ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ, ಲೆಕ್ಕಪತ್ರ ಇಲಾಖೆಯಲ್ಲಿನ ಸಹಾಯಕ ನಿಯಂತ್ರಕರು, ಲೆಕ್ಕಪರಿಶೋಧನಾಧಿಕಾರಿ ಹುದ್ದೆಗಳ ಪರೀಕ್ಷೆ ನಡೆಯಲಿದ್ದು, ಸುಗಮವಾಗಿ ಪರೀಕ್ಷೆಗಳು ನಡೆಯಲು ಅಗತ್ಯವಾದ ಸಕಲ ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕಚೇರಿ ಸಹಾಯಕ ಪ್ರದೀಪ್ ನಿಕ್ಕಂ ತಿಳಿಸಿದರು.ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದ ನಂತರ ತಾಲೂಕು ಕಚೇರಿಯ ಕೆಸ್ವಾನ್ ಕಚೇರಿಯಲ್ಲಿ ಪರೀಕ್ಷೆಗೆ ನಿಯೋಜಿತರಾದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಆ.11ರಂದು ಭಾನುವಾರ ಶಿವಮೊಗ್ಗದ ಸಹ್ಯಾದ್ರಿ ಕಲಾ ಹಾಗೂ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣೆ ಕಾಲೇಜು ಈ 2 ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ 10 ರಿಂದ 12 ಗಂಟೆವರೆಗೆ ಸಾಮಾನ್ಯ ಅಧ್ಯಯನ ಮತ್ತು ಮಧ್ಯಾಹ್ನ 2 ರಿಂದ 4 ಗಂಟೆವರೆಗೆ ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣೆ ವಿಷಯ ಕುರಿತು ಒಟ್ಟು 900 ಅಭ್ಯರ್ಥಿಗಳು ಉಳಿಕೆ ಮೂಲ ವೃಂದದ ಸಹಾಯಕ ನಿಯಂತ್ರಕರ 43 ಹುದ್ದೆ ಮತ್ತು ಲೆಕ್ಕ ಪರಿಶೋಧನಾಧಿಕಾರಿ 54 ಹುದ್ದೆಗಳ ಪೂರ್ವಭಾವಿ ಪರೀಕ್ಷೆ ಬರೆಯಲಿದ್ದಾರೆ. ಇಬ್ಬರು ವಿಶೇಷಚೇತನರು ಪರೀಕ್ಷೆ ಬರೆಯುತ್ತಿದ್ದು, ಅವರಿಗೆ ನಿಯಮಾನುಸಾರ ವ್ಯವಸ್ಥೆ ಮಾಡಲಾಗಿದೆ ಎಂದರು.ಪರೀಕ್ಷೆಗಳು ಪಾರದರ್ಶಕವಾಗಿ ಮತ್ತು ಸುಲಲಿತವಾಗಿ ನಡೆಯಲು ಈಗಾಗಲೇ ಪರೀಕ್ಷಾ ಕೇಂದ್ರಗಳಿಗೆ ಸ್ಥಳೀಯ ನಿರೀಕ್ಷಣಾಧಿಕಾರಿಗಳು, ಮಾರ್ಗಾಧಿಕಾರಿ ಮತ್ತು ವೀಕ್ಷಕರನ್ನು ನೇಮಿಸಲಾಗಿದೆ. ಯಾವುದೇ ಅವ್ಯವಹಾರಕ್ಕೆ ಆಸ್ಪದ ನೀಡದಂತೆ ಪಾರದರ್ಶಕವಾಗಿ ಪರೀಕ್ಷೆಗಳು ನಡೆಯಲು ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ – 2023 ರ ಕಲಂ 163 ರನ್ವಯ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ ಎಂದು ತಿಳಿಸಿದರಲ್ಲದೆ, ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ಆಸನಗಳ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಪರೀಕ್ಷೆಯ ಎಲ್ಲ ಸಿದ್ದತೆಗಳನ್ನು ಹಿಂದಿನ ದಿನವೇ ಖಾತ್ರಿಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.ಸಭೆಯಲ್ಲಿ ಜಿಲ್ಲಾ ಖಜಾನಾಧಿಕಾರಿ ಸಾವಿತ್ರಿ, ವೀಕ್ಷಕರಾದ ಡಾ.ಸಿ.ಎ.ಹಿರೇಮಠ್, ಪರೀಕ್ಷೆಗೆ ನಿಯೋಜಿಸಲಾದ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.