ರಾಮನಗರ: ಪ್ರಧಾನಿ ನರೇಂದ್ರ ಮೋದಿಯವರ ಆಯಸ್ಸು ವೃದ್ಧಿಗಾಗಿ ಪ್ರಾರ್ಥಿಸಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಪದಾಧಿಕಾರಿಗಳು ನಗರದ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಮೋದಿ ಸತ್ತರೆ ಮುಂದೆ ಯಾರೂ ಪ್ರಧಾನಿ ಆಗೋದೇ ಇಲ್ವಾ ಎಂಬುದು ಶಾಸಕ ರಾಜು ಕಾಗೆ ಹೇಳಿಕೆ ಅಲ್ಲ. ರಾಹುಲ್ ಗಾಂಧಿ ಮನಸ್ಥಿತಿ ಕಾಗೆ ಬಾಯಲ್ಲಿ ಅಪಶಕುನ ನುಡಿಸಿದೆ ಎಂದು ಪದಾಧಿಕಾರಿಗಳು ಕಿಡಿಕಾರಿದರು.
ಸಾವುಗಳನ್ನೇ ಆಧರಿಸಿ ಅಧಿಕಾರ ಗಳಿಸಿದ ಕಾಂಗ್ರೆಸ್ಸಿಗರು, ಅಮೂಲ್ಯ ಜೀವಗಳ ಸಾವುಗಳಿಗಾಗಿ ಚಡಪಡಿಸುತ್ತಾರೆ. ಇದು ಕಾಂಗ್ರೆಸ್ ಪಕ್ಷದ ಹೀನ ಸಂಸ್ಕೃತಿಯ ಧ್ಯೋತಕವಾಗಿದೆ. ಇದು ರಾಜು ಕಾಗೆಯವರ ಹೇಳಿಕೆಯಂತಿಲ್ಲ. ಇದು ರಾಹುಲ್ ಗಾಂಧಿಯವರ ಮತ್ತು ಕಾಂಗ್ರೆಸ್ಸಿನ ಮನಸ್ಥಿತಿ. ಕಾಂಗ್ರೆಸ್ಸಿನ ಸಂಸ್ಕೃತಿಗೆ ಈ ಮೂಲಕ ಕೈಗನ್ನಡಿ ಹಿಡಿದಂತಾಗಿದೆ. ಅಷ್ಟಕ್ಕೂ ಮೋದಿಯವರ ಸಾವನ್ನು ಕಾಂಗ್ರೆಸ್ ಏಕೆ ಬಯಸುತ್ತಿದೆ ಎಂದು ಪ್ರಶ್ನಿಸಿದರು.ಈ ವೇಳೆ ಮಾತನಾಡಿದ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಎನ್.ಪುಷ್ಪಲತಾ, 370ನೇ ವಿಧಿ ರದ್ದು ಮಾಡಿ ಜಮ್ಮು ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವಾಗಿ ಪರಿವರ್ತಿಸಿದ್ದಕ್ಕೆ ಅವರು ಸಾಯಬೇಕೇ? ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ೬ ಸಾವಿರ ರುಪಾಯಿ ನೀಡಿ ರೈತರ ಬದುಕನ್ನು ಹಸನಾಗಿ ಮಾಡಿದ್ದಕ್ಕೆ ಅವರು ಸಾಯಬೇಕೇ? ಮಹಿಳೆಯರಿಗೆ ೩೩ ಶೇಕಡಾ ಮೀಸಲಾತಿ ಕೊಟ್ಟದ್ದಕ್ಕೆ ಅವರು ಸಾಯಬೇಕೇ? ಜನ್ ಧನ್ ಬ್ಯಾಂಕ್ ಖಾತೆಗಳ ಮೂಲಕ ನೇರ ಸೌಲಭ್ಯ ವರ್ಗಾವಣೆ (ಡಿಬಿಟಿ) ಮಾಡಿ ಕಾಂಗ್ರೆಸ್ಸಿನ ಭ್ರಷ್ಟಾಚಾರ ತಪ್ಪಿಸಿ ಪ್ರತಿಯೊಂದು ರುಪಾಯಿ ಫಲಾನುಭವಿಯ ಖಾತೆಗೆ ಸೇರುವಂತೆ ಮಾಡಿದ್ದಕ್ಕಾಗಿ ಅವರ ಸಾವನ್ನು ಕಾಂಗ್ರೆಸ್ ಬಯಸುತ್ತದೆಯೇ? ಕೋಟ್ಯಂತರ ಶೌಚಾಲಯಗಳನ್ನು ನಿರ್ಮಿಸಿಕೊಟ್ಟು ಮಹಿಳೆಯರ ಘನತೆ ಹೆಚ್ಚಿಸಿದ್ದಕ್ಕಾಗಿ ಮೋದಿಜೀ ಅವರ ಅಂತ್ಯವನ್ನು ಕಾಂಗ್ರೆಸ್ಸಿಗರು ಬಯಸುತ್ತಾರಾ? ವಿಶ್ವದ ೧೧ನೇ ಆರ್ಥಿಕ ಶಕ್ತಿಯಾಗಿದ್ದ ನಮ್ಮ ದೇಶವನ್ನು ೫ನೇ ಆರ್ಥಿಕ ಶಕ್ತಿಯಾಗಿ ಮಾಡಿದ್ದಕ್ಕಾಗಿ ಈ ಕೆಟ್ಟದ್ದನ್ನು ಕಾಂಗ್ರೆಸ್ಸಿಗರು ಬಯಸುತ್ತಾರಾ ಎಂದು ಪ್ರಶ್ನಿಸಿದರು.
ರಾಜ್ಯದ ಕಾಂಗ್ರೆಸ್ ಸಚಿವ ಆರ್.ಬಿ.ತಿಮ್ಮಾಪುರ ಅವರು ಪ್ರಜ್ವಲ್ ರೇವಣ್ಣ ಮತ್ತು ಭಗವಾನ್ ಶ್ರೀಕೃಷ್ಣರನ್ನು ಹೋಲಿಸಿ ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷ ಅಯೋಧ್ಯೆಯ ಶ್ರೀರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಯ ಆಹ್ವಾನಪತ್ರವನ್ನು ತಿರಸ್ಕರಿಸಿ ಅಪಮಾನ ಮಾಡಿತ್ತು. ಇದೀಗ ಭಗವಾನ್ ಶ್ರೀಕೃಷ್ಣನಿಗೆ ಅವಮಾನ ಮಾಡುವಂತೆ ಮಾತನಾಡುತ್ತಿದೆ. ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳಾದ ಸಾನ್ವಿ ಗುರು, ಮಹದೇವಿ, ಗಿರಿಜಾ ಪ್ರಸಾದ್ , ಮೀನಾ, ಸಂಗೀತಾ, ಯಲ್ಲಮ್ಮ, ದೇವಿಕಾ, ಜಯಶೀಲಾ, ಶಿವಾನಂದ, ಸಿದ್ದಲಿಂಗಮೂರ್ತಿ ಮತ್ತಿತರರು ಹಾಜರಿದ್ದರು.