ಪ್ರತಿಭಾ ಕಾರಂಜಿ ಸುಪ್ತ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ

KannadaprabhaNewsNetwork | Published : Nov 13, 2024 12:09 AM

ಸಾರಾಂಶ

ಮೊಳಕಾಲ್ಮುರು: ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವುದೇ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಿರ್ಮಲಾದೇವಿ ತಿಳಿಸಿದರು.

ಮೊಳಕಾಲ್ಮುರು: ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವುದೇ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಿರ್ಮಲಾದೇವಿ ತಿಳಿಸಿದರು.

ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಂಗಳವಾರ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿಭಾ ಕಾರಂಜಿ ಎಂಬುದು ಕಲಾ ಪ್ರತಿಭೆಗಳ ಚಿಣ್ಣರ ಹಬ್ಬ, ಮಕ್ಕಳ ಪ್ರತಿಭೆಯನ್ನು ತಂದೆ ತಾಯಿಗಳು ಹತ್ತಿರದಿಂದ ಕಣ್ತುಂಬಿಕೊಳ್ಳುವಂತ ವೇದಿಕೆಯಾಗಿದೆ. ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದವರೆಗೆ ಸ್ಪರ್ಧೆ ಇರುವುದರಿಂದ ಶಾಲೆ ಶಿಕ್ಷಕರು ಉತ್ತಮ ತರಬೇತಿ ನೀಡಿ ಸಜ್ಜುಗೊಳಿಸಬೇಕು. ಸರ್ಕಾರ ವಿವಿಧ ಯೋಜನೆಗಳನ್ನು ಜಾರಿ ಮಾಡಿ ಗುಣಮಟ್ಟದ ಶಿಕ್ಷಣಕ್ಕೆ ಪ್ರಯತ್ನಿಸುತ್ತಿದೆ. ಇದರ ಪ್ರಯೋಜನ ಪಡೆದುಕೊಂಡು ಮಕ್ಕಳು ವಿದ್ಯಾವಂತರಾಗಬೇಕು ಎಂದರು.

ಸರ್ವ ಶಿಕ್ಷಣ ಅಭಿಯಾನ ಜಾರಿಗೆ ಬಂದ ನಂತರ ಒಂದರಿಂದ 10ನೇ ತರಗತಿ ಮಕ್ಕಳಿಗೆ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಮೂಲಕ ಅವರ ಪ್ರತಿಭೆ ಗುರುತಿಸುವ ಕೆಲಸ ಮಾಡುತ್ತಿದೆ. ಇದರ ಮೂಲಕ ಗ್ರಾಮೀಣ ಸೊಗಡಿನ ಸಾಂಸ್ಕೃತಿಕ ವೈಭವವನ್ನು ಇನ್ನಷ್ಟು ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತಿದೆ. ಮನೋರಂಜನಾತ್ಮಕ ಕಾರ್ಯಕ್ರಮದಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಫಲಿತಾಂಶಕ್ಕೂ ಸಹಕಾರಿಯಾಗಲಿದೆ. ಶಿಕ್ಷಕರು ಕಲಾ ಪ್ರತಿಭೆ ಇರುವಂತ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ಕಲಿಕೆಯ ಜತಗೆ ಕಲೋತ್ಸಾಹ ಉತ್ತೇಜಿಸಬೇಕು ಎಂದರು.

ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಮಾತನಾಡಿ, ಸ್ಥಳೀಯ ಕಲಾತ್ಮಕ ಸಾಂಸ್ಕೃತಿಕ ಚಟುವಟಿಕೆಗಳು ಪ್ರತಿಭಾ ಕಾರಂಜಿ ವ್ಯಾಪ್ತಿಯಲ್ಲಿ ಬರುವುದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಜತೆಗೆ ವಿದ್ಯಾರ್ಥಿಗಳಲ್ಲಿ ಕಲಾಭಿರುಚಿಯ ಸಾಮರ್ಥ್ಯವನ್ನು ಸಾಬೀತು ಮಾಡಲು ಇದು ಉತ್ತಮ ವೇದಿಕೆಯಾಗಿದೆ ಎಂದರು.

ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಎಲ್ಲ ರೀತಿಯ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಮಕ್ಕಳ ಪ್ರತಿಭೆ ಉತ್ತಮವಾಗಿದೆ. ಇಂತಹ ಕಾರ್ಯಕ್ರಮಗಳು ಮಕ್ಕಳ ಮಾನಸಿಕ ಒತ್ತಡ ಕಡಿಮೆ ಮಾಡಿ ಕಲಿಕೆಗೆ ಪ್ರೇರಕವಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಸೂರಯ್ಯ, ಉಪಾಧ್ಯಕ್ಷೆ ಜಯಮ್ಮ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ್ , ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ಮಿಜಾಮಿಲ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವ ಅಧ್ಯಕ್ಷ ಸಣ್ಣ ಯಲ್ಲಪ್ಪ, ಶಿಕ್ಷಣ ಸಂಯೋಜಕ ಲೋಹಿತ್ ಕುಮಾರ್, ಮಂಜುನಾಥ, ಮಂಜು ಪ್ರಸಾದ್, ರಾಮಚಂದ್ರಯ್ಯ, ಪ್ರಸನ್ನ ಕುಮಾರ್, ತಿಪ್ಪೇಶ್ ಇದ್ದರು.

Share this article