ಸಲಹೆ । ಪೊಲೀಸ್ ಸಿಬ್ಬಂದಿಗೆ ನಡೆದ ಡೆಂಘೀ ಜಾಗೃತಿ ಕಾರ್ಯಾಗಾರ
ಡೆಂಘೀ ನಿಯಂತ್ರಣಕ್ಕೆ ಸೂಕ್ತ ಮುಂಜಾಗ್ರತಾ ಕ್ರಮ ಅನುಸರಿಸಬೇಕು. ರೋಗ ನಿಯಂತ್ರಣಕ್ಕೆ ಸಹಕಾರ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಚಿದಂಬರ ಸಲಹೆ ನೀಡಿದರು.
ಡೆಂಘೀ ಜ್ವರವು ವೈರಾಣುವಿನಿಂದ ಉಂಟಾಗುವ ಒಂದು ರೋಗವಾಗಿದ್ದು, ಸೋಂಕಿತ ಈಡೀಸ್ ಸೊಳ್ಳೆ ಕಚ್ಚುವಿಕೆಯಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಇದು ಹಗಲು ಹೊತ್ತಿನಲ್ಲಿ ಕಚ್ಚುವ ಸೊಳ್ಳೆಯಾಗಿದೆ. ಸೊಳ್ಳೆಗಳಲ್ಲಿ ಮುಖ್ಯವಾಗಿ 3 ಜಾತಿಯ ಸೊಳ್ಳೆಗಳು ಮನುಷ್ಯನಿಗೆ ರೋಗವನ್ನು ತರುತ್ತವೆ. ಅನಾಫಿಲಿಸ್ ಹೆಣ್ಣು ಸೊಳ್ಳೆ ಮಲೇರಿಯಾ, ಈಡೀಸ್, ಡೆಂಘೀ ಮತ್ತು ಚಿಕೂನ್ ಗುನ್ಯಾ ಹಾಗೂ ಕ್ಯೂಲೆಕ್ಸ್ ಸೊಳ್ಳೆ ಫೈಲೇರಿಯಾ ಮತ್ತು ಮೆದುಳು ಜ್ವರವನ್ನು ಒಬ್ಬರಿದ್ದ ಮತ್ತೊಬ್ಬರಿಗೆ ಕಚ್ಚುವಿಕೆ ಮುಖಾಂತರ ಹರಡುತ್ತದೆ ಎಂದು ತಿಳಿಸಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ರಾಜೇಶ್ ಕುಮಾರ್ ಮಾತನಾಡಿ, ವಾರಕ್ಕೆ ಒಂದು ಬಾರಿ ಮನೆಗಳ ಸುತ್ತ ಸ್ವಚ್ಛತೆ ಮಾಡಿಕೊಳ್ಳಬೇಕು. ಟೆರೇಸ್‌ನಲ್ಲಿ ಶೇಖರಿಸಿರುವ ಹಳೆಯ ಟೈರು, ಒಡೆದ ಬಕೆಟ್, ಬಿಂದಿಗೆ, ರೆಫ್ರಿಜಿರೇಟರ್ ಹಿಂಭಾಗದಲ್ಲಿ ಶೇಖರಣೆಯಾಗಿರುವ ನೀರು, ಹೂ ಕುಂಡಗಳ ತಟ್ಟೆಗಳಲ್ಲಿ ನಿಂತಿರುವ ನೀರನ್ನು ವಾರಕೊಮ್ಮೆ ಹಾಗೂ ಮನೆಯಲ್ಲಿನ ಸಿಮೆಂಟ್ ತೊಟ್ಟಿಗಳಲ್ಲಿರುವ ನೀರನ್ನು ಖಾಲಿ ಮಾಡಿ ಒಣಗಿಸಿ ಬಳಿಕ ನೀರು ಶೇಖರಿಸಬೇಕು. ಸೊಳ್ಳೆ ಪರದೆ, ಕಿಟಕಿ ಬಾಗಿಲುಗಳಿಗೆ ಜಾಲರಿ ಅಳವಡಿಸಿಕೊಳ್ಳಬೇಕು. ಮೈ ತುಂಬಾ ಬಟ್ಟೆ ಧರಿಸುವಿಕೆ. ಸೊಳ್ಳೆ ನಿರೋಧಕ ಆಯಿಲ್‌ಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು. ಸಶಸ್ತ್ರ ಮೀಸಲು ಪಡೆಯ ಆರಕ್ಷಕ ನಿರೀಕ್ಷಕ ಎಸ್.ಬಿ.ರಂಗಸ್ವಾಮಿ ಮಾತನಾಡಿ, ಸೊಳ್ಳೆಗಳ ಕಚ್ಚುವಿಕೆಯಿಂದ ಪಾರಾಗಲು ವಸತಿ ಗೃಹವನ್ನು ಹಾಗೂ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಡೆಂಘೀ ನಿಯಂತ್ರಣ ಆರೋಗ್ಯ ಇಲಾಖೆಯ ಜವಾಬ್ದಾರಿ ಮಾತ್ರವಲ್ಲ, ನಮ್ಮೆಲ್ಲರ ಹೊಣೆಗಾರಿಕೆಯೂ ಆಗಿದೆ ಎಂದರು.