ಮಾಯಮುಡಿಯಲ್ಲಿ ‘ತೋಕ್ ನಮ್ಮೆ’ ಕಾರ್ಯಕ್ರಮ ಆಯೋಜನೆಗೆ ಪೂರ್ವಭಾವಿ ಸಭೆ

KannadaprabhaNewsNetwork | Updated : Oct 20 2024, 02:00 AM IST

ಸಾರಾಂಶ

ನ. 24ರಂದು ಮಾಯಮುಡಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ತೋಕ್‌ನಮ್ಮೆ ಆಯೋಜಿಸುವ ಕುರಿತು ಪೂರ್ವಭಾವಿ ಸಭೆ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಗಣ್ಯರನ್ನು ಆಹ್ವಾನಿಸಲು ನಿರ್ಧರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಜೇಸಿ ಸಂಸ್ಥೆ, ಪೊನ್ನಂಪೇಟೆ ಹಾಗೂ ಶ್ರೀ ಕಾವೇರಿ ಅಸೋಸಿಯೇಷನ್ ಮಾಯಮುಡಿ ಇವುಗಳ ಸಹಭಾಗಿತ್ವದಲ್ಲಿ ನ.24ರಂದು ಮಾಯಮುಡಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ‘ತೋಕ್‌ನಮ್ಮೆ’ಯನ್ನು ಆಯೋಜಿಸುವ ಕುರಿತು ಪೂರ್ವಭಾವಿ ಸಭೆಯು ಮಾಯಮುಡಿ ಶ್ರೀ ಕಾವೇರಿ ಅಸೋಸಿಯೇಷನ್ ಕಟ್ಟಡದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಕಾಳಪಂಡ ಟಿಪ್ಪು ಬಿದ್ದಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.

ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಮುಂದಾಳತ್ವದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾಹಿತಿ ನೀಡಿದ ಇವರು, ಕೊಡವ ಸಂಸ್ಕೃತಿಯ ಪ್ರತೀಕವಾಗಿರುವ ತೋಕ್ ಜನಾಂಗ ಬಾಂಧವರ ಆಧ್ಯಾತ್ಮಿಕ ಸಂಕೇತವಾಗಿದ್ದು ಪೂಜ್ಯನೀಯವಾಗಿರುತ್ತದೆ ಎಂದರು.

ಕೊಡವ ಸಾಹಿತ್ಯ-ಸಂಸ್ಕೃತಿಯಲ್ಲಿ ‘ತೋಕ್’ಗೆ ಉನ್ನತ ಸ್ಥಾನವಿದ್ದು, ಅಕಾಡೆಮಿ ವತಿಯಿಂದ ತೋಕ್‌ನಮ್ಮೆ ನಡೆಸುವುದು ಜನಾಂಗ ಬಾಂಧವರ ಒಗ್ಗೂಡುವಿಕೆ ಹಾಗೂ ತೋಕ್‌ನ ಮಹತ್ವದ ಬಗ್ಗೆ ಅರಿಯಲು ಸೂಕ್ತ ವೇದಿಕೆಯಾಗಿದೆ ಎಂದು ತಿಳಿಸಿದರು.

ತೋಕ್ ನಮ್ಮೆಯು ಕೇವಲ ಗುಂಡು ಹೊಡೆಯುವ ಸ್ಪರ್ಧೆ ಆಗಿರದೆ, ಇದನ್ನು ಕೊಡವ ಸಾಂಸ್ಕೃತಿಕ ಮೆರುಗಿನೊಂದಿಗೆ ದೈವೀ ಭಾವದೊಂದಿಗೆ ಬೆರೆಯುವ ಕೆಲಸವನ್ನು ಅಕಾಡೆಮಿಯಿಂದ ಮಾಡಲಾಗುವುದೆಂದರು. ‘ತೋಕ್‌ನಮ್ಮೆ’ಗೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಹಾಗೂ ಗಣ್ಯರನ್ನು ಆಹ್ವಾನಿಸಲಾಗುವುದು ಎಂದರು.

ಈ ವೇಳೆ ತೋಕ್‌ನಮ್ಮೆ ಸಮಿತಿ ಸಂಚಾಲಕ ಹಾಗೂ ಮಾಯಮುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಪಟ್ಟಿರ ಟಾಟು ಮೊಣ್ಣಪ್ಪ ಮಾತನಾಡಿ, ‘ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸಹಭಾಗಿತ್ವದಲ್ಲಿ ಇದೇ ಪ್ರಪ್ರಥಮ ಬಾರಿಗೆ ಮಾಯಮುಡಿಯಲ್ಲಿ ನಡೆಸಲು ಉದ್ದೇಶಿಸಿರುವ ‘ತೋಕ್‌ನಮ್ಮೆ’ಯನ್ನು ರಾಜ್ಯಮಟ್ಟದಲ್ಲಿ ನಡೆಸುವಂತೆ ತೀರ್ಮಾನಿಸಿದ್ದು ಎರಡು ಭಾಗಗಳಲ್ಲಿ ಆಚರಿಸಲಾಗುವುದು. ಪಾಯಿಂಟ್- 2 ಹಾಗೂ ಒಂಟಿ ನಳಿಕೆ ತೋಟತೋಕ್ ವಿಭಾಗದಲ್ಲಿ ನಡೆಸುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 30 ಸಾವಿರ, ದ್ವಿತೀಯ ಬಹುಮಾನ 20 ಸಾವಿರ ಹಾಗೂ ತೃತೀಯ ಬಹುಮಾನ 10 ಸಾವಿರ ನಗದು ಹಾಗೂ ಪಾರಿತೋಷಕಗಳನ್ನು ಎರಡೂ ವಿಭಾಗಗಳಲ್ಲಿ ಕೊಡಲಾಗುವುದು.

ಸ್ಪರ್ಧೆಯಲ್ಲಿ ಜನಾಂಗ ಭಾಂದವರು ಲಿಂಗ-ಭೇದವಿಲ್ಲದೆ ಪಾಲ್ಗೊಳ್ಳಲು ಅವಕಾಶವಿದ್ದು, ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸಕಲ ಸಿದ್ಧತೆ ಮಾಡಲಾಗುವುದು. ಇದೊಂದು ಸಾಂಸ್ಕೃತಿಕ ಮೆರುಗಿನ ಸ್ಪರ್ಧೆ ಆಗಿರುವುದರಿಂದ ಸುಮಾರು 500- 600 ಸ್ಪರ್ಧಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದ್ದು ಒಂದು ಸಾವಿರದಷ್ಟು ಜನರು ಸೇರುವ ಲಕ್ಷಣಗಳು ಕಾಣುತ್ತಿದೆ ಎಂದರು.

ಸಭೆಯಲ್ಲಿ ಅಕಾಡೆಮಿ ಸದಸ್ಯರಾದ ಚೆಪ್ಪುಡಿರ ಎಸ್.ಉತ್ತಪ್ಪ, ನಾಯಂದಿರ ಆರ್.ಶಿವಾಜಿ, ಪೊನ್ನಿರ ಯು. ಗಗನ್, ಮೊಳ್ಳೆಕುಟ್ಟಡ ದಿನು ಬೋಜಪ್ಪ ಹಾಗೂ ಅಸೋಸಿಯೇಷನ್ ಸದಸ್ಯರಾದ ಕಾಳಪಂಡ ಸಿ.ಸುಧೀರ್, ಚೆಪ್ಪುಡಿರ ಪಿ, ಅಯ್ಯಪ್ಪ, ನಾಮೆರ ಕೆ.ದೇವಯ್ಯ, ಬಾನಂಡ ಎಸ್.ಪೃಥ್ವಿ, ಆಪಟ್ಟಿರ ಸೋಮಣ್ಣ, ಅಮ್ಮತ್ತಿರ ಎಂ.ಲೀಕ್ಷಿತ್, ರಾಯ್ ಮಾದಪ್ಪ, ಚೋನಿರ ಸೋಮಣ್ಣ, ತೀತಿಮಾಡ ದೀಕ್ಷಿತ್, ಪೆಮ್ಮಂಡ ಸಿ. ಬೋಪಣ್ಣ, ಆಪಟ್ಟಿರ ಎಂ. ದೀಕ್ಷಿತ್, ಕಾಳಪಂಡ ಯು. ತಿಮ್ಮಯ್ಯ, ಸಣ್ಣುವಂಡ ಎಂ. ವಿಶ್ವನಾಥ್ ಮತ್ತಿತರರು ಹಲವು ಸಲಹೆ ನೀಡಿದರು.

Share this article