ಕನ್ನಡಪ್ರಭ ವಾರ್ತೆ ಆನಂದಪುರ
ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಯ ಅನಾವರಣಗೊಳಿಸುವುದೆ ಪ್ರತಿಭಾ ಕಾರಂಜಿಯ ಉದ್ದೇಶವಾಗಿದೆ ಎಂದು ತಾಲೂಕು ಶಿಕ್ಷಣ ಸಂಯೋಜಕ ವಿ.ಟಿ.ಸ್ವಾಮಿ ತಿಳಿಸಿದರು.ಅವರು ಇಲ್ಲಿನ ಸಾಧನಾ ವಿದ್ಯಾಕೇಂದ್ರದ ಶಾಲೆಯಲ್ಲಿ ಗುರುವಾರ ನಡೆದ ಆನಂದಪುರ ವಲಯಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಭೆಗಳನ್ನು ಹೊರ ಹಾಕಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ. ಸ್ಪರ್ಧೆಗಳಲ್ಲಿ ಗುಣಾತ್ಮಕತೆ ಇರಬೇಕು, ಅದಕ್ಕೆ ಪೂರಕವಾದ ಆಸಕ್ತಿ, ಅಧ್ಯಯನ ಅತಿ ಮುಖ್ಯವಾಗಿದೆ, ಪಠ್ಯದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಲ್ಲಿ ಬದುಕಿಗೆ ಸ್ಪೂರ್ತಿಯಾಗಲಿದೆ. ಶಿಕ್ಷಣದಲ್ಲಿ ಅಂಕಗಳ ಜೊತೆಗೆ ಮೌಲ್ಯ, ಸಂಸ್ಕೃತಿ, ಸಂಸ್ಕಾರ ಬೆಳೆಸಿಕೊಳ್ಳಬೇಕು ಇದರಿಂದ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ, ಮಕ್ಕಳ ಪ್ರತಿಭೆಗೆ ಶಿಕ್ಷಕರು ಪೋಷಕರ ಮಾರ್ಗದರ್ಶನ ನೀಡುವ ಮೂಲಕ ಮಕ್ಕಳ ಯಶಸ್ಸಿಗೆ ಮುಂದಾಗಬೇಕು.ಸ್ಥಳೀಯ ಜನಪದ ನೃತ್ಯ ಮತ್ತು ಗಾಯನ, ಚಿತ್ರಕಲೆ, ಪ್ರಬಂಧ, ಚರ್ಚಾಸ್ಪರ್ಧೆ, ಏಕಾಪಾತ್ರಾಭಿನಯ, ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳು ಅನೇಕ ಕಲಾತ್ಮಕ ಸಾಂಸ್ಕೃತಿಕ ಚಟುವಟಿಕೆಗಳು ಪ್ರತಿಭಾ ಕಾರಂಜಿ ವ್ಯಾಪ್ತಿಯಲ್ಲಿ ಬರುವುದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಜತೆಗೆ ವಿದ್ಯಾರ್ಥಿಗಳಲ್ಲಿ ಕಲಾಭಿರುಚಿಯ ಸಾಮರ್ಥ್ಯವನ್ನು ಸಾಬೀತು ಮಾಡಲು ಇದೊಂದು ಉತ್ತಮ ವೇದಿಕೆ ಎಂದು ಹೇಳಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎ, ಹೆಚ್. ಭೂಮೇಶ್ ಮಾತನಾಡಿ, ಮಕ್ಕಳ ಮನಸ್ಸನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅವರಿಗೆ ಕಲಿಸುವ ಕೆಲಸ ಆಗಬೇಕಾಗಿದೆ. ತನ್ನೊಳಗೆ ಅಡಗಿರುವ ಪ್ರತಿಭೆಗಳನ್ನು ಹೊರಹಾಕಲು ಇಂತಹ ಸಂದರ್ಭಗಳನ್ನು ಬಳಸಿಕೊಳ್ಳಬೇಕು ಆ ನಿಟ್ಟಿನಲ್ಲಿ ನಿರಂತರ ಪರಿಶ್ರಮ ಬೇಕಾಗಿದೆ, ಬೆಳೆಯುವ ಪ್ರತಿಭೆಗಳಿಗೆ ಮಾರ್ಗದರ್ಶನದ ಅವಶ್ಯಕತೆ ಇದೆ ಎಂದರು.ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಬಲೇಶ್ವರ ಮಾತನಾಡಿ, ಪ್ರತಿಭಾವಂತರಿಗೆ ಯಾವುದೇ ಕೊರತೆ ಇಲ್ಲ, ಆದರೆ ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕಾಗಿದೆ, ಪ್ರಾಥಮಿಕ ಹಂತದಲ್ಲಿಯೆ ಸೂಕ್ತ ತರಬೇತಿ ನೀಡಬೇಕು ಎಂದರು.
ಸಾಧನಾ ವಿದ್ಯಾಕೇಂದ್ರ ವಾಣಿಶ್ರೀ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ವೇದಿಕೆಯಲ್ಲಿ ಕೆಪಿಎಸ್ ಶಾಲೆಯ ಉಪಪ್ರಾಂಶುಪಾಲ ಈಶ್ವರಪ್ಪ, ಯಡೇಹಳ್ಳಿ ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಂಶುಪಾಲ ಚಂದ್ರಶೇಖರ್, ಖಾಸಗಿ ಶಾಲೆಗಳ ನೌಕರರ ಸಂಘದ ಅಧ್ಯಕ್ಷರಾದ ಮಂಜಪ್ಪ, ಮಲೆನಾಡು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶೇಖರಪ್ಪ, ಸಾಧನಾ ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ, ಸುಜಾತ ನಯನ ಉಪಸ್ಥಿತರಿದ್ದರು.