ಗರ್ಭಿಣಿ, ಬಾಣಂತಿಯರಿಗೆ ಇನ್ಮುಂದೆ ವಾರಕ್ಕೆ ಆರು ಮೊಟ್ಟೆ

KannadaprabhaNewsNetwork |  
Published : Apr 02, 2026, 01:15 AM IST
ಸಸ | Kannada Prabha

ಸಾರಾಂಶ

ಚಿಕ್ಕಮಗಳೂರುಜಿಲ್ಲೆಯ ಗರ್ಭಿಣಿ ಮತ್ತು ಬಾಣಂತಿಯರಿಗೆ ಇನ್ಮುಂದೆ ವಾರಕ್ಕೆ ಆರು ಮೊಟ್ಟೆಯಂತೆ ತಿಂಗಳಿಗೆ 25 ಮೊಟ್ಟೆ ವಿತರಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಚಿಕ್ಕಮಗಳೂರಿನ ಜಿಪಂನಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಜಿಲ್ಲೆಯ ಗರ್ಭಿಣಿ ಮತ್ತು ಬಾಣಂತಿಯರಿಗೆ ಇನ್ಮುಂದೆ ವಾರಕ್ಕೆ ಆರು ಮೊಟ್ಟೆಯಂತೆ ತಿಂಗಳಿಗೆ 25 ಮೊಟ್ಟೆ ವಿತರಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಚಿಕ್ಕಮಗಳೂರಿನ ಜಿಪಂನಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಸೂಚನೆ ನೀಡಿದ್ದಾರೆ.

ವಿಧಾನ ಪರಿಷತ್‌ ಸದಸ್ಯ ಡಾ.ಧನಂಜಯ ಸರ್ಜಿ ಜಿಲ್ಲೆಯ ಗರ್ಭಿಣಿ ಮತ್ತು ಬಾಣಂತಿಯರಿಗೆ ಎಷ್ಟು ದಿನಗಳಿಗೆ ಅಂಗನ ವಾಡಿ ಮೂಲಕ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಸಂತೋಷ್‌ ನಾಯ್ಕ್‌, 15 ಮತ್ತು 10 ರಂತೆ ತಿಂಗಳಿಗೆ ಎರಡು ಬಾರಿ ಒಟ್ಟು 25 ಮೊಟ್ಟೆ ವಿತರಿಸಲಾಗುವುದು ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ಧನಂಜಯ ಸರ್ಜಿ, ಇಲಾಖೆಯಿಂದ ಮೊಟ್ಟೆ ವಿತರಣೆಗೆ ಎಲ್ಲ ಗರ್ಭಿಣಿ ಹಾಗೂ ಬಾಣಂತಿಯರ ಮನೆ ಯಲ್ಲೂ ಪ್ರೀಡ್ಜ್‌ ಇದೆಯಾ?, ಒಂದು ಮೊಟ್ಟೆಯನ್ನು ಸಾಮಾನ್ಯ ವಾತಾವರಣದಲ್ಲಿ 2-3 ದಿನ ಮಾತ್ರ ಸಂಗ್ರಹಿಸಬಹುದು. ಇಲ್ಲ ವಾದರೆ ಕೆಟ್ಟು ಹೋಗಲಿದೆ. ಇಲಾಖೆಯಿಂದ ನೀಡುವ ಮೊಟ್ಟೆಯಲ್ಲಿ ಇಲ್ಲವೇ ದಿನ ಸಂಗ್ರಹಿಸಿಟ್ಟು ಗರ್ಭಿಣಿ, ಬಾಣಂತಿ ಯರು ಸೇವಿಸಿದರೆ ಏನು ಗತಿ ಎಂದು ಆತಂಕ ವ್ಯಕ್ತಪಡಿಸಿದರು. ಆಗ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌, ವಾರಕ್ಕೆ ಒಂದು ಬಾರಿ ಮೊಟ್ಟೆ ವಿತರಣೆ ಮಾಡುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ 5,156 ಗರ್ಭಿಣಿಯರು ಹಾಗೂ 5,690 ಬಾಣಂತಿಯರಿಗೆ ವಾರಕ್ಕೆ ಒಂದು ಬಾರಿ ತಲಾ ಆರು ಮೊಟ್ಟೆ ಹಾಗೂ ತಿಂಗಳಲ್ಲಿ ಒಂದು ವಾರ 7 ಮೊಟ್ಟೆಯಂತೆ ವಿತರಣೆಗೆ ಕ್ರಮ ವಹಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಸಂತೋಷ್‌ ನಾಯ್ಕ್‌ ವಿವರಿಸಿದರು.

ಮಾನವ ಪ್ರಾಣಿ ಸಂಘರ್ಷ ತಡೆಗೆ ಆಕ್ರೋಶ

ಸಭೆಯಲ್ಲಿ ಪಕ್ಷಾತೀತವಾಗಿ ಎಲ್ಲ ಸದಸ್ಯರು ಕಾಡಾನೆ, ಕಾಡುಕೋಣ, ಕರಡಿ ದಾಳಿ ಮತ್ತು ಓಡಾಟಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳ ಕ್ರಮ ಏನು ಎಂದು ಆಗ್ರಹಿಸಿದಾಗ ಚಿಕ್ಕಮಗಳೂರು ಶಾಸಕ ಎಚ್‌.ಡಿ.ತಮ್ಮಯ್ಯ, ಜಿಲ್ಲೆಯಲ್ಲಿ ಮಾತ್ರ ಪಶ್ಚಿಮ ಘಟ್ಟ ಪ್ರದೇಶ ಇಲ್ಲ, ಬೇರೆ ಬೇರೆ ರಾಜ್ಯಕ್ಕೂ ವ್ಯಾಪಿಸಿದೆ. ಆ ರಾಜ್ಯದಲ್ಲಿ ಏನು ಕ್ರಮ ಕೈಗೊಳ್ಳಲಾಗಿದೆ. ಹೇಗೆ ನಿಯಂತ್ರಣ ಮಾಡಲಾಗುತ್ತಿದೆ ಎಂಬುದರ ಬಗ್ಗೆ ಅಧ್ಯಯನ ನಡೆಸಿ ಎಂದು ಸಲಹೆ ನೀಡಿದರು.

ಜತೆಗೆ, ಇತ್ತೀಚಿಗೆ ಚಿಕ್ಕಮಗಳೂರು ನಗರದ ಒಳಗೆ ಕರಡಿ ಓಡಾಟ ಹಾಗೂ ನಗರದ ಹೊರ ವಲಯದಲ್ಲಿ ಹುಲಿ ಕಾಣಿಸಿ ಕೊಂಡಿರುವುದಕ್ಕೆ ಸಂಬಂಧಿಸಿದಂತೆ ಆತಂಕ ವ್ಯಕ್ತಪಡಿಸಿದರು.

ಯಾರಾದರೂ ಸತ್ತ ಮೇಲೆ ಕಾಡಾನೆ ಸೆರೆ ಹಿಡಿಯುತ್ತೀರಾ?ಕಳೆದ ಒಂದು ವಾರದಲ್ಲಿ ಮೂರು ಮಂದಿ ಮೇಲೆ ಕಾಡಾನೆ ದಾಳಿ ಆಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಏನು ಕ್ರಮ ಕೈ ಗೊಂಡಿದೀರಿ? ಕಾಡಾನೆ ಸೆರೆಗೂ ಸಾವು ಅಥವಾ ಬೀದಿಯಲ್ಲಿ ಪ್ರತಿಭಟನೆ ಆಗಬೇಕಾ ಎಂದು ಶೃಂಗೇರಿ ಶಾಸಕ ರಾಜೇಗೌಡ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು. ಸಭೆಯಲ್ಲಿ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಶಾಸಕರಾದ ಟಿ.ಡಿ.ರಾಜೇಗೌಡ, ಎಚ್.ಡಿ.ತಮ್ಮಯ್ಯ, ಆನಂದ್‌, ವಿಧಾನಪರಿಷತ್‌ ಸದಸ್ಯರಾದ ಸಿ.ಟಿ.ರವಿ. ಧನಂಜಯ ಸರ್ಜಿ, ಭೋಜೇ ಗೌಡ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಡಿಸಿ ಎನ್.ಎಂ.ನಾಗರಾಜ್, ಜಿ.ಪಂ.ಸಿಇಒ ಎಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಹಾಜರಿದ್ದರು.

---ಬಾಕ್ಸ್‌---

ಕೇಂದ್ರಕ್ಕೆ ನಿಯೋಗ

ಆನೆ ಮತ್ತು ಮಾನವರ ನಡುವಿನ ಸಂಘರ್ಷ ನಿಯಂತ್ರಣ ಕೇವಲ ರಾಜ್ಯ ಸರ್ಕಾರದ ಜವಾಬ್ದಾರಿಯಲ್ಲ. ಕೇಂದ್ರ ಸರ್ಕಾರದ ಸಹಕಾರವೂ ಬೇಕಿದೆ. ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡಾನೆ ಸಾಫ್ಟ್‌ ರಿಲೀಸ್ ಕೇಂದ್ರ ಸ್ಥಾಪಿಸಲು ಅರಣ್ಯ ಇಲಾಖೆ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿಲ್ಲ. ಈ ಬಗ್ಗೆ ಮನವಿ ಸಲ್ಲಿಸಿ ಕೇಂದ್ರ ಅರಣ್ಯ ಸಚಿವರೊಂದಿಗೆ ಚರ್ಚಿಸಲು ಜಿಲ್ಲೆಯ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಸೇರಿ ಪ್ರಮುಖರ ನಿಯೋಗ ತೆರಳೋಣ ಎಂದು ಸಚಿವ ಕೆ.ಜೆ.ಜಾರ್ಜ್‌ ಹೇಳಿದರು.

---ಬಾಕ್ಸ್‌---

ಕರಡಿ, ಹುಲಿ, ಕಾಡಾನೆ ಬೇರೆ ರಾಜ್ಯಕ್ಕೆ ಕೊಡಿ

ಇತ್ತೀಚಿನ ದಿನಗಳಲ್ಲಿ ಕಾಡಾನೆ, ಹುಲಿ, ಕರಡಿ ಸಂತತಿ ಹೆಚ್ಚಾಗುತ್ತಿದೆ. ಹಿಂದೆ ಮಠ ಮಾನ್ಯಗಳಿಗೆ ಆನೆಗಳನ್ನು ನೀಡಲಾ ಗುತ್ತಿ ತ್ತು. ಇದೀಗ ಆನೆ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ, ಕಡಿಮೆ ಕಾಡಾನೆ, ಹುಲಿ, ಕರಡಿ ಸಂತತಿ ಇರುವ ರಾಜ್ಯಗಳಿಗೆ ನಮ್ಮ ರಾಜ್ಯದ ವನ್ಯಜೀವಿಗಳನ್ನು ನೀಡಲು ಕ್ರಮ ವಹಿಸುವಂತೆ ಸೂಚಿಸಿದರು.

---ಬಾಕ್ಸ್‌---

ಬೀಟೆ ಮರ ಕಡಿದು 3ವರ್ಷವಾರದೂ ಹಣ ಇಲ್ಲ

ರೈತನೊಬ್ಬರ ಖಾಸಗಿ ಕೃಷಿ ಭೂಮಿಯಲ್ಲಿ ಸುಮಾರು 150 ವರ್ಷದ ಬೀಟೆ ಮರವನ್ನು ಅರಣ್ಯ ಇಲಾಖೆಯಿಂದ ಎಲ್ಲ ರೀತಿಯ ಅನುಮತಿ ಪಡೆದು ಅರಣ್ಯ ಇಲಾಖೆ ಡಿಪೋಗೆ ಕಡಿದು ಹಾಕಿ 3 ವರ್ಷವಾದರೂ ಹಣ ಬಿಡುಗಡೆ ಮಾಡಿಲ್ಲ. ಅರಣ್ಯ ಇಲಾಖೆ ಅಧಿಕಾರಿ ಬ್ಯಾಂಕ್‌ ಖಾತೆಗೆ ಜಮಾ ಆಗಿದ್ದರೂ ರೈತರಿಗೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ವಿಪ ಸದಸ್ಯ ಭೋಜೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಚಿಕ್ಕಮಗಳೂರು ವಿಭಾಗದ ಡಿಎಫ್‌ಓ ರಮೇಶ್‌ ಬಾಬು, ಚೆಕ್‌ ಲಿಸ್ಟ್‌ ಹಾಗೂ ಸ್ಪಷ್ಟನೆಯನ್ನು ಸಿಎಫ್‌ಒಗೆ ನೀಡಲು ಕಳುಹಿಸಲಾಗಿದೆ. ಎರಡು ದಿನದಲ್ಲಿ ಹಣ ಬಿಡುಗಡೆ ಆಗಲಿದೆ ಎಂದರು.

ಆಕ್ರೋಶಗೊಂಡ ಸಿ.ಟಿ. ರವಿ, ಮರ ಕಡಿತಲೆ ಮಾಡಿ, ಸ್ಥಳ ಪರೀಶಿಲಿಸಿ ಹರಾಜು ಹಾಕಿದ ಹಣ ಅರಣ್ಯ ಇಲಾಖೆ ಖಾತೆಗೆ ಜಮಾ ಆಗಿದೆ. ಈಗ ಚೆಕ್‌ ಲಿಸ್ಟ್‌, ಸ್ಪಷ್ಟನೆ ಕೇಳಲಾಗುತ್ತಿದೆ ಎಂದರೆ, ಈ ಅಧಿಕಾರಿಗಳಿಗೆ ಮಾನಮರ್ಯಾದೆ ಇದೆಯಾ ಎಂದು ತರಾಟೆಗೆ ತೆಗದುಕೊಂಡ ಪ್ರಸಂಗ ನಡೆಯಿತು.ಮಧ್ಯಪ್ರವೇಶಿಸಿದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಇದು ಸಾರ್ವಜನಿಕರಿಗೆ ಅಧಿಕಾರಿಗಳು ನೀಡುತ್ತಿರುವ ಕಿರುಕುಳ ಅಲ್ಲದೇ ಇನ್ನೇನು. ಈ ಬಗ್ಗೆ ಸಮಗ್ರ ವರದಿ ನೀಡಬೇಕು. ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಕೆಲಸ ಮಾಡುತ್ತಿದ್ದೀರಾ ಎಂದು ಹರಿಹಾಯ್ದರು.

---ಬಾಕ್ಸ್‌--

ಕುಡಿಯುವ ನೀರು ಯೋಜನೆಯ ಸೋಷಿಯಲ್‌ ಆಡಿಟ್‌ ಇಲ್ಲ

ನೀರಿನ ಮೂಲ ಇಲ್ಲದೇ ಕಾಮಗಾರಿ ಮಾಡಲಾಗಿದೆ. ಈ ಬಗ್ಗೆ ಸೋಷಿಯಲ್‌ ಆಡಿಟ್‌ ಮಾಡಿಸುವಂತೆ ದಿಶಾ ಸಭೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಈ ಕುರಿತು ಒಂದು ದಿನ ವಿಶೇಷ ಸಭೆ ನಡೆಸಲು ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಮಾಡಿದ ಒತ್ತಾಯಕ್ಕೆ ಸಚಿವ ಕೆ.ಜೆ.ಜಾರ್ಜ್‌ ಒಪ್ಪಿಗೆ ನೀಡಿದರು.

ಇನ್ನೂ ಜಲಜೀವನ್‌ ಮಿಷನ್‌, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೋಷಿಯಲ್‌ ಆಡಿಟ್‌ ನಡೆಸಲು ಯೋಜನೆ ಪೂರ್ಣವಾಗಬೇಕು. ಆ ನಂತರ ನಡೆಸಲಾಗುವುದು. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯ ಬೇಕು. ಹಾಗಾಗಿ, ಸದ್ಯ ಸೋಷಿಯಲ್‌ ಆಡಿಟ್‌ಗೆ ಅವಕಾಶವಿಲ್ಲ ಎಂದು ಜಿಪಂ ಸಿಇಒ ಕೀರ್ತನಾ ಸ್ಪಷ್ಟಪಡಿಸಿದರು.

--ಬಾಕ್ಸ್‌--

ಸೋಲಾರ್‌ ಪಂಪ್‌ ಗೆ ಪ್ರಸ್ತಾವನೆ ಸಲ್ಲಿಸಿ

ಗಂಗಾ ಕಲ್ಯಾಣ ಸೇರಿದಂತೆ ವಿವಿಧ ಯೋಜನೆಗಳಿಗೆ ವಿದ್ಯುತ್ ಪೂರೈಕೆಗೆ ಸಂಬಂಧಿಸಿದ ಆರ್‌ಡಿಪಿಆರ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ಇಂಧನ ಇಲಾಖೆಗೆ ಸುಮಾರು ₹12 ಸಾವಿರ ಕೋಟಿ ಬಾಕಿ ಬರಬೇಕಾಗಿದೆ. ಹೀಗಾಗಿ, ಕುಡಿಯುವ ನೀರಿನ ಯೋಜನೆಗೆ ಸೋಲಾರ್‌ ಪಂಪ್‌ ಮಾಡಿದರೆ ಹಣ ಉಳಿತಾಯವಾಗಲಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸು ವಂತೆ ಇಂಧನ ಸಚಿವರು ಜಿಪಂ ಸಿಇಒಗೆ ಸೂಚಿಸಿದರು.

---ಬಾಕ್ಸ್‌---

6 ಸಾವಿರ ಸಿಲಿಂಡರ್‌ ಕೊರತೆ

ಜಿಲ್ಲೆಯಲ್ಲಿ ಇನ್ನೂ 6 ಸಾವಿರಕ್ಕೂ ಅಧಿಕ ಗೃಹ ಬಳಕೆ ಅಡುಗೆ ಅನಿಲದ ಸಿಲಿಂಡರ್‌ ಕೊರತೆ ಇದೆ ಎಂದು ಆಹಾರ ಮತ್ತು ನಾಗರಿಕರ ಸರಬರಾಜು ಉಪ ನಿರ್ದೇಶಕ ಯೋಗಾನಂದ ತಿಳಿಸಿದ್ದಾರೆ.

ಮಧ್ಯಪ್ರಾಚ್ಯ ದೇಶದ ಯುದ್ಧ ಪರಿಸ್ಥಿತಿಯಿಂದ ಗ್ಯಾಸ್‌ ಸಿಲಿಂಡರ್‌ ಅಭಾವ ಉಂಟಾಗಿದೆ. ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಶಾಸಕ ಸಿ.ಟಿ.ರವಿ ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲೆಯಲ್ಲಿ ಸುಮಾರು 3 ಲಕ್ಷ ಗೃಹ ಬಳಕೆ ಮತ್ತು 6 ಸಾವಿರ ವಾಣಿಜ್ಯ ಬಳಕೆ ಸಿಲಿಂಡರ್‌ ನೋಂದಣಿ ಇದೆ. ಯುದ್ಧ ಆರಂಭದ ಬಳಿಕ ಗೃಹ ಬಳಕೆ ಸಿಲಿಂಡರ್‌ ಬುಕಿಂಗ್‌ ಸಂಖ್ಯೆ 10 ಸಾವಿರ ಹೆಚ್ಚಾಗಿದೆ. ಈ ಪೈಕಿ 4500 ಸಿಲಿಂಡರ್‌ ವ್ಯವಸ್ಥೆ ಮಾಡಲಾಗಿದೆ, ಇನ್ನೂ ಸುಮಾರು 6 ಸಾವಿರ ಗೃಹ ಬಳಕೆ ಸಿಲಿಂಡರ್‌ ಕೊರತೆ ಇದೆ. ಇನ್ನೂ ಶೇ.20 ರಷ್ಟು ಮಾತ್ರ ವಾಣಿಜ್ಯ ಬಳಕೆ ಸಿಲಿಂಡರ್‌ ಪೂರೈಕೆ ಆಗುತ್ತಿದೆ. ಜೇಷ್ಠತೆ ಆಧಾರದಲ್ಲಿ ವಿತರಣೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

--ಬಾಕ್ಸ್‌---

ಯಾವ ಮಾನದಂಡದಲ್ಲಿ ಬಿಪಿಎಲ್‌ ರದ್ದು?

ಜಿಲ್ಲೆಯಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಬಿಪಿಎಲ್‌ ಕಾರ್ಡ್‌ ರದ್ದಾಗಿದ್ದು, ಒಂದು ತಾಲೂಕಿನಲ್ಲಿ ಒಂದು ಸಾವಿರಕ್ಕೂ ಅಧಿಕ ರದ್ದಾಗಿವೆ. ಯಾವ ಮಾನದಂಡದಲ್ಲಿ ರದ್ದು ಪಡಿಸಲಾಗಿದೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಪ್ರಶ್ನಿಸಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕರ್ನಾಟಕದಲ್ಲಿ ಅತಿ ಹೆಚ್ಚು ಬಿಪಿಎಲ್ ಕಾರ್ಡ್ ಇವೆ. ತಲಾ ಆದಾಯ ಸೇರಿದಂತೆ ಅಭಿವೃದ್ಧಿಯ ರಾಜ್ಯದಲ್ಲಿ ಇಷ್ಟೊಂದು ಬಿಪಿಎಲ್‌ ಕಾರ್ಡ್‌ ಇರುವುದಕ್ಕೆ ಹೇಗೆ ಸಾಧ್ಯ. ಈ ಬಗ್ಗೆ ಪರಿಶೀಲನೆ ಮಾಡಿ ಅನರ್ಹರ ಕಾರ್ಡ್‌ ರದ್ದು ಪಡಿಸಲಾಗುತ್ತಿದೆ ಎಂದರು.

ಮಧ್ಯಪ್ರವೇಶಿಸಿದ ಸಿ,ಟಿ.ರವಿ, ಈ ಪ್ರಕ್ರಿಯೆಯಿಂದ ಅರ್ಹ ಫಲಾನುಭವಿಗಳಿಗೆ ತೊಂದರೆ ಆಗಬಾರದು. ಒಂದು ವೇಳೆ ಆಗಿದ್ದರೆ ಸರಿ ಪಡಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗು ಸಾವಿನ ಶಾಕ್‌ನಿಂದ ತಾಯಿಯೂ ಆತ್ಮ*ತ್ಯೆ
ಗ್ಯಾಸ್‌ಗಾಗಿ ಆಟೋ ಚಾಲಕರ ಯುದ್ಧ! - ಬಂಕ್‌ಗಳ ಮುಂದೆ ರಾತ್ರಿ ಇಡೀ ಜಾಗರಣೆ