ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಹೋಬಳಿ ಮಟ್ಟದ ಸಮಾವೇಶ: ಪೂರ್ವಸಿದ್ಧತಾ ಸಭೆ
ಕನ್ನಡಪ್ರಭ ವಾರ್ತೆ ಹಾನಗಲ್ಲಕರ್ನಾಟಕ ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳೆಲ್ಲರಿಗೂ ನೆರವು ಲಭಿಸುವಂತೆ ಅಧಿಕಾರಿಗಳು ಶೀಘ್ರ ಕ್ರಮ ಜರುಗಿಸಬೇಕು, ತಾಂತ್ರಿಕ ತೊಂದರೆಗಳಿದ್ದರೆ ಕೂಡಲೇ ಅವೆಲ್ಲವನ್ನೂ ಬಗೆಹರಿಸಬೇಕು ಎಂದು ತಾಲೂಕಿನ ವಿವಿಧ ಅಧಿಕಾರಿಗಳಿಗೆ ಶಾಸಕ ಶ್ರೀನಿವಾಸ ಮಾನೆ ಸೂಚಿಸಿದರು.
ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಹೋಬಳಿ ಮಟ್ಟದ ಸಮಾವೇಶಗಳ ಹಿನ್ನೆಲೆ ಪ್ರಮುಖ ಇಲಾಖೆಗಳ ಅಧಿಕಾರಿಗಳ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಡಿದ ಅವರು, ತಾಂತ್ರಿಕ ದೋಷ ಸೇರಿದಂತೆ ಇತರ ಕಾರಣಗಳಿಂದ ಕೆಲ ಅರ್ಹರು ಗ್ಯಾರಂಟಿ ಯೋಜನೆಗಳ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸಮಾವೇಶಗಳಲ್ಲಿ ಅರ್ಹರಿಗೆ ಸ್ಥಳದಲ್ಲಿಯೇ ಸಮಸ್ಯೆ ಪರಿಹರಿಸಿ ಗ್ಯಾರಂಟಿ ಯೋಜನೆಗಳ ಲಾಭ ದೊರಕುವಂತೆ ಗಮನ ಹರಿಸಲು ಸೂಚಿಸಿದರು.ಗ್ಯಾರಂಟಿ ಯೋಜನೆಗಳ ಕುರಿತು ಬೀದಿನಾಟಕ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಸಮಾವೇಶಗಳ ಇತರ ಸಿದ್ಧತೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಫೆ. ೯ರಂದು ಸಂಜೆ ೪ ಗಂಟೆಗೆ ಅಕ್ಕಿಆಲೂರಿನ ಎನ್.ಡಿ.ಪಿ.ಯು. ಕಾಲೇಜು ಮೈದಾನದಲ್ಲಿ ಅಕ್ಕಿಆಲೂರು ಹೋಬಳಿ ಮಟ್ಟದ ಸಮಾವೇಶ, ಫೆ. ೧೭ರಂದು ಸಂಜೆ ೪ ಗಂಟೆಗೆ ಹಾನಗಲ್ ನಗರದ ಜನತಾ ಶಿಕ್ಷಣ ಸೌಹಾರ್ದ ಸಂಘದ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಕಾಲೇಜಿನ ಮೈದಾನದಲ್ಲಿ ಹಾನಗಲ್ ಹೋಬಳಿ ಮಟ್ಟದ ಸಮಾವೇಶ ಹಾಗೂ ಫೆ. ೨೬ ರಂದು ಸಂಜೆ ೪ ಗಂಟೆಗೆ ಮಹರಾಜಪೇಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮೈದಾನದಲ್ಲಿ ಬಮ್ಮನಹಳ್ಳಿ ಹೋಬಳಿ ಮಟ್ಟದ ಸಮಾವೇಶ ನಡೆಸಲು ಯೋಜಿಸಲಾಗಿದ್ದು, ಎಲ್ಲ ಅಧಿಕಾರಿಗಳು ಈ ಸಮಾವೇಶದಲ್ಲಿ ಕಾರ್ಯಪ್ರವೃತ್ತರಾಗಿರಬೇಕು. ಇಲ್ಲಿಗೆ ಅಗಮಿಸಿದ ಯಾವುದೆ ಫಲಾನುಭವಿಗೆ ಯೋಜನೆ ತಲುಪಿಲ್ಲ ಎಂಬ ದೂರು ಬರಕೂಡದು. ಈ ಬಗ್ಗೆ ಮುಂದಾಲೋಚನೆ ಹಾಗೂ ಎಲ್ಲ ಸಿದ್ಧತೆ ಮಾಡಿಕೊಂಡು ಈ ಗ್ಯಾರಂಟಿ ಯೋಜನೆ ಸಮಾವೇಶದಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು. ಸಮಾವೇಶದಲ್ಲಿ ಯಾವುದೇ ರೀತಿಯ ಗೊಂದಲಕ್ಕೆ ಅವಕಾಶವಿಲ್ಲದಂತೆ, ಸಮಾವೇಶದಲ್ಲಿ ಪಾಲ್ಗೊಳ್ಳುವ ಎಲ್ಲ ಫಲಾನುಭವಿಗಳಿಗೆ ಈ ಗ್ಯಾರಂಟಿ ಯೋಜನೆಯ ಸರಿಯಾದ ಮಾಹಿತಿ ಒದಗಿಸುವಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಮುಂಚಿತವಾಗಿ ಬರಬಹುದಾದ ಸಮಸ್ಯೆಗಳ ಬಗೆಗೆ ಒದಗಿಸಬಹುದಾದ ಪರಿಹಾರಕ್ಕಾಗಿ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸಿದ್ಧತೆ ಮಾಡಿಕೊಳ್ಳಿ ಎಂದು ಸಲಹೆ ಮಾಡಿದರು.
ತಾಲೂಕು ತಹಸೀಲ್ದಾರ್ ಎಸ್.ರೇಣುಕಮ್ಮ, ತಾಪಂ ಇಒ ದೇವರಾಜ, ಸಿಡಿಪಿಒ ರಂಗನಾಥ, ಹೆಸ್ಕಾಂ ಎಇಇ ಆನಂದ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮೋಹನಕುಮಾರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಗಂಗಮ್ಮ ಹಿರೇಮಠ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.