ಡಾನ್‌ ಆಗುವ ಭ್ರಮೆಯಲ್ಲಿ ಕೊಲೆಗೈದ ಮೂವರು ಅಪ್ರಾಪ್ತರು!

KannadaprabhaNewsNetwork |  
Published : Jan 16, 2026, 01:00 AM IST
ನಿಂಗರಾಜ ಅವಾರಿ | Kannada Prabha

ಸಾರಾಂಶ

ಸಾಮಾಜಿಕ ಜಾಲತಾಣದಲ್ಲಿನ ವಿಡಿಯೋದಿಂದ ಪ್ರಚೋದನೆಗೊಳಗಾಗಿ, ಕೊಲೆ ಮಾಡಿದರೆ ಡಾನ್‌ ಆಗುತ್ತೇವೆಂಬ ಭ್ರಮೆಯಲ್ಲಿ ಪರಿಚಯದ ಬಾಲಕನನ್ನೇ ಮೂವರು ಅಪ್ರಾಪ್ತರು ಕೊಲೆ ಮಾಡಿದ ಆಘಾತಕಾರಿ ಘಟನೆ ಕುಂದಗೋಳದಲ್ಲಿ ಬುಧವಾರ ನಡೆದಿದೆ.

ಹುಬ್ಬಳ್ಳಿ:

ಸಾಮಾಜಿಕ ಜಾಲತಾಣದಲ್ಲಿನ ವಿಡಿಯೋದಿಂದ ಪ್ರಚೋದನೆಗೊಳಗಾಗಿ, ಕೊಲೆ ಮಾಡಿದರೆ ಡಾನ್‌ ಆಗುತ್ತೇವೆಂಬ ಭ್ರಮೆಯಲ್ಲಿ ಪರಿಚಯದ ಬಾಲಕನನ್ನೇ ಮೂವರು ಅಪ್ರಾಪ್ತರು ಕೊಲೆ ಮಾಡಿದ ಆಘಾತಕಾರಿ ಘಟನೆ ಕುಂದಗೋಳದಲ್ಲಿ ಬುಧವಾರ ನಡೆದಿದೆ.

ಪಟ್ಟಣದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ನಿಂಗರಾಜ ಅವಾರಿ (16) ಹತ್ಯೆಗೀಡಾದ ಬಾಲಕ.

ಈತನನ್ನು ಅದೇ ಶಾಲೆಯಲ್ಲಿ ಓದುತ್ತಿದ್ದ ಓರ್ವ ಸೇರಿದಂತೆ ಮೂವರು ಸೇರಿಕೊಂಡು ಚಾಕುವಿನಿಂದ ಮೂರು ಬಾರಿ ಇರಿದು ಕೊಲೆ ಮಾಡಿದ್ದಾರೆ. ಒಬ್ಬ ಎಸ್‌ಎಸ್‌ಎಲ್‌ಸಿ ಓದುತ್ತಿದ್ದರೆ, ಇನ್ನಿಬ್ಬರು ಕಾಲೇಜು ವಿದ್ಯಾರ್ಥಿಗಳು.

ಮೂವರೂ ಅಪ್ರಾಪ್ತರೆ:

ಬುಧವಾರ ಬೆಳಗ್ಗೆ ಶಾಲೆಗೆ ಹೋಗಿದ್ದ ನಿಂಗರಾಜ ಮರಳಿ ಮನೆಗೆ ಬಂದಿರಲಿಲ್ಲ. ಇದರಿಂದ ಪಾಲಕರು ಆತಂಕಗೊಂಡು ಶಾಲೆ ಸೇರಿದಂತೆ ವಿವಿಧೆಡೆ ಹುಡುಕಾಟ ನಡೆಸಿದ್ದರು. ಆದರೆ, ಪಟ್ಟಣದ ಸೊಸೈಟಿ ಪಕ್ಕದಲ್ಲಿ ಯುವಕನ ಶವ ಪತ್ತೆಯಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ್ದ ಪೋಲಿಸ್‌ರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಿದ ವೇಳೆ ಆತನ ಸಹಪಾಠಿ ಸೇರಿದಂತೆ ಮೂವರು ಕೊಲೆ ಮಾಡಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಮೂವರನ್ನೂ ವಶಕ್ಕೆ ಪಡೆದು ಬಾಲ ನ್ಯಾಯ ಮಂಡಳಿ ಎದುರಿಗೆ ಹಾಜರು ಪಡಿಸಿದ್ದಾರೆ.

ಆಗಿದ್ದೇನು?:

ನಿಂಗರಾಜ ಹಾಗೂ ಕೊಲೆ ಮಾಡಿರುವ ಬಾಲಕರ ಮಧ್ಯೆ ಸಣ್ಣ ಪುಟ್ಟ ವಿಷಯಕ್ಕೆ ಆಗಾಗ ಜಗಳವಾಗುತ್ತಿತ್ತಂತೆ. ಮಂಗಳವಾರ ಸಂಜೆ ಕೂಡ ಇವರ ಮಧ್ಯೆ ಸಣ್ಣ ಜಗಳ ಆಗಿದೆ. ಆಗ ಈತನನ್ನು ಕೊಲ್ಲಬೇಕೆಂದು ಮೂವರು ನಿರ್ಧರಿಸಿದ್ದರಂತೆ. ಅದರಂತೆ ಶಾಲೆಯಲ್ಲಿ ಸಂಕ್ರಾಂತಿ ಹಬ್ಬದ ಆಚರಣೆ ಮಾಡುವಾಗ ಈ ಮೂವರು ಆತನನ್ನು ಹೊರಗೆ ಕರೆದುಕೊಂಡು ಹೋಗಿದ್ದಾರೆ. ಆ ಬಾಲಕನನ್ನು ಹಿಂದಿನಿಂದ ಹಿಡಿದು ಇಬ್ಬರು ಮುಂದಿನಿಂದ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

ಸಾಮಾಜಿಕ ಜಾಲತಾಣ ಪ್ರೇರಣೆ:

ಸ್ನೇಹಿತನನ್ನು ಕೊಲೆ ಮಾಡಲು ಸಾಮಾಜಿಕ ಜಾಲತಾಣವೇ ಕಾರಣವಂತೆ. ಪ್ರಚೋದನಾಕಾರಿ ವಿಡಿಯೋಗಳನ್ನು ವೀಕ್ಷಿಸುತ್ತಿದ್ದ ಈ ಬಾಲಕರು, ತಾವು ಡಾನ್‌ ಎಂಬಂತೆ ಭಾವಿಸಿಕೊಂಡಿದ್ದಾರೆ. ಒಬ್ಬನನ್ನು ಹೊಡೆದರೆ ತಾವು ಡಾನ್‌ ಆಗುತ್ತೇವೆ ಎಂಬ ಭ್ರಮೆಯಲ್ಲಿ ಇದ್ದರಂತೆ. ಈ ಕೊಲೆಗೂ ಮುಂಚೆಯೇ ಕೆಲ ಬಾಲಕರ ಮೇಲೆ ಹಲ್ಲೆ ನಡೆಸಿ ಅದರ ವಿಡಿಯೋ ಮಾಡಿಕೊಂಡು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್‌ ಕೂಡ ಮಾಡಿದ್ದರಂತೆ. ಮತ್ತಷ್ಟು ಹೆಸರು ಮಾಡಬೇಕೆಂದು ಇದೀಗ ತಮ್ಮ ಶಾಲೆಯ ಬಾಲಕನನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಯುವಜನತೆಯನ್ನು ದಾರಿ ತಪ್ಪಿಸುತ್ತಿದೆ. ಇದರಿಂದಲೇ ಇಂದು ಅನೇಕ ಬಾಲಕರು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಸಣ್ಣ ಸಣ್ಣ ವಿಷಯಗಳಿಗೆ ದೊಡ್ಡ ಅನಾಹುತ ಮಾಡಿಕೊಳ್ಳುತ್ತಿದ್ದಾರೆ ಎಂದು ಮೃತ ಬಾಲಕನ ತಂದೆ ಮಲ್ಲಿಕಾರ್ಜುನ ಆವಾರಿ ಆರೋಪಿಸಿದ್ದಾರೆ. ಈ ಕುರಿತು ಕುಂದಗೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಬಾಲಕರ ನಡುವೆ ಹಳೇ ದ್ವೇಷವಿತ್ತು. ತಾವು ಡಾನ್‌ ಎಂಬುದು ತಲೆಯಲ್ಲಿತ್ತು. ಬಾಲಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಪ್ರಕರಣದಲ್ಲಿರುವ ಮೂವರು ಬಾಲಕರು ಅಪ್ರಾಪ್ತರೇ ಆಗಿದ್ದಾರೆ.

ಗುಂಜನ್‌ ಆರ್ಯ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಂಪಿ ಉತ್ಸವ ನಾಡಹಬ್ಬದಂತೆ ವಿಜೃಂಭಣೆಯಿಂದ ಆಚರಿಸೋಣ: ಜಮೀರ್ ಅಹಮದ್‌ ಖಾನ್
ಲಕ್ಷಕ್ಕೂ ಅಧಿಕ ಭಕ್ತರಿಂದ ಹುಲಿಗೆಮ್ಮದೇವಿ ದರ್ಶನ