ಕಾರ್ಕಳ: ಕಾರ್ಕಳದ ಐತಿಹಾಸಿಕ ಮಹತ್ವದಲ್ಲಿ ಒಂದಾಗಿರುವ ಅನಂತ ಶಯನದಿಂದ ಚತುರ್ಮುಖ ಬಸದಿ ರಸ್ತೆಯಲ್ಲಿ ಸಿಗುವ ‘ನಾಗರಬಾವಿ ಕೆರೆ’ ಇಂದು ನಿರ್ಲಕ್ಷ್ಯದ ಸ್ಥಿತಿ ಎದುರಿಸುತ್ತಿದೆ. ಒಂದು ಕಾಲದಲ್ಲಿ ಈ ಭಾಗದ ಅಂತರ್ಜಲದ ಪ್ರಮುಖ ಸೆಲೆಯಾಗಿದ್ದ ಈ ಕೆರೆ ಸದ್ಯ ಕಳೆ ಗಿಡಗಳು ಹಾಗೂ ಹೂಳಿನಿಂದ ಆವೃತವಾಗಿ ದುಸ್ಥಿತಿಗೆ ತಲುಪಿದೆ. ಸರಿಯಾದ ನಿರ್ವಹಣೆ ಹಾಗೂ ಅಭಿವೃದ್ಧಿ ಕೊರತೆಯಿಂದಾಗಿ ಈ ಐತಿಹಾಸಿಕ ಇತಿಹಾಸ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುವಂತಾಗಿದೆ.ಸುಮಾರು ಅರ್ಧ ಎಕರೆ ವಿಸ್ತೀರ್ಣ ಹೊಂದಿರುವ ನಾಗರಬಾವಿ ಕೆರೆ ಸುತ್ತಮುತ್ತಲಿನ ನೂರಾರು ಮನೆಗಳ ಬಾವಿಗಳಿಗೆ ನೀರುಣಿಸುವ ಪ್ರಮುಖ ಜಲ ಸಂಪನ್ಮೂಲವಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಸಾಲ್ವೇನಿಯಂ ಸೇರಿದಂತೆ ವಿವಿಧ ಕಳೆ ಗಿಡಗಳು ಸಂಪೂರ್ಣವಾಗಿ ಹರಡಿಕೊಂಡಿದ್ದು, ನೀರಿನ ಹರಿವು ಮತ್ತು ಸಂಗ್ರಹಣೆಗೆ ಅಡ್ಡಿಯಾಗಿದೆ. ಜೊತೆಗೆ ಕೆರೆಯ ದಂಡೆಗಳು ಹಲವೆಡೆ ಶಿಥಿಲಗೊಂಡಿದ್ದು, ಹೂಳು ತುಂಬಿಕೊಂಡಿರುವುದರಿಂದ ಕೆರೆಯ ಆಳವೂ ಕಡಿಮೆಯಾಗುತ್ತಿದೆ. ತಕ್ಷಣ ಹೂಳೆತ್ತುವ ಹಾಗೂ ಪುನಶ್ಚೇತನ ಕಾರ್‍ಯ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅಂತರ್ಜಲ ಮಟ್ಟ ಕುಸಿಯುವ ಭೀತಿ ಎದುರಾಗಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
2027ರಲ್ಲಿ ನಡೆಯಲಿರುವ ಶ್ರೀ ಶ್ರೀ ಗೊಮ್ಮಟೇಶ್ವರ ಮಹಾ ಮಸ್ತಕಾಭಿಷೇಕ ಮಹೋತ್ಸವ ಹಿನ್ನೆಲೆಯಲ್ಲಿ ಈ ಪ್ರದೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದ್ದು, ಅದಕ್ಕೂ ಮುನ್ನ ಕೆರೆಯ ಅಭಿವೃದ್ಧಿ ಕಾರ್‍ಯ ಪೂರ್ಣಗೊಳ್ಳಬೇಕೆಂಬುದು ನಾಗರಿಕರ ಆಶಯವಾಗಿದೆ.
ನಾಗರಬಾವಿ ಕೆರೆಯ ಪಕ್ಕದಲ್ಲೇ ಪುರಾತನ ನಾಗದೇವರು ಹಾಗೂ ಕ್ಷೇತ್ರದೇವತೆಗಳ ಸಾನಿಧ್ಯವಿದ್ದು, ಇತ್ತೀಚೆಗೆ ಈ ಆಲಯಗಳ ಜೀರ್ಣೋದ್ಧಾರ ನಡೆದು ಸುಂದರ ಗುಡಿಗಳು ನಿರ್ಮಾಣಗೊಂಡಿವೆ.*2027ರಲ್ಲಿ ಕಾರ್ಕಳ ಶ್ರೀ ಗೊಮ್ಮಟೇಶ್ವರ ಮಸ್ತಾಕಾಭೀಷೇಕದ ಮೊದಲು ಕೆರೆ ಅಭಿವೃದ್ಧಿಯಾದರೆ ಒಳ್ಳೆಯದು. ಇಲ್ಲಿಯ ಇತಿಹಾಸ ಮತ್ತೆ ಜೀವ ಕಳೆ ತುಂಬಬೇಕು. ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಬೇಕು. ನವೀನ್ ಚಂದ್ರ ಶೆಟ್ಟಿ , ರೋಟರಿ ಕ್ಲಬ್ ಅಧ್ಯಕ್ಷ