ಸಂಡೂರು: ಕರ್ನಾಟಕ ಪ್ರಾಂತ ರೈತ ಸಂಘದ ೧೧ನೇ ಜಿಲ್ಲಾ ಸಮ್ಮೇಳದ ಸಂಡೂರಿನಲ್ಲಿ ಫೆ. ೧೪ ಹಾಗೂ ೧೫ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಪಟ್ಟಣದ ಪ್ರವಾಸಿ ಬಂಗಲೆಯಲ್ಲಿ ಬುಧವಾರ ಪೂರ್ವಭಾವಿ ಸಭೆ ನಡೆಯಿತು.
ಕೆರೆ ತುಂಬಿಸುವ ನೀರಾವರಿ ಯೋಜನೆ ಜಾರಿ, ಅಂತರ್ಜಲ ರಕ್ಷಣೆ, ಗಣಿ, ಕೈಗಾರಿಕೆಗಳಿಂದ ಬೆಳೆ ಪರಿಹಾರ, ಕೃಷಿ ಭೂಮಿ ರಕ್ಷಣೆ ಮುಂತಾದ ಸಮಸ್ಯೆಗಳ ಬಗ್ಗೆ ಸಮ್ಮೇಳನ ಬೆಳಕು ಚೆಲ್ಲಲಿದೆ. ಸಮ್ಮೇಳನದಲ್ಲಿ ಸಿಪಿಐ (ಎಂ) ಪಾಲಿಟ್ ಬ್ಯೂರೋ ಸದಸ್ಯ ಶೇಖಾವತ್, ರಾಜಸ್ಥಾನದ ಸಂಸದ ಅಮ್ರಾರಾಮ, ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಯು. ಬಸವರಾಜ್, ಪ್ರಧಾನ ಕಾರ್ಯದರ್ಶಿ ಯಶವಂತ್ ಹಾಗೂ ಹಲವು ಮುಖಂಡರು ಭಾಗವಹಿಸಲಿದ್ದಾರೆ. ಜಿಲ್ಲೆಯ ೫ ತಾಲೂಕುಗಳಿಂದ ೩೦೦ ಪ್ರತಿನಿಧಿಗಳು, ಸುಮಾರು ೨೦೦೦ ರೈತರು ಭಾಗವಹಿಸುವ ನಿರೀಕ್ಷೆ ಇದೆ. ತಾಲೂಕಿನ ಪ್ರಗತಿಪರ ರೈತ ಕಾರ್ಮಿಕ ಜನಪರ ಸಂಘಟನೆಗಳು ಜಂಟಿಯಾಗಿ ಈ ಸಮ್ಮೇಳನ ಯಶಸ್ವಿಗೊಳಿಸಲು ಸಹಕರಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಸ್ವಾಗತ ಸಮಿತಿ ರಚಿಸಲಾಯಿತು. ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ವಿ.ಎಸ್. ಶಿವಶಂಕರ, ಮುಖಂಡರಾದ ಎ. ಸ್ವಾಮಿ, ಡಾ. ಸೈಯದ್ ರಹಮತ್ತುಲ್ಲಾ, ಖಲಂದರ್ ಬಾಷಾ, ಪಂಪನಗೌಡ ಕುರೆಕುಪ್ಪ, ಬಿ. ಮಂಜುನಾಥ, ರಮೇಶ್, ತಾಯಪ್ಪ, ಯರಿಸ್ವಾಮಿ, ಕಾಲುಬಾ, ವಿ. ದೇವಣ್ಣ, ಶರೀಫ, ಅಬ್ದುಲ್ ಬಾಕೈ, ಹಲವು ಸದಸ್ಯರು ಉಪಸ್ಥಿತರಿದ್ದರು.