ನಾಟಿ ಹಸುಗಳ ಸಾಕಾಣಿಕೆಗೆ ಯುವಕರ ಆದ್ಯತೆ ಉತ್ತಮ ಬೆಳವಣಿಗೆ: ಶಾಸಕ

KannadaprabhaNewsNetwork |  
Published : Jun 03, 2024, 12:30 AM IST
2ಕೆಎಂಎನ್ ಡಿ21 | Kannada Prabha

ಸಾರಾಂಶ

ರೈತರು ಕೃಷಿ ಜೊತೆಗೆ ಕುಟುಂಬದ ನಿರ್ವಹಣೆಯ ದೃಷ್ಟಿಯಿಂದ ರಾಸುಗಳು ಮುಖ್ಯ. ಗ್ರಾಮೀಣ ಕ್ರೀಡೆಗಳಾದ ಕೆಸರುಗದ್ದೆ ಓಟ, ಎತ್ತಿನ ಗಾಡಿ, ಚಕ್ಕಡಿ ಗಾಡಿ ಓಟದ ಸ್ಪರ್ಧೆ ಮನರಂಜನೆಗೆ ಅನುಕೂಲವಾಗಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಕೃಷಿಯಲ್ಲಿ ಆಧುನಿಕ ಉಪಕರಣಗಳನ್ನು ಹೆಚ್ಚು ಬಳಸುತ್ತಿರುವ ನಡುವೆಯೂ ನಾಟಿ ಹಸುಗಳ ಸಾಕಾಣಿಕೆಗೆ ಯುವಕರು ಆದ್ಯತೆ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ತಾಲೂಕಿನ ಹೊಂಬೇಗೌಡನದೊಡ್ಡಿ ಬಳಿ ಟಿ.ಕಾಗೇಪುರ ಗ್ರಾಮದ ಪಿ.ಎಂ.ನರೇಂದ್ರಸ್ವಾಮಿ ಅಭಿಮಾನಿಗಳ ಬಳಗ ಆಯೋಜಿಸಿದ್ದ ಜೋಡಿ ಕರುಗಳ ಚಕ್ಕಡಿ ಗಾಡಿ ಓಟದ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಭಾಗದಲ್ಲಿ ಇಂತಹ ಕ್ರೀಡೆಗಳು ನಡೆಯುವುದು ಅಪರೂಪ. ಒಳ್ಳೆಯ ಮನರಂಜನೆ ಜೊತೆಗೆ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹಿಸಲು ಈ ಸ್ಪರ್ಧೆ ಸಹಕಾರಿಯಾಗಿದೆ ಎಂದರು. ಕೃಷಿ ಕ್ಷೇತ್ರದ ಅಭಿವೃದ್ಧಿಗೆ ರಾಸುಗಳ ಪಾತ್ರ ಪ್ರಮುಖ. ರೈತರು ಕೃಷಿ ಜೊತೆಗೆ ಮನರಂಜನೆಗೂ ಜಾನುವಾರುಗಳನ್ನು ಬಳಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಉತ್ತಮ ಮಳೆಯಾಗುತ್ತಿದೆ. ಎಲ್ಲರೂ ವ್ಯವಸಾಯಕ್ಕೂ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.

ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ನಿರ್ದೇಶಕ ಬಿ.ಪುಟ್ಟಬಸವಯ್ಯ ಮಾತನಾಡಿ, ರೈತರು ಕೃಷಿ ಜೊತೆಗೆ ಕುಟುಂಬದ ನಿರ್ವಹಣೆಯ ದೃಷ್ಟಿಯಿಂದ ರಾಸುಗಳು ಮುಖ್ಯ. ಗ್ರಾಮೀಣ ಕ್ರೀಡೆಗಳಾದ ಕೆಸರುಗದ್ದೆ ಓಟ, ಎತ್ತಿನ ಗಾಡಿ, ಚಕ್ಕಡಿ ಗಾಡಿ ಓಟದ ಸ್ಪರ್ಧೆ ಮನರಂಜನೆಗೆ ಅನುಕೂಲವಾಗಿದೆ ಎಂದು ಹೇಳಿದರು.

ಚಕ್ಕಡಿಗಾಡಿ ಸ್ಪರ್ಧೆಯು ಗ್ರಾಮೀಣ ಭಾಗದ ಕ್ರೀಡಾಸಕ್ತರ ಗಮನ ಸೆಳೆಯಿತು. ಕ್ರೀಡಾಕೂಟದಲ್ಲಿ ಮಂಡ್ಯ, ಹಾಸನ, ಮೈಸೂರು, ಚಿಕ್ಕಮಗಳೂರು, ತುಮಕೂರು, ರಾಮನಗರ ಸೇರಿ ವಿವಿಧ ಜಿಲ್ಲೆಗಳ 105ಕ್ಕೂ ಜೋಡಿಗಳ ಚಕ್ಕಡಿಗಾಡಿಗಳು ಭಾಗಿಯಾಗಿದ್ದವು.

ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷ ಡಿ.ಬಿ.ಬಸವರಾಜು, ಸದಸ್ಯ ಪ್ರಭುಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ಟಿಎಪಿಸಿಎಂಎಸ್ ನಿರ್ದೇಶಕ ಟಿ.ಸಿ.ಚೌಡಯ್ಯ, ಮುಖಂಡರಾದ ಆರ್.ಎನ್.ವಿಶ್ವಾಸ್, ಕೆ.ಸಿ.ಚೌಡೇಗೌಡ, ದಿಲೀಪ್ ಕುಮಾರ್(ವಿಶ್ವ), ಶ್ರೀನಿವಾಸ್ ಪ್ರಸಾದ್, ಆನಂದ್, ಮುತ್ತುರಾಜ್ ಹಾಗೂ ಮುಖಂಡರು ಇದ್ದರು.

ವಿಜೇತರಿಗೆ ಬಹುಮಾನ ವಿತರಣೆ:

ಸ್ಪರ್ಧೆಯಲ್ಲಿ ಮೈಸೂರಿನ ಸಿದ್ದಲಿಂಗಪುರ ಪ್ರಥಮ ಸ್ಥಾನದೊಂದಿಗೆ 1 ಲಕ್ಷ ರು. ನಗದು, ಟಿ.ಕಾಗೇಪುರ 75 ಸಾವಿರ ರು. ಪಡೆದು ದ್ವಿತೀಯ, ದುಗ್ಗನಹಳ್ಳಿ 50 ಸಾವಿರದೊಂದಿಗೆ ತೃತೀಯ ಹಾಗೂ ಶ್ರೀರಂಗಪಟ್ಟಣದ ದಾಸನಪುರ 25 ಸಾವಿರ ಪಡೆದು ನಾಲ್ಕನೇ ಸ್ಥಾನ ಪಡೆದುಕೊಂಡವು. ಎಲ್ಲ ತಂಡಗಳಿಗೂ ಟ್ರೋಫಿ ನೀಡಲಾಯಿತು.

PREV

Recommended Stories

ಕಾಂಗ್ರೆಸ್ ಸರ್ಕಾರದಿಂದ ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು: ಶಾಸಕ ರಮೇಶ್‌ ಬಂಡಿಸಿದ್ದೇಗೌಡ
ಸರ್ಕಾರಿ ಶಾಲೆ ಉನ್ನತಿಗೆ ಎಲ್ಲರ ಸಹಕಾರ ಅಗತ್ಯ