ಮುಂಡರಗಿ: ನಮ್ಮ ಇಲಾಖೆಯಿಂದ ನೋಂದಾಯಿತ ಸಾಂಸ್ಕೃತಿಕ ಕಲಾಸಂಘಗಳಿಗೆ ಆದ್ಯತೆ ಮೇರೆಗೆ ಪ್ರಾಯೋಜಕತ್ವ ಕಾರ್ಯಕ್ರಮ ನೀಡಲಾಗುತ್ತಿದೆ. ಸಾಂಸ್ಕೃತಿಕ ಪರಂಪರೆ ಉಳಿಸಿ ಬೆಳೆಸಲು ಶ್ರಮಿಸುತ್ತಿರುವ ಕಲಾವಿದರೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸದಾಕಾಲ ಇರುತ್ತದೆ ಎಂದು ಗದಗ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ವೀರಯ್ಯಸ್ವಾಮಿ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುದಾನ ನೀಡಲಾಗುತ್ತಿದೆ. ಕಲಾವಿದರು ಇದರ ಸದುಪಯೋಗ ಪಡೆಯಬೇಕು. ಮಾಶಾಸನ ಪಡೆಯುತ್ತಿರುವ ಕಲಾವಿದರು ತಮ್ಮ ಜೀವಿತ ಪ್ರಮಾಣ ಪತ್ರ ಕಡ್ಡಾಯವಾಗಿ ಇಲಾಖೆಗೆ ನೀಡಬೇಕು ಎಂದರು.
ಜಿಪಂ ಮಾಜಿ ಉಪಾಧ್ಯಕ್ಷೆ ಶೋಭಾ ಮೇಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ನಾಡು ಪ್ರಾಚೀನ ಕಲೆಗಳ ಬೀಡು. ಹಂತಿ ಪದ, ಲಾವಣಿ ಪದ, ಸೋಬಾನ ಪದ, ಬಿಸೋ ಪದ, ಕುಟ್ಟುವ ಪದ ಸೇರಿದಂತೆ ಮೊದಲಾದ ಕಲೆ ಉಳಿಸ ಬೆಳೆಸಬೇಕಾಗಿದೆ. ಇಂತಹ ಜಾನಪದ ಕಲಾವಿದರು ಮುಂದಿನ ಪೀಳಿಗೆಗೆ ಈ ಕಲೆಗಳನ್ನು ಧಾರೆ ಎರೆಯಬೇಕು ಎಂದರು.ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಅನೇಕ ಸಂಗೀತ, ಸುಗಮ ಸಂಗೀತ, ನೃತ್ಯ, ಗಾಯನ, ನಾಟಕ, ಕೋಲಾಟ, ವಚನ ಗೀತೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಅಧ್ಯಕ್ಷ ಶಿವು ವಾಲಿಕಾರ, ಹನುಮಂತ ವಾಲಿಕಾರ, ದೇವು ಹಡಪದ, ಮಹಾಂತೇಶ ವಾಲಿಕಾರ, ಸುರೇಶ ಹಡಪದ, ಪ್ರಭಾವತಿ ಬೆಳವಣಕಿಮಠ, ದಾನಪ್ಪ ಹಡಪದ, ಲಲಿತಮ್ಮ ಹೊಸಮನಿ, ಗಂಗಾಧರ ಬಳಗೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮಂಜುನಾಥ ಮುಧೋಳ ನಿರೂಪಿಸಿದರು.