ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಪಟ್ಟಣ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗದ್ದುಗೆಗೆ ಚುನಾವಣೆ ದಿನಗಣನೆ ಆರಂಭಗೊಂಡಿದೆ. ಇತ್ತ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸದಸ್ಯರು ತೆರೆಮರೆಯಲ್ಲಿ ನಾನಾ ಕಸರತ್ತುಗಳನ್ನು ಆರಂಭಿಸಿದ್ದಾರೆ. ಇದರೊಟ್ಟಿಗೆ ಸದಸ್ಯರಿಗೆ ಪ್ರವಾಸ ಭಾಗ್ಯವೂ ಒಲಿದಿದೆ.ಒಟ್ಟು 23 ಜನ ಸಂಖ್ಯಾ ಬಲ ಹೊಂದಿರುವ ಪುರಸಭೆಯಲ್ಲಿ 15 ಕಾಂಗ್ರೆಸ್, 5 ಜೆಡಿಎಸ್, 2 ಬಿಜೆಪಿ, ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಕಾಂಗ್ರೆಸ್ಸಿನಲ್ಲಿಯೇ ಅಧ್ಯಕ್ಷ ಪಟ್ಟಕ್ಕೆ ಜಿದ್ದಾಜಿದ್ದಿ ನಡೆದಿದ್ದು, ಕಾಂಗ್ರೆಸ್ಸಿನ ಒಟ್ಟು 8 ಜನ ಮಹಿಳಾ ಸದಸ್ಯರಲ್ಲಿ ಇಬ್ಬರು ಅಧ್ಯಕ್ಷ ಸ್ಥಾನದ ಅಧಿಕಾರ ಅನುಭವಿಸಿದ್ದಾರೆ. ಇನ್ನುಳಿದ 6 ಜನರೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಇವರಲ್ಲಿಯೇ ಪೈಪೋಟಿ ಏರ್ಪಟ್ಟಿದ್ದು, ಸುಮಾರು 12 ರಿಂದ 14 ಜನ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಗುರುವಾರ 3 ತಂಡಗಳಾಗಿ ಪ್ರಯಾಣ ಬೆಳೆಸಿದ್ದಾರೆ. ಶುಕ್ರವಾರ ಮತ್ತೆ 3 ಜನ ಬೇರೆ ಬೇರೆ ಕೆಲಸಗಳ ನೆಪ ಹೇಳಿ ಅವರೂ ಪ್ರಯಾಣ ಬೆಳೆಸಿದ್ದಾರೆ. ಅಂದರೆ ಸುಮಾರು 17-18 ಜನ ಪ್ರಯಾಣದಲ್ಲಿದ್ದರೆ ಇನ್ನುಳಿದವರು ಪಟ್ಟಣದಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಸ್ಥಾಯಿ ಸಮಿತಿ ಕೊಟ್ರೆ ಜೆಡಿಎಸ್ ಬಾಹ್ಯ ಬೆಂಬಲ?:5 ಜನ ಜೆಡಿಎಸ್ ಸದಸ್ಯರಲ್ಲಿ ಮೂರು ಜನ ಮಹಿಳಾ ಸದಸ್ಯರಿದ್ದರೆ, ಇಬ್ಬರು ಪುರುಷರಿದ್ದಾರೆ. ಇವರೂ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಬಾಹ್ಯ ಬೆಂಬಲ ನೀಡುತ್ತಾರಾದರೂ ಕೆಲ ಷರತ್ತುಗಳನ್ನು ಹಾಕಿರುವುದಾಗಿ ತಿಳಿದು ಬಂದಿದೆ. ಅಂದರೆ ಸಾಮಾನ್ಯ ಮಹಿಳೆಗೆ ಮೀಸಲಿರುವ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ಸಿನಲ್ಲಿ ಯಾರನ್ನೇ ಅಧ್ಯಕ್ಷರನ್ನಾಗಿ ಮಾಡಿದರೂ ಸ್ಥಾಯಿ ಸಮಿತಿ ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಬಾಹ್ಯ ಬೆಂಬಲ ನೀಡುವುದಾಗಿ ಜೆಡಿಎಸ್ ಸದಸ್ಯರು ಬೇಡಿಕೆ ಇಟ್ಟಿರುವುದಾಗಿ ಎಂದು ಮೂಲಗಳು ತಿಳಿಸಿವೆ.ಶಾಸಕರ ಆಯ್ಕೆಯೇ ಅಂತಿಮ:
ಪ್ರವಾಸಕ್ಕೆ ತೆರಳಿರುವ ಮೂರೂ ಪಕ್ಷಗಳ ಸದಸ್ಯರಲ್ಲಿ ಎಷ್ಟೇ ಹೊಂದಾಣಿಕೆ ಇದ್ದರೂ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಅಧ್ಯಕ್ಷ ಸ್ಥಾನಕ್ಕೆ ಒಬ್ಬರನ್ನೇ ಸ್ಫರ್ಧೆಗೆ ಅವಕಾಶ ಮಾಡಿಕೊಡುವುದಂತೂ ಗ್ಯಾರಂಟಿ ಎಂಬ ಮಾತೂ ಕೇಳಿ ಬರುತ್ತಿದೆ. ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರ ಆಯ್ಕೆಯೇ ಅಂತಿಮ ಎಂಬ ಮಾತನ್ನು ಅಲ್ಲಗಳೆಯುವಂತಿಲ್ಲ.ಕಾಂಗ್ರೆಸ್ಸಿನ ಜ್ಯೋತಿ ಆಲೂರ, ಶರೀಪಾ ಮಂಗಳೂರ, ವಂದನಾ ಭಟ್ಟಡ, ವಿದ್ಯಾ ಮುರಗೋಡ, ನಾಗರತ್ನಾ ಲಕ್ಕುಂಡಿ, ರಾಜವ್ವ ಹೆಬ್ಬಳ್ಳಿ ಆಕಾಂಕ್ಷಿಗಳಾಗಿದ್ದಾರೆ. ಆದರೂ ಇವರಲ್ಲಿ ಒಬ್ಬರನ್ನು ಅಧ್ಯಕ್ಷ ಸ್ಥಾನಕ್ಕೆ ಸ್ಫರ್ಧಿಸಿದರೆ, ಜೆಡಿಎಸ್ 3 ಜನ ಸದಸ್ಯರಲ್ಲಿ ಒಬ್ಬರು ನಾಮಪತ್ರ ಸಲ್ಲಿಸುತ್ತಾರೆಂಬ ವದಂತಿಗಳೂ ಇವೆ. ದಿನ ಘೋಷಣೆಯಾಗುವ ಸಂಭವವಿದ್ದೂ, ಮೀಸಲಾತಿ ಪ್ರಕಾರ ಇರುವ ಒಬ್ಬ ಕಾಂಗ್ರೆಸ್ ಮಹಿಳಾ ಪ.ಜಾ. ಸದಸ್ಯರಿಗೆ ಉಪಾಧ್ಯಕ್ಷ ಸ್ಥಾನ ಫಿಕ್ಸ್ ಆದರೆ ಅಧ್ಯಕ್ಷ ಗದ್ದುಗೆ ಏರಲು ಆಡಳಿತಾರೂಢ ಕಾಂಗ್ರೆಸ್ ಸದಸ್ಯರಲ್ಲಿಯೇ ಜಿದ್ದಾಜಿದ್ದಿ ಏರ್ಪಟ್ಟಿದೆ.