ಕಾಫಿ ನಾಡಲ್ಲಿ ತಗ್ಗಿದ ಮಳೆ : ಇಳಿಯದ ಹೊಳೆ

KannadaprabhaNewsNetwork |  
Published : Aug 01, 2024, 12:24 AM IST
ಮೂಡಿಗೆರೆ ತಾಲೂಕಿನ ಬಣಕಲ್ ನ ಮತ್ತಿಕಟ್ಟೆಯ ಶಿವ ಎಂಬುವವರಿಗೆ ಸೇರಿದ ಮನೆ ಮಳೆಯಿಂದಾಗಿ ಕುಸಿದಿರುವುದು. | Kannada Prabha

ಸಾರಾಂಶ

ಚಿಕ್ಕಮಗಳೂರು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಬುಧವಾರ ಮಳೆಯ ಅಬ್ಬರ ಸ್ವಲ್ಪ ಕಡಿಮೆಯಾಗಿತ್ತು. ಆದರೆ, ಮಳೆಯ ಹಾನಿ ಮಾತ್ರ ಮುಂದುವರಿದಿದೆ. ಮಲೆನಾಡು ತಾಲೂಕುಗಳಾದ ಮೂಡಿಗೆರೆ, ಶೃಂಗೇರಿ, ಕೊಪ್ಪ, ಕಳಸ, ಎನ್.ಆರ್. ಪುರ, ಚಿಕ್ಕಮಗಳೂರು ಭಾಗದಲ್ಲಿ ಮಳೆರಾಯ ತನ್ನ ಅಬ್ಬರವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿದ್ದಾನೆ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬಹುತೇಕ ಪ್ರದೇಶಗಳಲ್ಲಿ ಬಿಸಿಲಿನ ವಾತಾವರಣ ಇತ್ತು. ನಂತರದಲ್ಲಿ ಮೋಡ ಕವಿದ ವಾತಾವರಣ, ಆಗಾಗ ತುಂತುರು ಮಳೆ ಮುಂದುವರಿದಿತ್ತು.

ತೋಟಗಳು ಜಲಾವೃತ: ಕೆಲವೆಡೆ ಧರೆ ಕುಸಿತ । ಮನೆಗಳಿಗೆ ಹಾನಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಬುಧವಾರ ಮಳೆಯ ಅಬ್ಬರ ಸ್ವಲ್ಪ ಕಡಿಮೆಯಾಗಿತ್ತು. ಆದರೆ, ಮಳೆಯ ಹಾನಿ ಮಾತ್ರ ಮುಂದುವರಿದಿದೆ. ಮಲೆನಾಡು ತಾಲೂಕುಗಳಾದ ಮೂಡಿಗೆರೆ, ಶೃಂಗೇರಿ, ಕೊಪ್ಪ, ಕಳಸ, ಎನ್.ಆರ್. ಪುರ, ಚಿಕ್ಕಮಗಳೂರು ಭಾಗದಲ್ಲಿ ಮಳೆರಾಯ ತನ್ನ ಅಬ್ಬರವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿದ್ದಾನೆ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬಹುತೇಕ ಪ್ರದೇಶಗಳಲ್ಲಿ ಬಿಸಿಲಿನ ವಾತಾವರಣ ಇತ್ತು. ನಂತರದಲ್ಲಿ ಮೋಡ ಕವಿದ ವಾತಾವರಣ, ಆಗಾಗ ತುಂತುರು ಮಳೆ ಮುಂದುವರಿದಿತ್ತು.

ಕಳಸದಲ್ಲಿ ಭೂಮಿಯ ಒಳಗೆ ಜಲ ಸ್ಫೋಟಗೊಂಡ ಪರಿಣಾಮ ಗುಡ್ಡ ಕುಸಿದು ಬಂದು ರಸ್ತೆಗೆ ಜರುಗಿದೆ. ಕಳಸ ತಾಲೂಕಿನ ಬಲಿಗೆ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಬಲಿಗೆ - ಹೊರನಾಡು ನಡುವಿನ ಸಂಪರ್ಕ ಕಡಿತಗೊಂಡಿದೆ. ಕಳಸ ಜಾಂಬಳೆ ಕುದುರೆಮುಖ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಪರಿಣಾಮ ಭದ್ರಾ ನದಿಯಲ್ಲಿ ಪ್ರವಾಹದ ಸ್ಥಿತಿ ಮುಂದುವರಿದಿದೆ. ನೀರು ಪಾಲಾದ ಹಸು, ಎಮ್ಮೆಗಳ ಜತೆಗೆ ಕಾಡು ಪ್ರಾಣಿಗಳ ಮೃತ ದೇಹಗಳು ತೇಲಿ ಹೋಗುತ್ತಿವೆ. ಮಳೆ ಇಳಿಮುಖವಾಗಿದ್ದರಿಂದ ನೀರಿನ ಪ್ರಮಾಣ ಇಳಿಮುಖವಾಗುತ್ತಿದೆ. ಹಲವು ಅಡಕೆ ತೋಟಗಳಲ್ಲಿ ನಿಂತಿರುವ ನೀರು ಕಡಿಮೆಯಾಗುತ್ತಿದೆ.

ಭದ್ರಾ ಜಲಾಶಯದಲ್ಲಿ ಬುಧವಾರ ಬೆಳಿಗ್ಗೆ ದಾಖಲಾಗಿರುವ ಪ್ರಕಾರ 61,042 ಕ್ಯೂಸೆಕ್‌ ನೀರು ಒಳ ಹರಿವು ಇದ್ದು, ಜಲಾಶಯದಿಂದ 41,957 ಕ್ಯೂಸೆಕ್ ನೀರು ನದಿ ಹಾಗೂ ಎಡ ಮತ್ತು ಬಲ ನಾಲೆಗೆ ಬಿಡಲಾಗುತ್ತಿದೆ.

ತುಂಗಾ ನದಿ ನೀರಿನ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿಲ್ಲ, ಶೃಂಗೇರಿ ಪಟ್ಟಣದ ಕೆಲವೆಡೆ ಜಲಾವೃತವಾಗಿದ್ದ ಪ್ರದೇಶ ಗಳು ಸಂಚಾರಕ್ಕೆ ಮುಕ್ತವಾಗಿವೆ. ಆದರೆ, ಮಳೆ ಚುರುಕುಗೊಂಡರೆ ಮತ್ತೆ ಪ್ರವಾಹ ಸ್ಥಿತಿ ನಿರ್ಮಾಣವಾಗಲಿದೆ. ಮುಂದಿನ 24 ಗಂಟೆಗಳಲ್ಲಿ ತುಂಗಾ ಜಲಾಶಯಕ್ಕೆ ಹರಿಯುವ ಒಳ ಹರಿವು ಕಡಿಮೆಯಾಗುವ ಸಾಧ್ಯತೆ ಇದೆ.

ಮಳೆ ಮತ್ತು ಗಾಳಿಯ ಪ್ರಮಾಣ ಇಳಿಮುಖವಾಗಿದೆ. ಆದರೆ ಈ ಹಿಂದೆ ಬೀಸಿದ ಗಾಳಿಗೆ ಮರಗಳು ಮತ್ತು ವಿದ್ಯುತ್‌ ಕಂಬಗಳು ಬಿದ್ದು ಹಾನಿ ಸಂಭವಿಸಿದೆ. ಕಳೆದ ಎರಡು ದಿನಗಳಿಗೆ ಹೋಲಿಕೆ ಮಾಡಿದರೆ ನಷ್ಟದ ಪ್ರಮಾಣ ಕಡಿಮೆ ಯಾಗಿದೆ. ಚಿಕ್ಕಮಗಳೂರು ತಾಲೂಕಿನ ಶಿರವಾಸೆ ಭಾಗದಲ್ಲಿ ಸಣ್ಣ ಮಟ್ಟದಲ್ಲಿ ಧರೆಕುಸಿತ ಅಲ್ಲಲ್ಲಿ ಕಾಣಿಸಿ ಕೊಳ್ಳಲಾರಂಭಿಸಿದೆ. ಮೂಡಿಗೆರೆ ತಾಲೂಕಿನಲ್ಲೂ ಮಳೆ ಕಡಿಮೆಯಾಗಿದ್ದರಿಂದ ಹೇಮಾವತಿ ನದಿಯ ಮಟ್ಟ ಇಳಿದಿದೆ.

ಗುರುವಾರ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಧಾರಾಕಾರ ಮಳೆ ಸುರಿಯುವ ಸಾಧ್ಯತೆ ಇದೆ.

31 ಕೆಸಿಕೆಎಂ 5ಮೂಡಿಗೆರೆ ತಾಲೂಕಿನ ಬಣಕಲ್ ನ ಮತ್ತಿಕಟ್ಟೆ ಶಿವ ಎಂಬುವವರಿಗೆ ಸೇರಿದ ಮನೆ ಮಳೆಯಿಂದಾಗಿ ಕುಸಿದಿರುವುದು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ