ಕನ್ನಡಪ್ರಭ ವಾರ್ತೆ ಮಂಗಳೂರು
ಭಾರತ ಮುಂದಿನ ವರ್ಷ ಮಾನವ ಸಹಿತ ಗಗನ ಯಾನ ಕೈಗೊಳ್ಳಲಿದೆ. ಅದಕ್ಕಾಗಿ ಪ್ರಾಥಮಿಕ ಹಂತದ ಸಿದ್ಧತೆಗಳು ನಡೆಯುತ್ತಿವೆ ಎಂದು ಇಸ್ರೋ ಡೆಪ್ಯೂಟಿ ಡೈರೆಕ್ಟರ್ ಸತೀಶ್ ಮಿಶ್ರಾ ಹೇಳಿದ್ದಾರೆ.ಮಂಗಳೂರಿನ ಫಿಜ್ಜಾ ಬೈ ನೆಕ್ಸಸ್ ಮಾಲ್‌ನಲ್ಲಿ ಶುಕ್ರವಾರ ಭಾರತದ ಮೊಟ್ಟ ಮೊದಲ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ವೇಳೆ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು.
ಮಾನವ ಸಹಿತ ಗಗನಯಾನಕ್ಕೆ ಸಂಬಂಧಿಸಿ ಪ್ರಾಥಮಿಕ ಕೆಲಸಗಳು ಶುರುವಾಗಿದೆ. ಅದಕ್ಕೆ ಪೂರಕ ತರಬೇತಿಗಳು, ಉಪಕರಣಗಳ ಸಿದ್ಧತೆಗಳು ನಡೆಯುತ್ತಿವೆ. ಸದ್ಯಕ್ಕೆ ಎಲ್ಲವೂ ಪ್ರಾಥಮಿಕ ಹಂತದಲ್ಲಿವೆ ಎಂದರು.ಬಾಹ್ಯಾಕಾಶ ವಿಜ್ಞಾನ ಕೇವಲ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸಂಬಂಧಿಸಿದ್ದಲ್ಲ. ಇದರಲ್ಲಿ ಕಲಾ, ವಾಣಿಜ್ಯ ಸೇರಿದಂತೆ ಎಲ್ಲ ವಿಭಾಗಗಳ ವಿದ್ಯಾರ್ಥಿಗಳೂ ತೊಡಗಿಸಿಕೊಳ್ಳಲು ಅವಕಾಶ ಇದೆ. ಯಾರು ಬೇಕಾದರೂ ಬಾಹ್ಯಾಕಾಶ ಕ್ಷೇತ್ರಕ್ಕೆ ಕೊಡುಗೆ ನೀಡಲು ಮುಕ್ತ ಅವಕಾಶ ಇದೆ. ಉತ್ತಮ ಬಾಹ್ಯಾಕಾಶ ವಿಜ್ಞಾನಿಗಳಾಗಿ ಮಾತ್ರವಲ್ಲ, ಅದಕ್ಕೆ ಸಂಬಂಧಿಸಿದ ಎಲ್ಲ ಕಾರ್ಯಗಳಲ್ಲೂ ಕೈಜೋಡಿಸಲು ಸಾಧ್ಯವಿದೆ ಎಂದರು.
ಉಪಗ್ರಹ, ರಾಕೆಟ್ ಸೇರಿದಂತೆ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಪ್ರಾಜೆಕ್ಟ್‌ಗಳನ್ನು ಶಾಲಾ ಕಾಲೇಜುಗಳು ವಿದ್ಯಾರ್ಥಿಗಳು ಇಸ್ರೋಗೆ ಸಲ್ಲಿಸಿದರೆ ಈ ಕುರಿತ ಕಾರ್ಯಕ್ರಮ ಹಮ್ಮಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಮಕ್ಕಳಲ್ಲಿ ವೈಜ್ಞಾನಿಕ ಪ್ರಜ್ಞೆ ಮೂಡಿಸುವುದು ಭಾರತದ ಅಂತರಿಕ್ಷ ವಿಜ್ಞಾನವನ್ನು ಮತ್ತಷ್ಟು ಮುಂದೆ ಸಾಗುವಂತೆ ಪ್ರೇರಣೆ ನೀಡಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಫಿಜ್ಜಾ ಬೈ ನೆಕ್ಸಸ್ ಮಾಲ್ ಸೆಂಟರ್ ಡೈರೆಕ್ಟರ್ ಅರವಿಂದ ಶ್ರೀವಾಸ್ತವ್ ಮಾತನಾಡಿ, ಆಸ್ಟ್ರೋ ಕಿಡ್ಸ್ ನಲ್ಲಿ ನಮ್ಮ ರಾಷ್ಟ್ರದ ಇಸ್ರೋ ತಯಾರಿಸಿದ, ಗಗನಕ್ಕೆ ಕಳಿಸಿಕೊಟ್ಟ ಬಾಹ್ಯಾಕಾಶ ರಾಕೆಟ್ ಗಳನ್ನು ಮತ್ತು ಸೆಟಲೈಟ್‌ಗಳನ್ನು ಸಣ್ಣ ಮಾಡೆಲ್‌ಗಳ ರೂಪದಲ್ಲಿ ನಿರ್ಮಿಸಲಾಗಿದ್ದು ಇವುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಭೂಗೋಳ ಶಾಸ್ತ್ರದ ಕುರಿತಂತೆ ಮಕ್ಕಳಲ್ಲಿ ವಿಶೇಷ ಆಸಕ್ತಿ ತರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಎಜಿಎಂ ಸುನಿಲ್ ಮಾತನಾಡಿ, ಅಗಸ್ಟ್ 25 ರವರೆಗೆ ಈ ಮಾಲ್‌ನ ಮೇಲ್ಮಹಡಿಯಲ್ಲಿ ನಡೆಯುವ ‘ಆಸ್ಟ್ರೋ ಕಿಡ್ಸ್’ ಪ್ರದರ್ಶನ ಜನಾಕರ್ಷಣೆಯ ಕೇಂದ್ರವಾಗಲಿದೆ. ಈ ಪ್ರದರ್ಶನ ಬೆಳಗ್ಗೆ 11 ರಿಂದ ರಾತ್ರಿ 9 ರ ವರೆಗೆ ಇರಲಿದೆ ಎಂದರು.ಸಾರ್ವಜನಿಕ ಸಂಪರ್ಕಾಧಿಕಾರಿ ವೇಣು ಶರ್ಮಾ, ಶ್ರೀನಿಧಿ ರಾವ್, ಅನಿಷಾ, ಉಲ್ಲಾಸ್ ಹಾಗೂ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಇದ್ದರು.