ಸಂಬಂಧಗಳ ಬೆಸೆಯುವ ಹಬ್ಬ ಯುಗಾದಿ: ಆಶುಕವಿ ಸಿದ್ದಪ್ಪ ಬಿದರಿ

KannadaprabhaNewsNetwork | Published : Apr 6, 2025 1:46 AM

ಸಾರಾಂಶ

ವರ್ಷವಿಡೀ ಬದುಕಿನಲ್ಲಿ ಬರುವ ಎಲ್ಲ ಸಿಹಿ-ಕಹಿ ಘಟನೆಗಳನ್ನು ಸಮನಾಗಿ ನಿಭಾಯಿಸಬೇಕು. ಯುಗಾದಿಯು ಸಂಬಂಧಗಳನ್ನು ಬೆಸೆಯುವ ಹಬ್ಬವಾಗಿದೆ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆಶುಕವಿ ಸಿದ್ದಪ್ಪ ಬಿದರಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ವರ್ಷವಿಡೀ ಬದುಕಿನಲ್ಲಿ ಬರುವ ಎಲ್ಲ ಸಿಹಿ-ಕಹಿ ಘಟನೆಗಳನ್ನು ಸಮನಾಗಿ ನಿಭಾಯಿಸಬೇಕು. ಯುಗಾದಿಯು ಸಂಬಂಧಗಳನ್ನು ಬೆಸೆಯುವ ಹಬ್ಬವಾಗಿದೆ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆಶುಕವಿ ಸಿದ್ದಪ್ಪ ಬಿದರಿ ಹೇಳಿದರು.

ಯುಗಾದಿ ಹಬ್ಬದ ನಿಮಿತ್ತ ನಗರದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಎರಡು ದಿನಗಳ ಕಾಲ ನಡೆದ ವಸಂತೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು,

ಕ್ಯಾಲೆಂಡರ್ ಪ್ರಕಾರ ಹೊಸ ವರ್ಷ ಆಚರಿಸುವರು ಬಣ್ಣದ ಕನಸು ಕಟ್ಟಿದವರು. ಯುಗಾದಿಯಂದು ಸಂಭ್ರಮಿಸುವರು ಹಿರಿಯರು. ಹೊಲದಲ್ಲಿನ ಸುಗ್ಗಿ ಮಾಡಿ ರಾಶಿ ಮಾಡುವುದರೊಳಗೆ ಯುಗಾದಿ. ವಸಂತ ಋತುವಿನ ಸೊಗಸನ್ನು ಹಾಗೂ ಹೊಸ ಎಲೆಗಳು ಚಿಗುರುಗಳ ಸಂತಸವನ್ನು ಯುಗಾದಿ ಮೂಲಕ ಸಂಭ್ರಮಿಸುತ್ತೇವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಆರ್. ಮುಗನೂರಮಠ ಮಾತನಾಡಿ, ಭಾವನೆಗಳಿಗೆ ಬೆಲೆ ಕೊಡುವವರು ನಮ್ಮ ಕನ್ನಡಿಗರು. ಕವಿಗಳಿಗೆ ಕವಿತ್ವವೇ ಕಣ್ಣಿದ್ದಂತೆ. ಜನಪದ ಕವಿಗಳು ಆಶುಕವಿಗಳು. ಸಮಚಿತ್ತದಿಂದ ಜನರು ಜೀವಿಸಲು ಕಾರಣಿಕರ್ತರು ಜನಪದರು. ಸುಗ್ಗಿ ಸಂಭ್ರಮದಿಂದ ಹೊಸತನಕ್ಕೆ ಕಾಲಿಡುವ, ಪ್ರಕೃತಿ ಹೊಸ ಚಿಗುರು, ಕೋಗಿಲೆ ಹಾಡುವ ಕಾಲ ಯುಗಾದಿ. ವಿದ್ಯಾರ್ಥಿಗಳು ಮನಸ್ಸನ್ನು ಯೌವ್ವನದಂತೆ ಕೊಳ್ಳುವುದು ಅಗತ್ಯ ಎಂದು ಹೇಳಿದರು.

ಸಾಂಸ್ಕೃತಿಕ ಚಟುವಟಿಕೆ ಸಂಯೋಜಕ ಡಾ. ಕೆ.ವಿ. ಮಠ, ಐಕ್ಯೂಎಸಿ ಸಂಯೋಜಕ ಡಾ. ಎ.ಯು. ರಾಠೋಡ್, ಮಹಿಳಾ ಸಬಲೀಕರಣದ ಸಂಯೋಜಕ ಡಾ. ಎಲ್.ಎಸ್. ಚವಡಿ, ವಿದ್ಯಾರ್ಥಿಗಳ ಕಲ್ಯಾಣಾಧಿಕಾರಿ ಸುರೇಶ. ಆರ್ , ವಿದ್ಯಾರ್ಥಿ ಪ್ರತಿನಿಧಿಗಳಾದ ವಾರೇಶ್. ಯಂಕಂಚಿ, ಪಾರ್ವತಿ. ಹಿರೇಮಠ ಹಾಗೂ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಭುವನೇಶ್ವರಿ ಭಾವಚಿತ್ರ ಮೆರವಣಿಗೆ: ವಸಂತೋತ್ಸವ ಕಾರ್ಯಕ್ರಮಕ್ಕೆ ಮದುವನಗಿತ್ತಿಯಂತೆ ಶೃಂಗಾರಗೊಂಡ ಬಸವೇಶ್ವರ ಕಲಾ ಮಹಾವಿದ್ಯಾಲಯದ ಮುಂದೆ ಬ್ಯಾನರ್ ಬಿಡುವುದರ ಮೂಲಕ ಚಾಲನೆ ನೀಡಲಾಯಿತು. ಬಳಿಕ ಭುವನೇಶ್ವರಿ ದೇವಿ ಮತ್ತು ಬಿಳೂರು ಗುರುಬಸವ ಭಾವಚಿತ್ರದ ಮೆರವಣಿಗೆ ಮಾಡಲಾಯಿತು. ಕಲಾ ಮಹಾವಿದ್ಯಾಲಯದಿಂದ ಪ್ರಾರಂಭವಾದ ಮೆರವಣಿಗೆ ವಿಜ್ಞಾನ, ಆಯುರ್ವೇದ, ಕಾಮರ್ಸ ಮಹಾವಿದ್ಯಾಲಯದ ಮಾರ್ಗವಾಗಿ ಸಾಗಿ ಕಲಾ ಮಹಾವಿದ್ಯಾಲಯಕ್ಕೆ ಪೂರ್ಣಗೊಂಡಿತು. ದೇಸಿ ತೊಡುಗೆಯಲ್ಲಿ ಬಂದ ವಿದ್ಯಾರ್ಥಿಗಲು ಹಾಗೂ ಪ್ರಾಧ್ಯಾಪಕರು ಮೆರವಣಿಗೆಯಲ್ಲಿ ದೇಶಭಕ್ತಿ ಗೀತೆ, ಸಿನೆಮಾ ಮತ್ತು ಜಾನಪದ ಗೀತೆಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ರ್‍ಯಾಂಪ್‌ ವಾಕ್‌ ರಂಗು, ನೃತ್ಯ ಗುಂಗು:

ವಿದ್ಯಾರ್ಥಿ ವಿದ್ಯಾರ್ಥಿನಿಯರ ಜೋಡಿ ರ್‍ಯಾಂಪ್ ವಾಕ್ ಕಾರ್ಯಕ್ರಮಕ್ಕೆ ಮೆರಗು ತಂದಿತು.8 ಜೋಡಿಗಳು ವೇದಿಕೆಯ ಮೇಲೆ ಹೆಜ್ಜೆ ಹಾಕಿ ಉತ್ತರ ಕರ್ನಾಟಕ, ಕೊಡುಗು ಉಡುಗೆ ಸೇರಿದಂತೆ ಕೇರಳ, ಗುಜರಾತ, ಜಮ್ಮು- ಕಾಶ್ಮೀರ ರಾಜ್ಯಗಳ ಸಂಸ್ಕೃತಿ, ಬಂಜಾರಾ ಸಂಸ್ಕೃತಿ ಉಡುಪುಗಳು ಕಣ್ಣಿಗೆ ಕಟ್ಟುವಂತೆ ಮಾಡಿದವು. ಬಳಿಕ ಜರುಗಿದ ವಿದ್ಯಾರ್ಥಿಗಳ ನೃತ್ಯ ನೋಡುಗರ ಹುಬ್ಬೇರುವಂತೆ ಮಾಡಿತು. ಜಾನಪದ, ಕೋಲಾಟ, ಏಕಾಭಿನಯ ಪಾತ್ರ, ನಾಟಕಗಳು ಸೇರಿದಂತೆ ಹಲವಾರು ನೃತ್ಯಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಮರುಕಳಿಸಿದ ಯುಗಾದಿ ವೈಭವ:

ಒಂದು ಕಡೆ ಮಿನುಗುವ ಸೀರೆ, ಲಂಗಾ ದಾವಣಿಯಲ್ಲಿ ಮಿಂಚುತ್ತಿರುವ ನಾರಿಯರು, ಮತ್ತೊಂದೆಡೆ ಪಂಚೆ, ಶರ್ಟ್‌ ತೊಟ್ಟು ಮೀಸೆ ತಿರುವುತ್ತಿರುವ ಗಂಡು ಹೈಕ್ಳು, ಹೂವು, ಮಾವಿನ ಎಲೆಯಲ್ಲಿ ಶೃಂಗಾರಗೊಂಡ ಕಟ್ಟಡ, ಬಿಸಿಲಿನ ಧಗೆ ಲೆಕ್ಕಿಸದೇ ಹಾಡುಗಳಿಗೆ ಹೆಜ್ಜೆ ಹಾಕುತ್ತಿರುವ ಸ್ನೇಹಿತರ ಗುಂಪು...

ಯುಗಾದಿ ಸೊಬಗು ಮತ್ತೊಮ್ಮೆ ಮರುಕಳಿಸಿದಂತಹ ವಾತಾವರಣ ಸೃಷ್ಟಿಯಾಗಿದ್ದು ನಗರದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ. ಯುಗಾದಿ ನಿಮತ್ತ

ಕಲಾ ಮಹಾವಿದ್ಯಾಲಯವನ್ನು ಮದುವನಗಿತ್ತಿಯಂತೆ ಶೃಂಗರಿಸಿ ವಿದ್ಯಾರ್ಥಿಗಳು ದೇಸಿ ಉಡುಗೆ ತೊಡುಗೆ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡು ಸಂಭ್ರಮಿಸಿದರು.

Share this article