ಆಲೂರು: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳಲ್ಲಿನ ಪ್ರತಿಭೆ ಹೊರತರಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ತಾಲೂಕಿನ ಪಾಳ್ಯ ಹೋಬಳಿ ತಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂತಜೋಸೆಫ್ ಪ್ರೌಢಶಾಲೆ ಕುಪ್ಪೆ ಕಾಲೋನಿಯಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹೆಸರೇ ಸೂಚಿಸುವಂತೆ ಪ್ರತಿಭೆ ಕಾರಂಜಿಯಂತೆ ಚಿಮ್ಮಬೇಕು. ಮಕ್ಕಳ ಪ್ರತಿಭೆಗೆ ಎಲ್ಲರೂ ಪ್ರೋತ್ಸಾಹ ಮತ್ತು ಪ್ರೇರಣೆ ನೀಡಬೇಕು. ಆಸ್ತಿ, ಆಭರಣ ಎಂದೂ ಶಾಶ್ವತವಲ್ಲ. ಶಿಕ್ಷಣ ಮಾತ್ರ ಎಂದಿಗೂ ಪ್ರಜ್ವಲಿಸುತ್ತದೆ. ಬಡ ಮಕ್ಕಳಿಗೂ ದ್ವಿಭಾಷೆಯಲ್ಲಿ ಶಿಕ್ಷಣ ದೊರೆಯಬೇಕು. ಮಕ್ಕಳಿಗೆ ಶಿಕ್ಷಣ, ಸಂಸ್ಕಾರ, ಸಂಸ್ಕೃತಿ ಬೆಳೆಸಬೇಕು ಎಂದು ಸಲಹೆ ನೀಡಿದರು.ತಾಲೂಕಿನ ನಾಲ್ಕು ಹೋಬಳಿಯಿಂದ ಸುಮಾರು 100ಕ್ಕೂ ಹೆಚ್ಚು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ವೈಯಕ್ತಿಕ ಸ್ಪರ್ಧೆ ಹಾಗೂ ಗುಂಪು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ಅದರಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಆಯ್ಕೆಯಾದರು.