ಯೋಗ, ಪ್ರಕೃತಿ ಚಿಕಿತ್ಸೆ ಸಾಧನೆಗೆ ಡಾ. ಪ್ರಶಾಂತ್ ಶೆಟ್ಟಿಗೆ ಆಯುಷ್ ಭೂಷಣ ಪುರಸ್ಕಾರ

KannadaprabhaNewsNetwork |  
Published : Feb 06, 2026, 04:00 AM IST
ಭೂಷಣ | Kannada Prabha

ಸಾರಾಂಶ

ಡಾ.ಪ್ರಶಾಂತ್ ಶೆಟ್ಟಿ ಇವರು 1994ರಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ (ಬಿಎನ್‌ವೈಸಿ) ಪದವಿಯನ್ನು, 2006ರಲ್ಲಿ ಎಂ.ಎಸ್‌.ಸಿ ಪದವಿಯನ್ನು ಹಾಗೂ 2015ರಲ್ಲಿ ಪಿಹೆಚ್‌ಡಿ ಪದವಿಯನ್ನು ಪಡೆದು ಶೈಕ್ಷಣಿಕ ಹಾಗೂ ವೃತ್ತಿಜೀವನದಲ್ಲಿ ಗಮನಾರ್ಹ ಸಾಧನೆ ಮಾಡಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಹಾಗೂ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ

ಬೆಳ್ತಂಗಡಿ: ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಕ್ಷೇತ್ರದಲ್ಲಿ ಸಲ್ಲಿಸಿದ ಶ್ಲಾಘನೀಯ ಸೇವೆಗೆ ಡಾ. ಪ್ರಶಾಂತ್ ಶೆಟ್ಟಿ ಅವರಿಗೆ ಆಯುಷ್ ಭೂಷಣ ಪುರಸ್ಕಾರ ಲಭಿಸಿದೆ.

ಡಾ.ಪ್ರಶಾಂತ್ ಶೆಟ್ಟಿ ಇವರು 1994ರಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ (ಬಿಎನ್‌ವೈಸಿ) ಪದವಿಯನ್ನು, 2006ರಲ್ಲಿ ಎಂ.ಎಸ್‌.ಸಿ ಪದವಿಯನ್ನು ಹಾಗೂ 2015ರಲ್ಲಿ ಪಿಹೆಚ್‌ಡಿ ಪದವಿಯನ್ನು ಪಡೆದು ಶೈಕ್ಷಣಿಕ ಹಾಗೂ ವೃತ್ತಿಜೀವನದಲ್ಲಿ ಗಮನಾರ್ಹ ಸಾಧನೆ ಮಾಡಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಹಾಗೂ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯಾಗಿದ್ದರು.

ಇದುವರೆಗಿನ ತಮ್ಮ 32 ವರ್ಷಗಳ ಸೇವಾ ಅವಧಿಯಲ್ಲಿ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ರೋಗಿಗಳಿಗೆ ಪ್ರಕೃತಿ ಚಿಕಿತ್ಸೆ ಮತ್ತು ಯೋಗದ ಮೂಲಕ ಆರೋಗ್ಯ ಸೇವೆ ಒದಗಿಸಿ, ಅವರನ್ನು ರೋಗಮುಕ್ತ ಜೀವನದತ್ತ ಮುನ್ನಡೆಸಿರುವುದು ಅವರ ಸೇವೆಯ ಮಹತ್ವವನ್ನು ಸ್ಪಷ್ಟಪಡಿಸುತ್ತದೆ. ಪ್ರಸಕ್ತ ಕರ್ನಾಟಕ ರಾಜ್ಯದಲ್ಲಷ್ಟೇ ಅಲ್ಲದೆ, ಇಡೀ ದೇಶ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಡಬ್ಲ್ಯು.ಎಚ್‌.ಓ (WHO) ಮತ್ತು ಕಾಮನ್‌ವೆಲ್ತ್ ಸಂಸ್ಥೆಗಳ ಸದಸ್ಯರಾಗಿ ಗುರುತಿಸಿಕೊಂಡಿರುವುದು ಇಡೀ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಲಯಕ್ಕೆ ಸಿಕ್ಕ ಮಾನ್ಯತೆಯಾಗಿದೆ.ಮೂಲತಃ ಹೆಬ್ರಿ ತಾಲೂಕಿನವರಾದ ಡಾ. ಪ್ರಶಾಂತ್ ಶೆಟ್ಟಿ ಇವರ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು ಬಿ.ಸಿ. ರಾಯ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಜೊತೆಗೆ ಆಯುಷ್ ಸಚಿವಾಲಯದಿಂದ ಲೈಫ್ ಟೈಮ್ ಅಚೀವ್‌ಮೆಂಟ್ ಅವಾರ್ಡ್, ಕರ್ನಾಟಕ ಸರ್ಕಾರದ ಗೌರವಾನ್ವಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಉತ್ತಮ ಶಿಕ್ಷಕ ಪ್ರಶಸ್ತಿ ಸಹ ಇವರಿಗೆ ಲಭಿಸಿದೆ. ಯೋಗ ಪ್ರಕೃತಿ ಚಿಕಿತ್ಸೆ ಕ್ಷೇತ್ರದ ಅಭಿವೃದ್ಧಿಗೆ ನೀಡಿದ ಅನನ್ಯ ಕೊಡುಗೆ ಹಾಗೂ ಸಮಾಜಮುಖಿ ಸೇವೆಯನ್ನು ಪರಿಗಣಿಸಿ, ಜ. 31 ಮತ್ತು ಫೆಬ್ರವರಿ 1 ರಂದು ಮಂಗಳೂರಿನಲ್ಲಿ ನಡೆದ ಆಯುಷ್ ಹಬ್ಬದ ಸಂಭ್ರಮದ ಅಂಗವಾಗಿ ಡಾ. ಪ್ರಶಾಂತ್ ಶೆಟ್ಟಿ ಅವರಿಗೆ ‘ಆಯುಷ್ ಭೂಷಣ’ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಗೌರವವು ಅವರ ನಿರಂತರ ಶ್ರಮ, ಸೇವೆ ಮತ್ತು ನಿಷ್ಠೆಗೆ ಸಿಕ್ಕ ಸಾರ್ಥಕ ಮಾನ್ಯತೆಯಾಗಿದೆ. ತಮ್ಮ ಎಲ್ಲಾ ಸಾಧನೆಗಳಿಗೆ ಡಾ. ವೀರೇಂದ್ರ ಹೆಗ್ಗಡೆಯವರ ನಿರ್ದೇಶನ ಹಾಗೂ ಎಸ್ ಡಿ ಎಂ ಆಡಳಿತ ಮಂಡಳಿಯ ಮಾರ್ಗದರ್ಶನವೇ ಕಾರಣ ಎಂದು ಡಾ. ಪ್ರಶಾಂತ್ ಶೆಟ್ಟಿ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌