ಬಗರ್ ಹುಕುಂ ಸಮಿತಿ ಸಭೆಯಲ್ಲಿ ಕಂದಾಯ ಅಧಿಕಾರಿಗಳಿಗೆ ಶಾಸಕ ಬಿ.ಜಿ.ಗೋವಿಂದಪ್ಪ
ಡಿಸಿ, ಎಸಿ ಕೋರ್ಟ್‌ಗೆ ಹಾಕಿರುವ ಆಫೀಲು ಹಾಗೂ ಡೀಮ್ಡ್ ಅರಣ್ಯಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಮೊದಲು ಇತ್ಯರ್ಥಪಡಿಸಿ ಜನರನ್ನು ಅಲೆದಾಡಿಸಬೇಡಿ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಕಂದಾಯ ಅಧಿಕಾರಿಗಳಿಗೆ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಬಗರ್ ಹುಕುಂ ಸಮಿತಿಯ ಮೊದಲ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ 10 ವರ್ಷಗಳ ಹಿಂದೆ ಬಗರ್ ಹುಕುಂ ಸಮಿತಿ ಮುಂದೆ ಬಂದಿದ್ದ 138 ಅರ್ಜಿಗಳು ನಾನಾ ಕಾರಣಗಳಿಗಾಗಿ ವಜಾ ಗೊಂಡಿದ್ದು, ಪಲಾನುಭವಿಗಳು ಡಿಸಿ ಹಾಗೂ ಎಸಿ ಕೋರ್ಟ್‌ಗೆ ಆಪೀಲು ಹಾಕಿದ್ದರು. ಅವುಗಳು ಮರು ಪರಿಶೀಲನೆಗೆ ಬಂದಿವೆ. ಈ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ, ವಾಸ್ತವ ವರದಿ ನೀಡಬೇಕು. ಇಲ್ಲದ ದಾಖಲೆಗಳನ್ನು ಸೃಷ್ಟಿಸಿ ಎಂದು ನಾನು ಯಾರ ಮೇಲೂ ಒತ್ತಡ ಹಾಕಲ್ಲ. ನ್ಯಾಯಯುತವಾಗಿ ನಿಗದಿತ ಸಮಯದೊಳಗೆ ಕೆಲಸ ಪೂರ್ಣಗೊಳಿಸಿ ಎಂದರು.ಡೀಮ್ಡ್ ಫಾರೆಸ್ಟ್ ನಲ್ಲಿ ನೂರಾರು ವರ್ಷಗಳಿಂದ ಸಾಗುವಳಿ ಮಾಡಿರುವ ಬಡವರು ಸಾಗುವಳಿ ಚೀಟಿಗಾಗಿ ಅರ್ಜಿ ಸಲ್ಲಿಸಿ, ಸುಮಾರು 20 ವರ್ಷಗಳಾಗಿವೆ. ಜನರನ್ನು ಅಲೆದಾಡಿಸಬೇಡಿ. ಸ್ಥಳ ಪರಿಶೀಲನೆಗೆ ಹೋಗಬೇಕಾದರೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಜಂಟಿ ಸರ್ವೇ ಮಾಡಿಸಿ. ಗ್ರಾಮ ಲೆಕ್ಕಾಧಿಕಾರಿಗಳು ರಿಸ್ಕ್ ತೆಗೆದುಕೊಂಡು ಕೆಲಸ ಮಾಡಿ. ಮನೆಯಲ್ಲಿಯೇ ಕುಳಿತು ವರದಿ ಮಾಡಬೇಡಿ. ಮುಂದೆ ತೊಂದರೆ ಆದರೆ ನಾನು ಹೊಣೆಯಲ್ಲ ಎಂದು ಗ್ರಾಮ ಲೆಕ್ಕಾಧಿಕಾರಿಗಳನ್ನು ಎಚ್ಚರಿಸಿದರು.
ಜಾನಕಲ್ ಬಳಿ ಹಸಿರು ಕಲ್ಲು ಇದೆ ಎಂಬ ಮಾಹಿತಿಯಿದೆ. ಈ ಬಗ್ಗೆ ವಿಎಗಳು ನಿಗಾ ವಹಿಸಿ, ಅಕ್ರಮವಾಗಿ ಕಲ್ಲು ತೆಗೆಯಲು ಅವಕಾಶ ನೀಡಬೇಡಿ. ಗಣಿ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಕಾನೂನಾತ್ಮಕವಾಗಿ ಯಾರೂ ಬೇಕಾದರೂ ಲೀಸ್ ಪಡೆದು ಮಾಡಿಕೊಳ್ಳಲಿ ಎಂದರು.
ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ, ಮಹೇಶ್ವರಪ್ಪ, ಮಣ್ಣಮ್ಮ, ತಹಶೀಲ್ದಾರ್ ತಿರುಪತಿ ಪಾಟೀಲ್, ವಲಯ ಅರಣ್ಯಧಿಕಾರಿ ಸುನಿಲ್ ಕುಮಾರ್ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.---------
- ಬಿ.ಜಿ.ಗೋವಿಂದಪ್ಪ, ಶಾಸಕರು.---------
- ತಿರುಪತಿ ಪಾಟೀಲ್, ತಹಸೀಲ್ದಾರ್ ಹೊಸದುರ್ಗ