರೆ ಸಿಐಡಿಯಲ್ಲಿ ಎರಡು ಎಡಿಜಿಪಿ ಹುದ್ದೆಗಳಿವೆ. ಆಗ ಮತ್ತೊಂದು ರೀತಿಯ ಸಮಸ್ಯೆ ಸೃಷ್ಟಿಯಾಗಬಹುದು.