ಕನ್ನಡಪ್ರಭ ವಾರ್ತೆ ತುರುವೇಕೆರೆಸಮಾಜದಲ್ಲಿರುವ ದೀನ, ದಲಿತರ, ಅಮಾಯಕರ ಸೇವೆ ಮಾಡುವ ಮೂಲಕ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ಮಸಾಲಾ ಜಯರಾಮ್ ಹೇಳಿದರು.ತಾಲೂಕಿನ ದೊಂಬರನಹಳ್ಳಿ ಗ್ರಾಮದಲ್ಲಿ ತುಮಕೂರು ಜಿಲ್ಲಾ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನವರ ವರ್ಷಾಚರಣೆ, ದತ್ತಿ ಕಾರ್ಯಕ್ರಮ, ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ದಿ. ಡಿ.ಆರ್.ಬಸವರಾಜು, ದಿ.ಡಿ.ಎಂ.ಚಂದನ್‌ಗೆ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ದಿ.ಡಿ.ಆರ್.ಬಸವರಾಜು ತಮ್ಮ ಗ್ರಾಮ ಸೇರಿ ಸುತ್ತಲಿನ ಗ್ರಾಮಗಳ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದರು. ತಮ್ಮ ಅವಧಿಯಲ್ಲಿ ದೊಂಬರನಹಳ್ಳಿ ಗ್ರಾಮಕ್ಕೆ ಪಶು ಆಸ್ಪತ್ರೆ ಬೇಕು ಎಂದು ಹೋರಾಡಿದ್ದರಿಂದ ಅಂದಿನ ಪಶುಸಂಗೋಪನಾ ಸಚಿವರು ಆಸ್ಪತ್ರೆಯನ್ನು ಮಂಜೂರು ಮಾಡಿದ್ದರು. ಇದರಿಂದ ಈ ಭಾಗದ ಸಾವಿರಾರು ರೈತರ ರಾಸುಗಳಿಗೆ ಅನುಕೂಲವಾಯಿತು. ಇಲ್ಲಿನ ಪ್ರೌಢಶಾಲೆಗೆ ಕಂಪ್ಯೂಟರ್ ಕೊಠಡಿ ನಿರ್ಮಾಣ ಮಾಡಲು ಒಂದು ಲಕ್ಷ ರು.ಗಳನ್ನು ದೇಣಿಗೆಯಾಗಿ ಕೊಡಿಸಿದ್ದನ್ನು ನೆನಪು ಮಾಡಿಕೊಂಡರು. ಈ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ತಾಲೂಕಿನ ಎಲ್ಲ ಶಾಲೆಗಳ ಮಕ್ಕಳಿಗೆ ಅನುಕೂಲವಾಗಲು ವ್ಯಾಕರಣ ಗ್ರಂಥವನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ ಎಂದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಶರಣರ ಬದುಕನ್ನು ಮರಣದಲ್ಲಿ ಕಾಣಬೇಕು. ನಮ್ಮ ಬದುಕಿನಲ್ಲಿ ಆಚಾರ, ವಿಚಾರಗಳು ನೆರೆಹೊರೆಯವರನ್ನು ಅಕ್ಕರೆಯಿಂದ ಕಾಣುವಂತಿರಬೇಕು. ಬೇರೆಯವರ ಕಷ್ಟದಲ್ಲಿ ತಾನೂ ಭಾಗಿಯಾಗಿ ಎಲ್ಲರ ಒಳಿತನ್ನೂ ಬಯಸುವವನೇ ನಿಜವಾದ ಶರಣ ಎಂದರು.ಜೆಡಿಎಸ್ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ಮಾತನಾಡಿ, ಡಿ.ಆರ್.ಬಸವರಾಜು ಒಂದು ಪಕ್ಷಕ್ಕೆ ನಿಷ್ಠಾವಂತರಾಗಿದ್ದರೂ ಸಹ ಯಾರೊಂದಿಗೂ ದ್ವೇಷ ಸಾಧಿಸದೇ ಎಲ್ಲ ನಾಯಕರೊಂದಿಗೆ ಆತ್ಮೀಯತೆಯಿಂದ ಮಾತನಾಡಿಸಿ ವಿಶ್ವಾಸ ಹೊಂದಿದ್ದರು ಎಂದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಜಿ.ಸಿದ್ದರಾಮಯ್ಯ, ಶ್ರೀ ಸೋಮೇಶ್ವರ ಪ್ರೌಢಶಾಲೆಯ ಮಕ್ಕಳಿಗೆ ನೋಟ್ ಬುಕ್ ಮತ್ತು ಡಿಕ್ಷನರಿ ವಿತರಿಸಲಾಯಿತು. ತುಮುಲ್ ಜಿಲ್ಲಾ ಮಾಜಿ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ, ತೆಂಗು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಎನ್.ಆರ್.ಜಯರಾಮ್, ಚಂದ್ರಮ್ಮ, ನಿವೃತ್ತ ಶಿಕ್ಷಕ ಡಿ.ಆರ್.ನರಸಿಂಹಮೂರ್ತಿ, ತುಮಕೂರು ಟಿಡಿಸಿಸಿಐ ಕಾರ್‍ಯದರ್ಶಿ ಮಲ್ಲೇಶಯ್ಯ, ಗ್ರಾಪಂ ಮಾಜಿ ಸದಸ್ಯ ಮುನಿಯಪ್ಪ, ಟೌನ್ ಬ್ಯಾಂಕ್ ಅಧ್ಯಕ್ಷ ಎಚ್.ಆರ್. ರಾಮೇಗೌಡ, ನಿವೃತ್ತ ಪ್ರಾಚಾರ್ಯ ರಾಜಣ್ಣ, ಕೆ.ಎಸ್.ಲಿಂಗದೇವರು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಕುಮಾರ ಸ್ವಾಮಿ, ಎಸ್.ಡಿ.ಎಂಸಿ ಅಧ್ಯಕ್ಷ ಎಚ್.ಬಿ.ರಂಗಸ್ವಾಮಿ, ಮುಖ್ಯ ಶಿಕ್ಷಕ ಬಿ.ಎಸ್.ಶಾಂತರಾಜು ಪಾಲ್ಗೊಂಡಿದ್ದರು.