ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಇಲ್ಲಿನ ವೈದ್ಯನೋರ್ವ ಪ್ರೀ ವೆಡ್ಡಿಂಗ್ ಶೂಟ್‌ಗೆ ಸರ್ಕಾರಿ ಆಪರೇಷನ್ ಥಿಯೇಟರ್ ಬಳಕೆ ಮಾಡಿಕೊಂಡ ಪ್ರಕರಣ ಬುಧವಾರ ನಡೆದಿದೆ.
ಹೊಳಲ್ಕೆರೆ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ವೈದ್ಯ, ಪತ್ನಿಯನ್ನಾಗಿ ವೈದ್ಯರನ್ನೇ ಆರಿಸಿಕೊಂಡಿದ್ದಾರೆ. ಇವರು ಪ್ರೀ ವೆಡ್ಡಿಂಗ್ ಶೂಟ್ ಗೆ ಭರಮಸಾಗರದ ಆಸ್ಪತ್ರೆಯ ಆಪರೇಷನ್ ಥಿಯೇಟರನ್ನೇ ಲೊಕೇಷನ್ ಆಗಿ ಮಾಡಿಕೊಂಡು ಶೂಟಿಂಗ್ ಮಾಡಿದ್ದಾರೆ.
ಹಾಸಿಗೆ ಮೇಲೆ ರೋಗಿಯೋರ್ವನನ್ನು ಮಲಗಿಸಿ ವೈದ್ಯ ಕೈಯಲ್ಲಿ ಕತ್ತರಿ ಹಿಡಿದಿದ್ದರೆ, ಭಾವಿ ಪತ್ನಿ ಆತನಿಗೆ ಸಹಾಯ ಮಾಡುತ್ತಿರುವ ದೃಶ್ಯವಿದು. ಅಂತಿಮವಾಗಿ ಆಪರೇಷನ್ ಮುಗೀತು ಎಂದಾಕ್ಷಣ ರೋಗಿ ದಿಗ್ಗನೆ ಎದ್ದು ಕುಳಿತುಕೊಳ್ಳುತ್ತಾನೆ. ಈ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುಂದಿನವಾರವೇ ಅವರಿಬ್ಬರ ವಿವಾಹವಿದೆ. ಪ್ರೀ ವೆಡ್ಡಿಂಗ್ ಶೂಟ್ ಗೆ ಸಂಬಂಧಿಸಿದಂತೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ವಿಷಯ ನನ್ನ ಗಮನಕ್ಕೆ ಬಂದಿದ್ದು ಪರಿಶೀಲಿಸುತ್ತಿದ್ದೇನೆ. ಅವರು ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ವೈದ್ಯರಾಗಿದ್ದಾರೆ. ಈ ಬಗ್ಗೆ ನೋಟಿಸ್ ನೀಡುತ್ತೇನೆ ಎಂದು ಹೇಳಿದರು.