ಕನ್ನಡಪ್ರಭ ವಾರ್ತೆ ಹುಣಸೂರು
ಹನ್ನೆರಡನೇ ಶತಮಾನದ ವಚನಕಾರರು ನಿಜವಾದ ಅರ್ಥದಲ್ಲಿ ಸಾಮಾಜಿಕ ಬಂಡಾಯಗಾರರಾಗಿದ್ದರು ಎಂದು ಕೆ.ಆರ್. ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಕೆ. ಚಂದ್ರಕುಮಾರ್ ಅಭಿಪ್ರಾಯಪಟ್ಟರು.ತಾಲೂಕಿನ ಗಾವಡಗೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಶರಣರ ವೈಚಾರಿಕತೆ ವಿದ್ಯಾರ್ಥಿಗಳೆಡೆಗೆ ಸರಣಿ ಉನ್ಯಾಸ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯದಲ್ಲಿ ಅಂಬಿಗರ ಚೌಡಯ್ಯ ವಿಷಯದ ಕುರಿತಾಗಿ ಮಾತನಾಡಿದರು.
ಅಂಬಿಗರ ಚೌಡಯ್ಯ ನಿಜವಾದ ಅರ್ಥದಲ್ಲಿ ಬಂಡಾಯಗಾರ ರಾಗಿದ್ದರು. ಅವರ ವಚನಗಳು ನೇರ ಹಾಗೂ ಸ್ಪಷ್ಟವಾದ ಸಂದೇಶಗಳನ್ನು ಸಮಾಜಕ್ಕೆ ನೀಡುತ್ತಿದ್ದವು. ಅಂದು ಜಾರಿಯಲ್ಲಿದ್ದ ಅಸಮಾನತೆ, ವರ್ಗ ಮತ್ತು ವರ್ಣಗಳ ಮೇಲಿನ ಸಾಮಾಜಿಕ ಶ್ರೇಣೀಕೃತ ಪದ್ಧತಿ, ಜಾತಿ ಮತ್ತು ದೇವರ ಹೆಸರಿನಲ್ಲಿ ನಡೆಯುತ್ತಿದ್ದ ಅನ್ಯಾಯಗಳನ್ನು ವಿರೋಧಿಸಿ ತಮ್ಮ ವಚನಗಳ ಮೂಲಕ ವಿರೋದಿಸಿದ್ದರು ಎಂದರು.ಕಾಯಕವೇ ಕೈಲಾಸ ವೆಂಬ ಶರಣರ ನುಡಿಗಳು ಅಂದಿನ ಸಮಾಜದಲ್ಲಿ ತಲ್ಲಣವನ್ನುಂಟು ಮಾಡಿದವು. ಯಾವುದೇ ವೃತ್ತಿ ಮೇಲೂ ಅಲ್ಲ ಕೀಳೂ ಅಲ್ಲ ಎಂದು ಸಾರಿದ ಶರಣರು ಕಾಯಕ ಸಮಾಜವನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿದರು. ಈ ಶರಣರ ಸುಧಾರಣೆ ಪ್ರಭುತ್ವದ ಅವಕೃಪೆಗೆ ಒಳಗಾದರೂ ಅವರು ಅಳುಕದೆ ಸತ್ಯ ಮತ್ತು ಪ್ರಾಮಾಣಿಕತೆಯ ಹಾದಿಯಲ್ಲಿ ನಡೆದು ಪರರಿಗೆ ಮಾದರಿಯಾದರು ಎಂದು ಅವರು ಅಭಿಪ್ರಾಯಪಟ್ಟರು.
ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮೋದೂರು ಮಹೇಶಾರಾಧ್ಯ ಮಾತನಾಡಿ, ನಾಡಿನ ಬಹುತೇಕ ಸಾಮಾಜಿಕ ಸಮಸ್ಯೆೆಗಳಿಗೆ ಶರಣರ ವಚನಗಳಲ್ಲಿ ಪರಿಹಾರಗಳಿವೆ. ಅಚ್ಚರಿಯ ಸಂಗತಿಯೆಂದರೆ ಭಾರತ ಸಂವಿಧಾನದಲ್ಲಿಯೂ ಶರಣರ ವಚನಗಳ ನೆರಳು ದಟ್ಟವಾಗಿದೆ. ಧರ್ಮ ಮತ್ತು ಜಾತಿಯ ಹೆಸರಲ್ಲಿ ಹರಿದು ಹಂಚಿಹೋಗಿದ್ದ ಭಾರತೀಯ ಸಮಾಜದಲ್ಲಿ ಶರಣರು ತಂದ ಸುಧಾರಣೆಗಳು ಕ್ರಾಂತಿಕಾರಕವಾಗಿದ್ದವು ಎಂದರು.ವಚನಕಾರರು ತಾವು ಕಂಡ ಸತ್ಯಗಳನ್ನು ವಚನಗಳ ಮೂಲಕ ಹೇಳಲು ಪ್ರಭುತ್ವಕ್ಕೂ ಅಂಜಲಿಲ್ಲ. ಅಂತಹ ಜಾತ್ಯತೀತ ಮೌಲ್ಯಗಳನ್ನು ನಾಡಿನಲ್ಲಿ ಬಿತ್ತುವುದರ ಮೂಲಕ ವೈಚಾರಿಕ ಕ್ರಾಂತಿಯ ಬೀಜಗಳನ್ನು ಬಿತ್ತಿದ ಶರಣರ ಕನಸನ್ನು ನನಸು ಮಾಡಬೇಕಿದೆ. ಹನ್ನೆರಡನೇ ಶತಮಾನದ ಶರಣರ ಕ್ರಾಂತಿಯು ಜಗತ್ತಿನ ಚರಿತ್ರೆಯಲ್ಲೇ ವಿಶಿಷ್ಟವಾದುದು. ಇದು ಮೇಲ್ನೋಟಕ್ಕೆ ಧಾರ್ಮಿಕ ತಳಪಾಯವನ್ನು ಹೊಂದಿರುವಂತೆ ಕಂಡರೂ ನಿಜಕ್ಕೂ ಅದು ಅಕ್ಷರ ಮತ್ರು ಸಾಮಾಜಿಕ ತರತಮಗಳ ವಿರುದ್ಧದ ಜನತಾ ಕ್ರಾಂತಿಯಾಗಿತ್ತು. ಅದರ ಪ್ರಭೆಯನ್ನು ಮುಂದಿನ ಜನಾಂಗಕ್ಕೆ ಕೊಂಡೊಯ್ಯುವ ಗುರುತರ ಹೊಣೆಗಾರಿಕೆ ವಿದ್ಯಾರ್ಥಿ ವಿದ್ಯಾರ್ಥಿನಿಯರ ಮೇಲಿದೆ ಎಂದರು.
ಗಾವಡಗೆರೆ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಚಂದ್ರು, ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಜನಾರ್ಧನ್ ಮಾತನಾಡಿದರು. ಪರಿಷತ್ ಕಾರ್ಯದರ್ಶಿ ರೇಣುಕಾಪ್ರಸಾದ್, ಖಜಾಂಚಿ ಕುಮಾರ್ ಹೊನ್ನೇನಹಳ್ಳಿ, ಉಪನ್ಯಾಸಕ ಜಯರಾಂ, ವಿದ್ಯಾ, ರಾಧಾ ಮತ್ತು ವಿದ್ಯಾರ್ಥಿಗಳು ಇದ್ದರು.