ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಸುಳ್ಯ ಬಿಜೆಪಿ ಯುವ ಮೋರ್ಚಾ ಮುಖಂಡ ಬೆಳ್ಳಾರೆ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಹಿನ್ನೆಲೆ ಸೋಮವಾರಪೇಟೆ ತಾಲೂಕಿನ ೩ ಕಡೆ ಗುರುವಾರ ಬೆಳಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಅಧಿಕಾರಿಗಳ ತಂಡ ಕೊಲೆ ಆರೋಪಿಗಳ ಮನೆಗಳಲ್ಲಿ ಶೋಧ ನಡೆಸಿದೆ.ಚೌಡ್ಲು ಗ್ರಾಮದ ತೌಶಿಕ್, ತಣ್ಣೀರುಹಳ್ಳ ಗ್ರಾಮದ ನೌಷದ್, ಕಲ್ಲಂದೂರು ಗ್ರಾಮದ ಅಬ್ದುಲ್ ರೆಹಮಾನ್ ಮನೆಗೆ ಅಧಿಕಾರಿಗಳು ದಾಳಿ ನಡೆಸಿದರು.
ಆರೋಪಿಗಳ ಮನೆಯವರ ಪೋನ್‌ಗಳನ್ನು ಪರಿಶೀಲಿಸಿ, ಸಿಮ್‌ಕಾರ್ಡ್ ಹಾಗು ಬ್ಯಾಂಕ್ ಖಾತೆ ಪುಸ್ತಕಗಳನ್ನು ಪಡೆದುಕೊಂಡು, ತೀವ್ರ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ದಾಖಲೆಗಳನ್ನು ಶೋಧಿಸಿದ್ದಾರೆ. ಕಂದಾಯ ಅಧಿಕಾರಿಗಳ ಸಮಕ್ಷಮ ಮಹಜರು ನಡೆಸಿ, ಸಹಿ ಪಡೆದುಕೊಂಡಿದ್ದಾರೆ.ಹೊಸತೋಟ ಗ್ರಾಮ ನಿವಾಸಿ, ಇದೀಗ ಸೋಮವಾರಪೇಟೆ ಪಟ್ಟಣದಲ್ಲಿ ವಾಸವಿರುವ ಜುನೈದ್ ಮನೆಗೆ ಮೊದಲ ಬಾರಿಗೆ ತೆರಳಿದ ತಂಡ, ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸಿದ್ದಾರೆ.ಕೊಲೆ ಪ್ರಕರಣದ ಮೂವರು ಆರೋಪಿಗಳು ಈ ಹಿಂದೆಯೇ ತಲೆಮರೆಸಿಕೊಂಡಿದ್ದಾರೆ. ಎರಡನೇ ಬಾರಿಗೆ ಐಎನ್‌ಎ ಅಧಿಕಾರಿಗಳು ಅರೋಪಿಗಳ ಮನೆಗೆ ಬಂದು ಮಾಹಿತಿ ಕಲೆ ಹಾಕಿದ್ದಾರೆ.ಮಡಿಕೇರಿ: ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳ ತಂಡ ಗುರುವಾರ ಬೆಳ್ಳಂಬೆಳಗ್ಗೆ ಕೊಡಗು ಜಿಲ್ಲೆಯ ವಿವಿಧ ಕಡೆ ಮೂವರ ಮನೆಗಳ ಮೇಲೆ ಏಕಾಏಕಿ ದಾಳಿ ನಡೆಸಿದೆ.ಸೋಮವಾರಪೇಟೆ ತಾಲೂಕಿನ ಹೊಸತೋಟ ಹಾಗೂ ಚೌಡ್ಲುವಿನಲ್ಲಿ ಇಬ್ಬರ ಮನೆ ಹಾಗೂ ಸುಂಟಿಕೊಪ್ಪದಲ್ಲಿ ವ್ಯಕ್ತಿಯೊಬ್ಬರ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡ ದಾಖಲಾತಿಗಳನ್ನು ಪರಿಶೀಲನೆ ನಡೆಸಿದೆ ಎನ್ನಲಾಗಿದೆ.ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳಿಗೆ ಕೊಡಗಿನ ಸಂಪರ್ಕವಿದೆ ಎಂದು ಹೇಳಲಾಗಿದ್ದು, ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.