ಕನ್ನಡಪ್ರಭ ವಾರ್ತೆ ಯಾದಗಿರಿ
ಹಡಪದ ಅಪ್ಪಣ್ಣನವರ ಜಯಂತ್ಯುತ್ಸವವನ್ನು ಜಿಲ್ಲೆಯಾದ್ಯಂತ ಜುಲೈ 21 ರಂದು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಅವರ ಅಧ್ಯಕ್ಷತೆಯಲ್ಲಿ ನಡೆದ ಹಡಪದ ಅಪ್ಪಣ್ಣ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.ನಗರದ ಸರಕಾರಿ ಪದವಿ ಕಾಲೇಜು ಸಭಾಂಗಣದಲ್ಲಿ ಆಚರಿಸುವ ಜಿಲ್ಲಾಮಟ್ಟದ ಅಪ್ಪಣ್ಣನವರ ಜಯಂತ್ಯುತ್ಸವಕ್ಕೆ ಸಂಬಂಧಿಸಿದಂತೆ ಯಾವುದೇ ಲೋಪ ಬಾರದಂತೆ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.ಜಯಂತಿ ಆಚರಣೆ ಸಂದರ್ಭದಲ್ಲಿ ಶಿಷ್ಠಾಚಾರ ಪಾಲನೆ, ಶಿಷ್ಠಾಚಾರದಂತೆ ಅತಿಥಿ ಗಣ್ಯರು ಮತ್ತು ನುರಿತ ಉಪನ್ಯಾಸಕರನ್ನು ಆಹ್ವಾನಿಸುವುದು ಬಹಳ ಮುಖ್ಯ. ಆದ್ದರಿಂದ ಸೌಕರ್ಯದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅದೇ ರೀತಿ ವೇದಿಕೆ, ಕುಡಿಯುವ ನೀರು, ವಿದ್ಯುತ್, ಅಲಂಕಾರ, ಧ್ವನಿವರ್ಧಕ, ಸ್ವಚ್ಛತೆ ಮತ್ತು ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಬೇಕೆಂದು ನಿರ್ದೇಶನ ನೀಡಿದರು.ಜಯಂತಿಗೆ ಜಿಲ್ಲಾಮಟ್ಟದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು ಮತ್ತು ಎಲ್ಲಾ ತಾಲ್ಲೂಕು ಮಟ್ಟದಲ್ಲಿ ಶಾಲಾ-ಕಾಲೇಜು, ವಿವಿಧ ಕಚೇರಿಗಳಲ್ಲಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ತಿಳಿಸಿದರು.ಈ ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ, ಸಮಾಜದ ಮುಖಂಡರಾದ ಅಖಿಲ ಕರ್ನಾಟಕ ಅಧ್ಯಕ್ಷ ಅಯ್ಯಣ್ಣ ಇಬ್ರಾಹಿಂಪುರ, ಕಲ್ಯಾಣ ಕರ್ನಾಟಕ ಅಧ್ಯಕ್ಷ ಭಾಗಣ್ಣ ಸಂಗಣ್ಣ ಇಟಗಿ, ಜಿಲ್ಲಾ ಗೌರವಾಧ್ಯಕ್ಷ ಶರಣಪ್ಪ ಹೋತಪೇಟ, ಶಹಾಪುರ ತಾಲೂಕಾಧ್ಯಕ್ಷ ಶರಣು ಹಡಪದ ಸಗರ, ಶಿವಪುತ್ರಪ್ಪ ಸಗರ, ಅಮರೇಶ ವಡಿಗೇರಾ, ಮಲಕಣ್ಣ ಸಗರ, ಭೀಮು ಶಿರವಾಳ, ಮಲ್ಲಿಕಾರ್ಜುನ ವಡಗೇರಾ, ಚನ್ನಪ್ಪ ಯರಗೋಳ, ಸಿದ್ರಾಮಪ್ಪ ಯರಗೋಳ, ಮಲ್ಲಿಕಾರ್ಜುನ ಸಗರ ಸೇರಿದಂತೆ ಇತರರಿದ್ದರು.