ಕೊಪ್ಪಳ:
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಒಟ್ಟು 153 ಗ್ರಾಮ ಪಂಚಾಯಿತಿಗಳಿದ್ದು 722 ಗ್ರಾಮಗಳಿವೆ. ಈ ಗ್ರಾಮಗಳಲ್ಲಿ 430 ಗ್ರಾಮಗಳಿಗೆ ಡಿಬಿಒಟಿ, ಎಂವಿಎಸ್ ಯೋಜನೆ ಮುಖಾಂತರ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಗ್ರಾಮೀಣ ಮಟ್ಟದಲ್ಲಿ ಅತಿಯಾಗಿ ಕುಡಿಯುವ ನೀರಿನ ಸಮಸ್ಯೆಯಾದರೆ ಟ್ಯಾಂಕರ್ ಮೂಲಕ ಸರಬರಾಜು ಮಾಡಿಕೊಳ್ಳಲು ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಜಿಲ್ಲೆಯ ತಹಸೀಲ್ದಾರ್‌ರ ಪಿಡಿ ಖಾತೆಯಲ್ಲಿ ಸಹ ತುರ್ತು ಕುಡಿಯುವ ನೀರಿನ ಸರಬರಾಜು ಸಲುವಾಗಿ ಅನುದಾನ ಲಭ್ಯವಿಡಲಾಗಿದೆ ಎಂದು ಹೇಳಿದ್ದಾರೆ.
ನಗರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲವೆಂದು ಸ್ಥಳೀಯ ಸಂಸ್ಥೆಯ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಪಿಡಿ ಖಾತೆಯಲ್ಲಿ ₹ 20 ಕೋಟಿ ಅನುದಾನ ಲಭ್ಯವಿದ್ದು ಮುಂದಿನ 90 ದಿನಗಳಿಗೆ ತುಂಗಭದ್ರಾ ಜಲಾಶಯ, ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ, ತುಂಗಭದ್ರಾ ನದಿ, ಕೃಷ್ಣಾ ಜಲಾಶಯ ಹಾಗೂ ಕೃಷ್ಣಾ ನದಿ ಕಾಲುವೆ ಮೂಲಕ ಅವಶ್ಯಕತೆ ಇರುವ ನೀರಿನ ನಿರ್ವಹಣೆಗಾಗಿ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.ಮೇವಿನ ಕೊರತೆ ಇಲ್ಲ:
ಕುಡಿಯುವ ನೀರಿನ ಮತ್ತು ಮೇವಿನ ಸಮಸ್ಯೆ ಉದ್ಭವಿಸಿದರೆ ತಕ್ಷಣ ಸ್ಪಂದಿಸಲು ತಹಸೀಲ್ದಾರ್ ಹಾಗೂ ತಾಪಂ ಇಒಗೆ ನಿರ್ದೇಶನ ನೀಡಲಾಗಿದೆ. ಗ್ರಾಮಮಟ್ಟದ ಮತ್ತು ತಾಲೂಕು ಮಟ್ಟದ ಟಾಸ್ಕ್‌ಪೋರ್ಸ್‌ನಲ್ಲಿ ಸಮಿತಿ ರಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಪ್ರತಿ ಮಂಗಳವಾರ ಮತ್ತು ಬುಧವಾರ ಗ್ರಾಮಮಟ್ಟದ ಕಾರ್ಯಪಡೆ ಮತ್ತು ಪ್ರತಿ ಗುರುವಾರ ತಾಲೂಕು ಮಟ್ಟದ ಕಾರ್ಯಪಡೆ ಮತ್ತು ಜಿಲ್ಲಾಮಟ್ಟದಲ್ಲಿ ಪ್ರತಿ ಶುಕ್ರವಾರ (ಜೂಮ್ ವಿಸಿ ಮೂಲಕ) ಪಿಡಿಒ, ಗ್ರಾಮ ಆಡಳಿತಾಧಿಕಾರಿಗಳು, ಪಶು ಸಖಿ, ಕೃಷಿ ಸಖಿ ಮತ್ತು ತಾಲೂಕು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಾಪ್ತಾಹಿಕ ಸಭೆ ನಡೆಸಲಾಗುತ್ತಿದೆ. ಅದರ ನಡಾವಳಿಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಜಿಲ್ಲಾ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.