ಹೆರಿಗೆ ಆಸ್ಪತ್ರೆ ಆರೋಗ್ಯ ಇಲಾಖೆಗೆ ಹಸ್ತಾಂತರಕ್ಕೆ ಮುನ್ನುಡಿ

KannadaprabhaNewsNetwork |  
Published : Jun 10, 2025, 01:26 AM IST
9ಎಚ್‌ಯುಬಿ21ಹಳೇಹುಬ್ಬಳ್ಳಿ ಹೆರಿಗೆ ಆಸ್ಪತ್ರೆಯ ನೂತನ ಕಟ್ಟಡಕ್ಕೆ ಭೇಟಿ ನೀಡಿ ಮೇಯರ್ ರಾಮಪ್ಪ ಬಡಿಗೇರ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ಹೆರಿಗೆ ಆಸ್ಪತ್ರೆಯನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸುವ ಕುರಿತಂತೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ ಮೂಲಕ ಬಿಜೆಪಿ- ಕಾಂಗ್ರೆಸ್‌ ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದ ಆಸ್ಪತ್ರೆಯನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸುವ ವಿವಾದ ಇತ್ಯರ್ಥದ ಹಂತಕ್ಕೆ ತಲುಪಿದಂತಾಗಿದೆ.

ಹುಬ್ಬಳ್ಳಿ: ಮೇಯರ್‌ ರಾಮಪ್ಪ ಬಡಿಗೇರ ಸೇರಿದಂತೆ ಪಾಲಿಕೆಯ ವಿವಿಧ ಪಕ್ಷಗಳ ಸದಸ್ಯರು ನಿರ್ಮಾಣ ಹಂತದಲ್ಲಿರುವ ಹಳೇಹುಬ್ಬಳ್ಳಿ ಹೆರಿಗೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಹೆರಿಗೆ ಆಸ್ಪತ್ರೆಯನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸುವ ಕುರಿತಂತೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ ಮೂಲಕ ಬಿಜೆಪಿ- ಕಾಂಗ್ರೆಸ್‌ ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದ ಆಸ್ಪತ್ರೆಯನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸುವ ವಿವಾದ ಇತ್ಯರ್ಥದ ಹಂತಕ್ಕೆ ತಲುಪಿದಂತಾಗಿದೆ.

2016-17ರಲ್ಲಿ ಹೆರಿಗೆ ಆಸ್ಪತ್ರೆ ನೆಲಸಮಗೊಳಿಸಲಾಗಿತ್ತು. ಆ ಜಾಗದಲ್ಲಿ ಹೊಸದಾಗಿ ನೂರು ಬೆಡ್‌ಗಳ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಈಗಾಗಲೇ ₹8-10 ಕೋಟಿ ವೆಚ್ಚ ಮಾಡಲಾಗಿದೆ. ಆದರೆ, ಇನ್ನೂ ಪೂರ್ಣವಾಗಿಲ್ಲ. ಅದು ಪೂರ್ಣಗೊಳ್ಳಬೇಕೆಂದರೆ ಕನಿಷ್ಠ ₹15- 20 ಕೋಟಿ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಈ ಆಸ್ಪತ್ರೆ ನಿರ್ವಹಣೆ ಪಾಲಿಕೆಯಿಂದ ಸಾಧ್ಯವಿಲ್ಲ. ಆದಕಾರಣ ಆರೋಗ್ಯ ಇಲಾಖೆಗೆ ಹಸ್ತಾಂತರಿಸುವುದು ಸೂಕ್ತ ಎಂಬ ಬೇಡಿಕೆ ಕಾಂಗ್ರೆಸ್‌ನದ್ದಾಗಿತ್ತು.

ಈ ಕುರಿತು ಸಾಮಾನ್ಯ ಸಭೆಯಲ್ಲೂ ಕಾವೇರಿದ ಚರ್ಚೆಗೆ ಕಾರಣವಾಗಿತ್ತು. ಪರಿಶೀಲನೆ ನಡೆಸಿ ಬಳಿಕವಷ್ಟೇ ಹಸ್ತಾಂತರಿಸುವುದು ಸೂಕ್ತ ಎಂದು ಸಭೆಯಲ್ಲಿ ನಿರ್ಣಯಕೈಗೊಳ್ಳಲಾಗಿತ್ತು. ಬಿಜೆಪಿ ಸದಸ್ಯರು ಪ್ರಸ್ತಾವವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದರು. ಇದು ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ವಾಗ್ವಾದಕ್ಕೆ ಹಾದಿ ಮಾಡಿಕೊಟ್ಟಿತ್ತು.

ಶಾಸಕ ಪ್ರಸಾದ ಅಬ್ಬಯ್ಯ, ಹೆರಿಗೆ ಆಸ್ಪತ್ರೆ ಹಸ್ತಾಂತರಕ್ಕೆ ಬಿಜೆಪಿ ಆಕ್ಷೇಪಿಸಿರುವುದಕ್ಕೆ ಅಸಮಾಧಾನ ಪಡಿಸಿದ್ದರು. ಪಾಲಿಕೆಯೇ ಆಸ್ಪತ್ರೆ ಆರೋಗ್ಯ ಇಲಾಖೆಗೆ ಒಪ್ಪಿಸದಿದ್ದರೆ ಕ್ಯಾಬಿನೆಟ್ ಸಭೆಯಲ್ಲಿಟ್ಟು ಹಸ್ತಾಂತರ ಮಾಡಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

ಈ ನಡುವೆ ಸೋಮವಾರ ನಿರ್ಮಾಣ ಹಂತದ ಆಸ್ಪತ್ರೆಗೆ ಮೇಯರ್ ರಾಮಪ್ಪ ಬಡಿಗೇರ ಹಾಗೂ ಇತರ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್ ರಾಮಪ್ಪ ಬಡಿಗೇರ, ಮಹಾನಗರ ಪಾಲಿಕೆಯ ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಹಳೇ ಹುಬ್ಬಳ್ಳಿಯ ಹೆರಿಗೆ ಆಸ್ಪತ್ರೆ ಕಟ್ಟಡವನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದರು.

ಆಸ್ತಿಯ ಮಾಲೀಕತ್ವ ಮತ್ತು ಆಸ್ಪತ್ರೆಯ ನಿರ್ವಹಣೆಯ ಕುರಿತಂತೆ ಚರ್ಚಿಸಲಾಗುವುದು. ಆಸ್ಪತ್ರೆಯಲ್ಲಿ ಪಾಲಿಕೆಯ ಅಸ್ತಿತ್ವದ ಕುರಿತಂತೆಯೂ ಚರ್ಚೆ ಆಗಬೇಕಿದೆ. ಈ ನಿಟ್ಟಿನಲ್ಲೇ ಚರ್ಚೆ ನಡೆಸಲಾಗುವುದು. ಕಟ್ಟಡ ಕಾಮಗಾರಿ ಅಪೂರ್ಣವಾಗಿದ್ದು, ಪೂರ್ಣ‍ವಾಗಲು ₹25 ಕೋಟಿ ಅನುದಾನ ಅಗತ್ಯವಿದೆ ಎಂದು ಕಾಮಗಾರಿ ನಿರ್ವಹಿಸುತ್ತಿರುವವರು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಹಿಂದಿನ ಪಾಲಿಕೆ ಸಭೆಯಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಅವರು ಹೆರಿಗೆ ಆಸ್ಪತ್ರೆ ಆರೋಗ್ಯ ಇಲಾಖೆಗೆ ಹಸ್ತಾಂತರಿಸುವಂತೆ ಒಂದು ಟಿಪ್ಪಣಿ ಕಳುಹಿಸಿದ್ದರು. ಅದರಲ್ಲಿ ಕಟ್ಟಡ ಯಾವ ಸ್ಥಿತಿಯಲ್ಲಿದೆ, ಕಾಮಗಾರಿ ಪೂರ್ಣಗೊಳ್ಳಲು ಎಷ್ಟು ಅನುದಾನ ಬೇಕು. ಕಾಮಗಾರಿ ಪೂರ್ಣಗೊಂಡ ಬಳಿಕ ಎಷ್ಟು ಅಧಿಕಾರಿಗಳು, ಸಿಬ್ಬಂದಿ ಮತ್ತು ಖರ್ಚು ವೆಚ್ಚ, ಬೇಕಾದ ಪರಿಕರಗಳ ಕುರಿತಂತೆ ಮಾಹಿತಿ ಇರಲಿಲ್ಲ. ಈ ವೇಳೆ ಪಾಲಿಕೆಯಲ್ಲಿ ಈ ಸಂಬಂಧ ಚರ್ಚೆ ನಡೆದಿದ್ದು, ಸದಸ್ಯರು ಕಟ್ಟಡ ಪರಿಶೀಲಿಸಿದ ಬಳಿಕ ಈ ಕುರಿತು ನಿರ್ಧಾರ ಕೈಗೊಳ್ಳಲು ಒತ್ತಾಯಿಸಿದ್ದರು. ಅದರಂತೆ ಇಂದು ಭೇಟಿ ನೀಡಿ ಪರಿಶೀಲಿಸಲಾಗಿದೆ. ಈಗಿರುವ ಸ್ಥಿತಿಯಲ್ಲೇ ಆಸ್ಪತ್ರೆ ಹಸ್ತಾಂತರಿಸಲಾಗುವುದು. ಜನಪರ ಯೋಜನೆಗಳ ಜಾರಿಯಲ್ಲಿ ಯಾವುದೇ ರೀತಿಯ ರಾಜಕೀಯ ಮಾಡುವುದಿಲ್ಲ ಎಂದರು.

ಈ ವೇಳೆ ಉಪಮೇಯರ್‌ ದುರ್ಗಮ್ಮ ಬಿಜವಾಡ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ, ಸದಸ್ಯರಾದ ಚಂದ್ರಶೇಖರ ಮನಗುಂಡಿ, ನಜೀರ್‌ ಹೊನ್ಯಾಳ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು